ADVERTISEMENT

ಬಸವಾದಿ ಶರಣರ ಸಂದೇಶ ಪಸರಿಸಿದ ಕೀರ್ತಿ ಹರ್ಡೇಕರ್‌ಗೆ: ಸಾಹಿತಿ ದೇವಿದಾಸ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:18 IST
Last Updated 10 ಫೆಬ್ರುವರಿ 2026, 7:18 IST
ವಚನಾಮೃತ ಕನ್ನಡ ಸಂಘದಿಂದ ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಉದ್ಘಾಟಿಸಿದರು
ವಚನಾಮೃತ ಕನ್ನಡ ಸಂಘದಿಂದ ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಉದ್ಘಾಟಿಸಿದರು   

ಬೀದರ್‌: ‘ಬಸವಾದಿ ಶರಣರ ಸಂದೇಶಗಳನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಹರ್ಡೇಕರ್‌ ಮಂಜಪ್ಪನವರಿಗೆ ಸಲ್ಲುತ್ತದೆ’ ಎಂದು ಸಾಹಿತಿ ದೇವಿದಾಸ್‌ ಜೋಶಿ ತಿಳಿಸಿದರು.

ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹರ್ಡೇಕರ್‌ ಮಂಜಪ್ಪನವರ ಕುರಿತ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಂಜಪ್ಪನವರು ಏಳನೇ ತರಗತಿಯಲ್ಲಿ ರ‍್ಯಾಂಕ್ ಪಡೆದು, ಅದೇ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಸಂಬಳ ಪಡೆದು ಸುಮ್ಮನೆ ಕೂರದೆ ಜನಜಾಗೃತಿಗಾಗಿ ಹಾಗೂ ಜನರಲ್ಲಿ ರಾಷ್ಟ್ರಾಭಿಮಾನ ಮೂಡಿಸಲು ಶ್ರಮಿಸಿದರು. ಧನುರ್ಧಾರಿ, ಖಾದಿ ವಿಜಯ, ಉದ್ಯೋಗ, ಶರಣ ಸಂದೇಶ ಎಂಬ ನಾಲ್ಕು ಪತ್ರಿಕೆಗಳು ತೆಗೆದು ಕನ್ನಡ ಸಾಹಿತ್ಯಕ್ಕೆ ದೊಡ್ಡ ಕಾಣಿಕೆ ನೀಡಿದ್ದಾರೆ
ಎಂದು ಹೇಳಿದರು.

ADVERTISEMENT

ಒಟ್ಟು 84 ಕೃತಿಗಳನ್ನು ರಚಿಸಿದ ಮಂಜಪ್ಪನವರು ಅದರಲ್ಲಿ 21 ಕೃತಿಗಳು ವಚನಗಳ ಅರ್ಥ ವಿವರಣೆಗಳನ್ನು ಒಳಗೊಂಡಿವೆ. ಮಂಜಪ್ಪನವರ ತಾಯಿ ಮಂಜಮ್ಮನವರು ಮಗನಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ಬಸವಣ್ಣನವರು ದಯೆಯಿಂದ ಕೂಡಿದ ಧರ್ಮದ ದಾರಿಯನ್ನು ಜಗತ್ತಿಗೆ ತೋರಿಸಿದ ಮಹಾ ಮಾನವತಾವಾದಿ. ವಚನ ಎಂದರೆ ಪ್ರತಿಜ್ಞೆ, ಆತ್ಮ ಸಾಕ್ಷಿ ಮಾತು. ವಚನಗಳು ಅಂತರಂಗದ ನಿವೇದೆನೆಗಳಾಗಿವೆ ಎಂದು ಹೇಳಿದರು. 

ಸಾಹಿತಿ ಶಶಿಕಲಾ ವಸ್ತ್ರದ ಮಾತನಾಡಿ, ಶರಣರು ಬಳಸಿದ್ದು ಕರುಳಿನ ಕನ್ನಡ ಭಾಷೆ. ಶರಣರ ವಿಚಾರಗಳನ್ನು ಓದಿಕೊಂಡು ನಮ್ಮ ಅಂತರಂಗ ಪರೀಕ್ಷಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ಸೇರಿದಂತೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡಾಗ ನಾವು ಮನುಷ್ಯರೆನಿಸಿಕೊಳ್ಳುತ್ತೇವೆ ಎಂದರು.

ರವೀಂದ್ರ ನಂಜವಾಡಕರ್ ಮಾತನಾಡಿ, ಮನುಷ್ಯ ಯಾವುದೇ ಕೆಲಸ ಮಾಡಲಿ ಪ್ರತಿ ಫಲಾಪೇಕ್ಷೆ ಇರಬಾರದು. ಶರಣರ ವಿಚಾರಗಳು ಬಹಳ ಶ್ರೇಷ್ಠ ವಿಚಾರಗಳಾಗಿವೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಏಪ್ರಿಲ್ ತಿಂಗಳಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ಎಲ್ಲರೂ ಸಹಕರಿಸಬೇಕೆಂದು ಕೋರಿದರು.

ಶಾಮ ನೆಲವಾಡೆಯವರು ಸ್ವಾಗತಿಸಿದರೆ, ಬಸವರಾಜ ಬಿರಾದಾರ ನಿರೂಪಿಸಿದರು. ಮಾಣಿಕ್‌ ನೇಳಗೆ ವಂದಿಸಿದರು. ಹಿರಿಯ ಗಾಯಕ ಶಂಭುಲಿಂಗ ವಾಲದೊಡ್ಡಿ ವಚನ ಗಾಯನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.