ADVERTISEMENT

ಮನೆ ಸೇರಿದ ತಾಯಿ,ಶಿಕ್ಷಕಿ

ಜೈಲಿನಿಂದ ಬಿಡುಗಡೆಗೆ ಸಂಜೆವರೆಗೂ ನಡೆದ ಕಾನೂನು ಪ್ರಕ್ರಿಯೆ; ಖುಷಿಯಾದ ಮಕ್ಕಳು

ಚಂದ್ರಕಾಂತ ಮಸಾನಿ
Published 16 ಫೆಬ್ರುವರಿ 2020, 9:10 IST
Last Updated 16 ಫೆಬ್ರುವರಿ 2020, 9:10 IST
ಬೀದರ್‌ ಜೈಲಿನಿಂದ ಹೊರಗೆ ಬಂದ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಪಾಲಕಿ ನಜಮುನ್ನೀಸಾ
ಬೀದರ್‌ ಜೈಲಿನಿಂದ ಹೊರಗೆ ಬಂದ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಪಾಲಕಿ ನಜಮುನ್ನೀಸಾ   

ಬೀದರ್‌: ಫೆಬ್ರುವರಿ 14 ಬಹಳಷ್ಟು ಜನರಿಗೆ ಪ್ರೇಮಿಗಳ ದಿನಾಚರಣೆ ಆಗಿರಬಹುದು. ಆದರೆ, ದೇಶದ್ರೋಹದ ಆರೋಪದಡಿ ಎರಡು ವಾರ ಜೈಲಿನಲ್ಲಿ ಕಳೆದ ತಾಯಂದಿರಿಬ್ಬರ ಪಾಲಿಗೆ ಅದು ಅಕ್ಷರಶಃ ಶುಭ ಶುಕ್ರವಾರ. ಕಾರಣ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶರು
ಇಬ್ಬರಿಗೂ ಜಾಮೀನು ನೀಡಿದ ದಿನ. ಶನಿವಾರ ಇಬ್ಬರೂ ತಾಯಂದಿರು ಮನೆ ಸೇರಿದಾಗ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ.

ಶಾಹೀನ್‌ ಶಾಲೆಯಲ್ಲಿ ನಾಟಕದ ಸಂದರ್ಭದಲ್ಲಿ ವಿವಾದಾತ್ಮಕ ಶಬ್ದ ಬಳಸಿದ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ತಾಯಿ ನಜಮುನ್ನೀಸಾ ಅವರಿಗೆ ಮಗಳೇ ಸರ್ವಸ್ವ. ತಂದೆ ನಿಧನರಾದ ಕಾರಣ ಬಾಲಕಿಗೂ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಬಾಲಕಿ ವಾಸವಾಗಿರುವ ಶಿಕ್ಷಕಿಯ ಮನೆಗೆ ನಜಮುನ್ನೀಸಾ ಹೋಗುತ್ತಿದ್ದಂತೆಯೇ ಬಾಲಕಿ ಅವರನ್ನು ಬಿಗಿದಪ್ಪಿಕೊಂಡು ಮತ್ತೆ ನನ್ನನ್ನು ಬಿಟ್ಟು ಹೋಗಬೇಡ ಎಂದು ಕಣ್ಣೀರು ಹಾಕಿದಳು.

ಮಗಳ ಕಣ್ಣಲ್ಲಿ ನೀರು ನೋಡಿ ತಾಯಿಗೂ ದುಃಖ ಉಮ್ಮಳಿಸಿ ಬಂದಿತು. ತಾಯಿ–ಮಗಳ ಪ್ರೀತಿಯನ್ನು ಕಂಡು ನೆರೆ ಹೊರೆಯವರ ಕಣ್ಣುಗಳೂ ತೇವಗೊಂಡವು.

ADVERTISEMENT

‘ಎರಡು ವಾರ ಯಾರ್‍ಯಾರೋ ಬಂದು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಸಂದರ್ಭದಲ್ಲಿ ಏನು ಹೇಳಬೇಕು ಎನ್ನುವುದು ನನಗೆ ಗೊತ್ತೇ ಆಗುತ್ತಿರಲಿಲ್ಲ. ಅಮ್ಮ ಮನೆಗೆ ಬಂದ ನಂತರ ನನಗೆ ಬಹಳ ಖುಷಿಯಾಗಿದೆ’ ಎಂದು ಬಾಲಕಿ ನಗೆ ಬೀರಿದಳು.
ದೇಶದ್ರೋಹ ಪ್ರಕರಣದಡಿ ಬಂಧಿಸಲಾದ ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಅವರನ್ನು ಕರೆದೊಯ್ಯಲು ಅವರ ಪತಿ ಹಮೀದ್‌ ಬೇಗ್ ಜೈಲಿಗೆ ಬಂದಿದ್ದರು. ಜೈಲಿನ ಬಾಗಿಲು ತೆರೆದುಕೊಂಡ ನಂತರ ಹೊರ ಬಂದ ಫರೀದಾ ಬೇಗಂ ಅವರನ್ನು ಪತಿ ಕಣ್ಣಲ್ಲೇ ಸಮಾಧಾನ ಹೇಳಿ ಮನೆಗೆ ಕರೆದುಕೊಂಡು ಹೋದರು.

ಫರೀದಾ ಬೇಗಂ ಪತಿ ಹಮೀದ್‌ ಬೇಗ್, ‘ನನಗೆ ಇಬ್ಬರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ನನ್ನ ಪತ್ನಿ ಯಾವುದೇ ತಪ್ಪು ಮಾಡದಿದ್ದರೂ ಜೈಲು ಸೇರುವಂತಾಯಿತು. ನನಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇತ್ತು. ಎರಡು ವಾರಗಳ ನಂತರ ಜಾಮೀನು ಮೇಲೆ ಬಿಡುಗಡೆ ಹೊಂದಿದ್ದಾರೆ’ ಎಂದು ಹೇಳಿದರು.

‘ಪತ್ನಿ ಪ್ರಕರಣದಿಂದ ಖುಲಾಸೆ ಆಗುವ ವಿಶ್ವಾಸವೂ ಇದೆ. ಆದರೆ, ಫರೀದಾ ಬೇಗಂ ಜೈಲಿಗೆ ಹೋಗಿ ಬಂದಿರುವುದು ನನ್ನ ಹೆಣ್ಣು ಮಕ್ಕಳ ಮದುವೆಯ ಮೇಲೆ ಪರಿಣಾಮ ಬೀರದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.