
ಹುಲಸೂರ: ಮನುಷ್ಯನ ಜೀವನಕ್ಕೆ ಧರ್ಮವೇ ಶಾಶ್ವತ ನಂದಾದೀಪವಾಗಿದ್ದು, ಬದುಕನ್ನು ಶುದ್ಧ ಹಾಗೂ ಸುಂದರಗೊಳಿಸುವಲ್ಲಿ ಗುರು ಕಾರುಣ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿಯ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಮಂಗಳವಾರ ಭಾಲ್ಕಿ ತಾಲ್ಲೂಕಿನ ಮೇಹಕರ ಹಿರೇಮಠದಲ್ಲಿ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಅಗತ್ಯವಾಗಿದ್ದು, ಮೌಲ್ಯಾಧಾರಿತ ಜೀವನಕ್ಕೆ ಧರ್ಮಾಚರಣೆ ಅನಿವಾರ್ಯ ಎಂದು ಹೇಳಿದರು. ಮಾನವನನ್ನು ಪರಿಪೂರ್ಣತೆಯತ್ತ ಕರೆದೊಯ್ಯುವುದೇ ನಿಜವಾದ ಧರ್ಮ. ಹಣ ಮಾನವೀಯತೆಯನ್ನು ಮರೆಸಿದರೆ, ಹಸಿವು ಬದುಕಿನ ಪಾಠ ಕಲಿಸುತ್ತದೆ’ ಎಂದರು.
ಮೆಹಕರ ಕಟ್ಟಿಮನಿ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿನ ಮಠ–ಪೀಠಗಳು ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದ ಬೆಳೆಸುವ ಕಾರ್ಯ ಮಾಡುತ್ತಿವೆ. ದೇವರನ್ನು ಮಾನವ ಬುದ್ಧಿ ಅಥವಾ ವಿಜ್ಞಾನದಿಂದ ಅಳೆಯಲು ಸಾಧ್ಯವಿಲ್ಲ. ಭಕ್ತಿ, ಶ್ರದ್ಧೆ ಹಾಗೂ ಕಾಯಕದಲ್ಲಿ ಶ್ರಮವಿಲ್ಲದೆ ಜೀವನ ಸಾರ್ಥಕವಾಗದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಸಮಾರಂಭದಲ್ಲಿ ಆಗಮಿಸಿದ್ದ ಸಕಲ ಭಕ್ತರಿಗೆ ಅನ್ನದಾಸೋಹ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.