ADVERTISEMENT

ಬದಲಾದ ಜೀವನಶೈಲಿ; ಹೃದಯಾಘಾತ ಹೆಚ್ಚಳ: ಡಾ. ನಿತಿನ್‌ ಗುದಗೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:59 IST
Last Updated 6 ಜುಲೈ 2025, 5:59 IST
ಡಾ. ವಿ.ವಿ. ನಾಗರಾಜ್‌
ಡಾ. ವಿ.ವಿ. ನಾಗರಾಜ್‌   

ಬೀದರ್‌: ‘ಜನರ ಜೀವನಶೈಲಿಯಲ್ಲಿ ಬದಲಾವಣೆ ಆಗಿರುವುದಕ್ಕೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗಿದೆ’ ಎಂದು ಕಾರ್ಡಿಯೊಲಜಿಸ್ಟ್‌ ಡಾ. ನಿತಿನ್‌ ಗುದಗೆ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ವಯಸ್ಸಾದವರಲ್ಲಿ ಈ ಪ್ರಮಾಣ ಹೆಚ್ಚಿತ್ತು. ಈಗ ಯುವಕರಲ್ಲೂ ಕಾಣಿಸಿಕೊಂಡಿದೆ. ವಯಸ್ಸಾದವರೇ ಕಿರಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹೇಳಿದರು.

ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಿದೆ. ಆರ್ಥಿಕ ಒತ್ತಡ, ಕುಟುಂಬದ ಒತ್ತಡ, ತನ್ನ ವೃತ್ತಿಯಲ್ಲಿ ಅತ್ಯುತ್ತಮವಾದುದ್ದನ್ನು ಸಾಧಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್‌ನಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ, ಎರಡು ಗಂಟೆಗೂ ಹೆಚ್ಚು ಸಮಯ ಮೊಬೈಲ್‌ ಅಥವಾ ಟಿವಿ ಪರದೆ ನೋಡುತ್ತ ಕೂರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.

ADVERTISEMENT

ಮನೆಯ ಆಹಾರ ತೊರೆದು ಹೊರಗಿನ ಜಂಕ್‌ಫುಡ್‌, ಕರಿದ ಪದಾರ್ಥಗಳನ್ನು ಹೆಚ್ಚಿಗೆ ಸೇವಿಸುತ್ತಿದ್ದೇವೆ. ಕುಟುಂಬದ ಸದಸ್ಯರೊಂದಿಗೆ ನಗುನಗುತ್ತ ಕಾಲ ಕಳೆಯುವುದನ್ನು ಮರೆತಿದ್ದೇವೆ. ದೈಹಿಕ ಚಟುವಟಿಕೆ ಬಹಳ ಕಡಿಮೆ ಆಗಿದೆ. ಆದಕಾರಣ ರೋಗಗಳನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ವರ್ಷದಲ್ಲೊಮ್ಮೆ ‘ಹೆಲ್ತ್‌ ಆ್ಯನಿವರ್ಸರಿ’ ಹೆಸರಿನಲ್ಲಿ ಕುಟುಂಬದ ಎಲ್ಲ ಸದಸ್ಯರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭದಲ್ಲಿ ರೋಗ ಪತ್ತೆಯಾದರೆ ಬೇರು ಸಮೇತ ಕಿತ್ತು ಹಾಕಬಹುದು ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘ ಬೀದರ್‌ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಕೋಟೆ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಕನಿಷ್ಠ 45 ನಿಮಿಷ ಪಿಟಿ ಕ್ಲಾಸ್‌ ಮೀಸಲಿಡಬೇಕು. ಆಟದ ಮೈದಾನ, ಆಟದ ಪರಿಕರಗಳು ಇರುವ ಶಾಲಾ–ಕಾಲೇಜುಗಳಿಗೆ ಸರ್ಕಾರ ಅನುಮತಿ ಕೊಡಬೇಕು. ದೈಹಿಕ ಶಿಕ್ಷಣ ಪಠ್ಯದ ಭಾಗವಾಗಬೇಕು. ಈ ನಿಟ್ಟಿನಲ್ಲಿ ಐಎಮ್‌ಎ ಕೂಡ ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಹೇಳಿದರು.

ಹೃದಯ ರೋಗಕ್ಕೆ ಯಾರೂ ಅನಗತ್ಯ ಭಯಪಡುವ ಅಗತ್ಯವಿಲ್ಲ. ಏನಾದರೂ ಸಮಸ್ಯೆ ಎದುರಾದರೆ ತಕ್ಷಣವೇ ಆಸ್ಪತ್ರೆಗೆ ಬರಬೇಕು. ಬೀದರ್‌ನಲ್ಲಿ ಸದ್ಯ ಐದು ಕ್ಯಾಥ್‌ಲ್ಯಾಬ್‌ಗಳು ಕೆಲಸ ನಿರ್ವಹಿಸುತ್ತಿವೆ. ಬ್ರಿಮ್ಸ್‌ನಲ್ಲೂ ಶೀಘ್ರದಲ್ಲೇ ಕ್ಯಾಥ್‌ಲ್ಯಾಬ್‌ ಕೆಲಸ ಆರಂಭಿಸಲಿದೆ ಎಂದರು.

