ADVERTISEMENT

ಹುಲಸೂರ: ತಾಲ್ಲೂಕು ಕೇಂದ್ರದಲ್ಲೇ ಇಲ್ಲ ಸಾರ್ವಜನಿಕ ಶೌಚಾಲಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 6:11 IST
Last Updated 2 ಏಪ್ರಿಲ್ 2025, 6:11 IST
ಜಿಲ್ಲೆಯೊಂದರಲ್ಲಿ ಸರ್ಕಾರದಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ (ಸಾಂದರ್ಭಿಕ ಚಿತ್ರ)
ಜಿಲ್ಲೆಯೊಂದರಲ್ಲಿ ಸರ್ಕಾರದಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ (ಸಾಂದರ್ಭಿಕ ಚಿತ್ರ)   

ಹುಲಸೂರ: ಗ್ರಾಮ ಪಂಚಾಯಿತಿ ಕೇಂದ್ರವಾದ ಹುಲಸೂರನ್ನು ಸರ್ಕಾರ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿ ಏಳು ವರ್ಷ ಕಳೆಯುತ್ತಾ ಬಂದರೂ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ತಾಲ್ಲೂಕು ಕೇಂದ್ರದ ಯಾವೊಂದು ಭಾಗದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. 

ಪಟ್ಟಣವಾಗಿ ಮಾರ್ಪಟ್ಟ ಹುಲಸೂರಿನಲ್ಲಿ ಸುಮಾರು 18 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದು, 10 ವಾರ್ಡ್‌ಗಳನ್ನು ಒಳಗೊಂಡಿದೆ. ತಾಲ್ಲೂಕು ಕೇಂದ್ರದಲ್ಲಿನ ಸರ್ಕಾರಿ ಕಚೇರಿ, ವ್ಯಾಪಾರ ವಹಿವಾಟು, ಶಾಲಾ–ಕಾಲೇಜು, ದೇವಸ್ಥಾನ, ಐತಿಹಾಸಿಕ ಸ್ಥಳಗಳ ವೀಕ್ಷಣೆ ಸೇರಿ ಇತರೆ ಕೆಲಸ ಕಾರ್ಯಗಳಿಗೆ ದಿನ ನಿತ್ಯ ಬರುವ ಜನರಿಗೆ ಶೌಚಾಲಯ ಸಮಸ್ಯೆ ಬಹಳ ಕಾಡುತ್ತಿದೆ. ಆದರೂ ಸ್ಥಳೀಯ ಆಡಳಿತ ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂಬುದು ಇಲ್ಲಿನ ನಿವಾಸಿಗಳ ಮಾತಾಗಿದೆ.

ಪಟ್ಟಣದ  ಅಟಲ್ ಜನಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಂಚೆ ಕಚೇರಿ, ಸಹಕಾರಿ ಸಂಘದ ಕಚೇರಿ, ಪಶು ವೈದ್ಯಕೀಯ ಆಸ್ಪತ್ರೆ, ತಾಲ್ಲೂಕು ದಂಡಾಧಿಕಾರಿಗಳ ಕಚೇರಿ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ಸರ್ಕಾರಿ ಆಸ್ಪತ್ರೆಯಲ್ಲೂ  ಶೌಚಾಲಯದ ವ್ಯವಸ್ಥೆಯೇ ಇಲ್ಲ. ಆದರೂ ಯಾವ ಇಲಾಖೆ ಕೂಡ ಸಾರ್ವಜನಿಕರಿಗಾಗಿ ಒಂದೇ ಒಂದು ಶೌಚಾಲಯದ ವ್ಯವಸ್ಥೆ ಮಾಡದೇ ಇರುವುದು ಸೋಜಿಗದ ಸಂಗತಿ.

ADVERTISEMENT

ಎಲ್ಲಿಲ್ಲಿ ಬೇಕು ಸಾರ್ವಜನಿಕ ಶೌಚಾಲಯ: ಪಟ್ಟಣದ ಗಾಂಧಿವೃತ್ತ, ಸಮುದಾಯ ಆರೋಗ್ಯ ಕೇಂದ್ರ, ಹುಲಸೂರ - ಬಸವಕಲ್ಯಾಣ ಮುಖ್ಯ ರಸ್ತೆಯ ಬಳಿ, ಪೊಲೀಸ್‌ ಠಾಣೆ , ತಹಶೀಲ್ದಾರ್‌ ಕಚೇರಿ ಬಳಿ, ಅಲ್ಲಮಪ್ರಭು ಶೂನ್ಯಪೀಠದ ಬಳಿ.

ರೈತರು, ಬೀದಿ ಬದಿ ವ್ಯಾಪಾರಿಗಳು, ಗ್ರಾಹಕರು ಕೂಡ ಶೌಚಾಲಯಕ್ಕಾಗಿ ಪರದಾಡುತ್ತಾರೆ. ಉಪತಹಶೀಲ್ದಾರ್ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಪಂಚಾಯಿತಿ ಕೇಂದ್ರಕ್ಕೆ ಬರುವ ಜನರು ಶೌಚಾಲಯಕ್ಕಾಗಿ ಪಟ್ಟಣದ ಮುಖ್ಯಯನ್ನು ಅವಲಂಬಿಸಿದ್ದಾರೆ.  ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದ ಪರಿಣಾಮ  ಜನರು ಪಟ್ಟಣದ ಮುಖ್ಯರಸ್ತೆಯ ಪಕ್ಕ, ಕಟ್ಟಡಗಳ ಹಿಂಬದಿ, ