ಬಸವಕಲ್ಯಾಣ: ಕಲ್ಯಾಣ ನಾಡಿನ ಗ್ರಾಮೀಣ ಜನಪದ ಕಲಾವೃಂದದಿಂದ ನಗರದ ತ್ರಿಪುರಾಂತ ಗವಿಮಠದಲ್ಲಿ ಸಂಗೀತದ ಪ್ರಸ್ತುತಿ ಹಾಗೂ ಜನಪದ ಕಲಾ ಪ್ರದರ್ಶನದೊಂದಿಗೆ ಗುರುಪೂರ್ಣಿಮೆ ಅಚರಿಸಿ ಗುರುಸೇವೆಗೈಯಲಾಯಿತು.
ಸಾನ್ನಿಧ್ಯ ವಹಿಸಿದ್ದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಶಿವಪಥವನರಿವಡೆ ಗುರುಪಥವೇ ಮೊದಲು ಎನ್ನುವಂತೆ ಸನಾತನ ಧರ್ಮದಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ವ್ಯಕ್ತಿಯ ಸುಖ ಶಾಂತಿಗಾಗಿ ಗುರುವಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಬೇಕಾಗುತ್ತದೆ’ ಎಂದರು.
ಕಲ್ಯಾಣ ನಾಡಿನ ಜನಪದ ಕಲಾವೃಂದದ ಕಾರ್ಯದರ್ಶಿ ವೀರಶೆಟ್ಟಿ ಮಲಶೆಟ್ಟಿ ಬೇಲೂರ ಮಾತನಾಡಿ, ‘ಕಲಾವಿದರಿಗೆ ಕಲಾ ಪ್ರದರ್ಶನದೊಂದಿಗೆ ಗುರುಸೇವೆ ಮಾಡುವ ಭಾಗ್ಯ ದೊರೆತಿರುವುದಕ್ಕೆ ಸಂತಸವಾಗಿದೆ. ಹರ ಮುನಿದರೆ ಗುರು ಕಾಯುವನು ಎನ್ನಲಾಗುತ್ತದೆ. ಈ ಕಾರಣ ಗುರಿ ತಲುಪಬೇಕಾದರೆ ಗುರುವಿನ ಮಾರ್ಗದರ್ಶನ ಅಗತ್ಯ’ ಎಂದರು.
ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ, ನಗರಸಭೆ ಆಯುಕ್ತ ರಾಜೀವ ಬಣಕಾರ್, ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ, ವಿಠಲರೆಡ್ಡಿ, ಪಂಚಯ್ಯಸ್ವಾಮಿ ಮಾತನಾಡಿದರು. ಸಿದ್ದು ಉಳ್ಳೆ ದಂಪತಿಯಿಂದ ಶಿವಾಚಾರ್ಯರ ವಿಶೇಷ ಪೂಜೆ ನೆರವೆರಿಸಲಾಯಿತು.
ಕಲಾ ವೃಂದದ ಅಧ್ಯಕ್ಷ ದಿಲೀಪಕುಮಾರ ದೇಸಾಯಿ ಗದ್ಲೇಗಾಂವ, ಖಜಾಂಚಿ ಸೂರ್ಯಕಾಂತ ಬಿರಾದಾರ ಖಾನಾಪುರ, ಶರಣಪ್ಪ ಜಮಾದಾರ ಸುಂಠಾಣ, ವಿಠಲ್ ಡೋಮೆ ಏಕಲೂರ, ಬಸವರಾಜ ಕಣಜೆ ಮುಡಬಿ ಸಂಗೀತ ಪ್ರಸ್ತುತಪಡಿಸಿದರು. ಬಸವಂತಪ್ಪ ಲವಾರೆ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ, ಮಲ್ಲಿಕಾರ್ಜುನ ಆಲಗೂಡೆ, ಸುಭಾಷ ಮಂಠಾಳೆ, ರಾಜಪ್ಪ ಹಲಿಂಗೆ ಬೇಲೂರ, ಶಾಮಸುಂದರ ಗುಂಡೂರೆ ಉಪಸ್ಥಿತರಿದ್ದರು.
ವಿವಿಧ ಕಲಾ ತಂಡದವರು ಪಾಲ್ಗೊಂಡು ಕೋಲಾಟ ಭಜನೆ ತತ್ವಪದ ಜನಪದಗೀತೆ ಹಾಡಿದರು. ಮಹಿಳೆಯರು ಮತ್ತು ಕಲಾವಿದರು ಒಂದೇ ಬಣ್ಣದ ಬಟ್ಟೆ ಧರಿಸಿದ್ದರಿಂದ ಹಾಗೂ ಗುರುಪೂಜೆ ಸಮಯದಲ್ಲಿ ಸಂಗೀತ ಪ್ರಸ್ತುತಪಡಿಸಿದ್ದರಿಂದ ಕಾರ್ಯಕ್ರಮದ ಮೆರುಗು ಹೆಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.