ಡಾ. ಸಂಜೀವ ರೆಡ್ಡಿ, ಡಾ. ಶರದ್‌ ಮಸೂದೆ, ಡಾ. ಮಹೇಶ ತೊಂಡ್ರೆ, ಡಾ. ಸಂತೋಷ ಇದ್ದರು.

ಹೃದಯ ಸಂಬಂಧಿ ಕಾಯಿಲೆಗಳಿಂದ ಹೆಚ್ಚಿನ ಜನ ಸಾವನ್ನಪ್ಪುತ್ತಿರುವುದರ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯವಾಗಿ ಇರಬಹುದು
ಡಾ. ವಿಜಯಕುಮಾರ ಕೋಟೆ ಅಧ್ಯಕ್ಷ ಭಾರತೀಯ ವೈದ್ಯಕೀಯ ಸಂಘ
ಬೀದರ್‌ನಲ್ಲಿ ‘ಪ್ರೈಮರಿ ಆ್ಯಂಜಿಯೊಪ್ಲಾಸ್ಟಿ’ ಸೌಕರ್ಯ ಇದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಲ್ಲ. ಹೃದಯದ ಸಮಸ್ಯೆ ಕಂಡು ಬಂದರೆ ತಕ್ಷಣವೇ ಈ ಚಿಕಿತ್ಸೆ ಪಡೆಯಬೇಕು
ಡಾ. ನಿತಿನ್‌ ಗುದಗೆ ಕಾರ್ಡಿಯೊಲಜಿಸ್ಟ್‌
‘ಮಕ್ಕಳಿಗೆ ಹೋಮ್‌ ವರ್ಕ್‌ ಒತ್ತಡ’
‘ಇತ್ತೀಚಿನ ವರ್ಷಗಳಲ್ಲಿ ಒತ್ತಡ ಎನ್ನುವುದು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಎರಡ್ಮೂರು ವರ್ಷದ ಮಕ್ಕಳಿದ್ದಾಗಲೇ ಒತ್ತಡ ಹಾಕುತ್ತಿದ್ದೇವೆ. ಕಿಂಡರ್‌ ಗಾರ್ಡನ್‌ಗೆ ಮಕ್ಕಳನ್ನು ಆಟ ಆಡಿಸಲು ಕಳಿಸುತ್ತಿಲ್ಲ. ಬದಲಾಗಿ ‘ರೈಮ್ಸ್‌’ ಓದಿಸಲು ಕಳಿಸುತ್ತಿದ್ದೇವೆ. ಮಕ್ಕಳ ಹೆಚ್ಚಿನ ಸಮಯ ‘ಹೋಮ್‌ ವರ್ಕ್‌’ ಮಾಡುವುದರಲ್ಲೇ ಕಳೆದು ಹೋಗುತ್ತಿದೆ. ಅವರ ಸಹಜ ಬೆಳವಣಿಗೆ ಆಗುತ್ತಿಲ್ಲ’ ಎಂದು ಡಾ. ವಿ.ವಿ. ನಾಗರಾಜ್‌ ತಿಳಿಸಿದರು. ಜಂಕ್‌ಫುಡ್‌ ಫಾಸ್ಟ್‌ಫುಡ್‌ ಎಲ್ಲರದರಲ್ಲೂ ಟೇಸ್ಟಿಂಗ್‌ ಪೌಡರ್‌ ಹಾಕುತ್ತಿದ್ದಾರೆ. ಇದು ವಿಷಕಾರಿ ರಸಾಯನಿಕ ಅಂಶ ಹೊಂದಿದೆ. ಅದು ಹೊಟ್ಟೆ ಸೇರಿಕೊಳ್ಳುತ್ತಿರುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಕೂಡ ಪ್ರಮುಖ ಕಾರಣ ಎಂದರು.
‘ನಾರಾಯಣಮೂರ್ತಿ ಸುಬ್ರಹ್ಮಣ್ಯ ಹೇಳಿಕೆ ಖಂಡನಾರ್ಹ’
‘ಎಲ್‌ ಅಂಡ್‌ ಟಿ ಮುಖ್ಯಸ್ಥ ಸುಬ್ರಹ್ಮಣ್ಯ ಅವರು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದರೆ ಇನ್‌ಫೋಸಿಸ್‌ನ ಎನ್‌.ಆರ್‌. ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಕೊಟ್ಟಿರುವ ಹೇಳಿಕೆ ಖಂಡನಾರ್ಹ. ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ಕೂಡ ಇದನ್ನು ಖಂಡಿಸಿದೆ’ ಎಂದು ಫಿಜಿಶಿಯನ್‌ ಡಾ. ಸಚಿನ್‌ ಗುದಗೆ ತಿಳಿಸಿದರು. ‘ಈಗಾಗಲೇ ಹೆಚ್ಚಿನ ಒತ್ತಡದಲ್ಲಿ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹದ್ದರಲ್ಲಿ ದೊಡ್ಡ ಸ್ಥಾನದಲ್ಲಿ ಕುಳಿತಿರುವವರು ಈ ರೀತಿ ಮಾತನಾಡಿರುವುದು ಸರಿಯಲ್ಲ. ಜನರ ಆರೋಗ್ಯ ಬಹಳ ಮುಖ್ಯವಾದುದು. ಒಂದೇ ಜಾಗದಲ್ಲಿ ಗಂಟೆಗಟ್ಟಲೇ ಕುಳಿತು ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.