ಕಮಲನಗರ ತಾಲ್ಲೂಕಿನ ಬಸನಾಳ-ಕೋರಿಯಾಳ ಗ್ರಾಮದ ಮಧ್ಯದ ಸೇತುವೆ ಜಲಾವೃತ್ತಗೊಂಡಿದೆ
ಕಮಲನಗರ: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಶನಿವಾರ ಬೆಳಿಗ್ಗೆ ಕೂಡಾ ಮಳೆ ಸುರಿಯುತ್ತಿರುವ ಕಾರಣ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಪರದಾಡಿದರು.
ಸೇತುವೆ ಜಾಲಾವೃತ: ಬಸನಾಳ-ಕೋರಿಯಾಳ ಮಧ್ಯದ ಸೇತುವೆ ಮೇಲಿಂದ ಶನಿವಾರ ಬೆಳಿಗ್ಗೆ ನೀರು ಹರಿದು ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ತೊಂದರೆಯಾಗಿದೆ.
ಸೇತುವೆ ಕೆಳಸ್ಥರದಲ್ಲಿದ್ದ ಕಾರಣ ಸ್ವಲ್ಪ ಮಳೆ ಬಿದ್ದರೂ ಸೇತುವೆ ಮೇಲಿಂದ ನೀರು ಹರಿದು ಸೇತುವೆ ಅಕ್ಕ-ಪಕ್ಕದ ಜಮೀನುಗಳಿಗೆ ನುಗ್ಗಿ ರೈತರ ಹೊಲದಲ್ಲಿನ ಬೆಳೆ ಜಲಾವೃತಗೊಂಡು ನಷ್ಟವುಂಟಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ಸೇತುವೆ ಎತ್ತರಿಸಬೇಕು ಎಂದು ರೈತ ಸದಾನಂದ ಪಾಟೀಲ್ ಬಸನಾಳ ಒತ್ತಾಯಿಸಿದ್ದಾರೆ.
ಮನೆಗೋಡೆ ಕುಸಿತ: ಬಾಲೂರ(ಕೆ) ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ರಮಾಲಬಾಯಿ ಸುಭಾಷ ಕದಮ ಎನ್ನುವವರ ಮನೆ ಗೋಡೆ ಕುಸಿದಿದೆ. ಶ್ರೀರಂಗ ಧೊಂಡಿಬಾ ಚ್ಯಾಂಡೇಶ್ವರಿ ಎನ್ನುವವರ ಮನೆಯ ಮುಂಭಾಗದಲ್ಲಿಯ ವಿದ್ಯುತ್ ಕಂಬ ಮುರಿದು ಬಿದ್ದು, ಶನಿವಾರ ನಸುಕಿನ ಜಾವದಿಂದ ಮಧ್ಯಾಹ್ನದವರೆಗೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮಧ್ಯಾಹ್ನದ ನಂತರ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಆಗಿದ್ದು, ಮುರಿದ ವಿದ್ಯುತ್ ಕಂಬದಿಂದ ಕನೆಕ್ಷನ್ ಪಡೆದ ಇನ್ನೂ ಕೆಲ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.