ಔರಾದ್: ಮಹಾರಾಷ್ಟ್ರದ ವಜ್ಜರ್ ಗಡಿಯಿಂದ ಔರಾದ್‍ವರೆಗೆ ಹೆದ್ದಾರಿ ನಿರ್ಮಿಸಲು ಅನುಮೋದನೆ ನೀಡುವಂತೆ ಶಾಸಕ ಪ್ರಭು ಚವಾಣ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.
ಶಾಸಕರು ಶುಕ್ರವಾರ ದೆಹಲಿಯಲ್ಲಿ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಕುರಿತು ಬೇಡಿಕೆ ಸಲ್ಲಿಸಿದ್ದಾರೆ.
‘ಮಹಾರಾಷ್ಟ್ರ ರಾಜ್ಯದ ಹಣೆಗಾಂವ್, ಮುಖೇಡ್ ಮೂಲಕ ನಾಂದೇಡ್‍ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 161(ಎ) ನಾನು ಪ್ರತಿನಿಧಿಸುವ ಔರಾದ್ ಮತಕ್ಷೇತ್ರಕ್ಕೆ ಹೊಂದಿಕೊಂಡಿದೆ. ಈ ಹೆದ್ದಾರಿ ಹಾದು ಹೋಗುವ ಮಹಾರಾಷ್ಟ್ರದ ವಜ್ಜರ್ ಬಾರ್ಡರ್‌ನಿಂದ ಔರಾದ್‌ವರೆಗೆ ಕೇವಲ 10 ಕಿ.ಮೀ. ಇದೆ. ಎರಡೂ ರಾಜ್ಯಗಳಿಗೆ ಸಂಪರ್ಕಿಸುವ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದರೆ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ತಮ್ಮ ಬೇಡಿಕೆಗೆ ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದ್ದಾರೆ.
ಬ್ಯಾರೇಜ್‌ಗೆ ಅನುದಾನ ಮನವಿ: ಬೀದರ್ ಜಿಲ್ಲೆಯ ಗಡಿ ಭಾಗದಲ್ಲಿ ಕೆರೆ, ಬ್ಯಾರೇಜ್ ನಿರ್ಮಿಸಲು ಅನುದಾನ ಕೊಡುವಂತೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಶಾಸಕ ಚವಾಣ್ ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಔರಾದ್ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಲ್ಲದೆ ರೈತರು ಹಾಗೂ ಸಾರ್ವಜನಿಕರು ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಬರ ಪರಿಸ್ಥಿತಿ ಸಾಮಾನ್ಯವಾಗಿದೆ. ಹೀಗಾಗಿ ಇಲ್ಲಿ ಕೆರೆ, ಬ್ಯಾರೇಜ್, ಬಾಂದಾರ ನಿರ್ಮಿಸುವುದು ಅಗತ್ಯವಾಗಿದೆ. ಈ ಸಂಬಂಧ ಈಗಾಗಲೇ ₹ 114.64 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಕೊಡುವಂತೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.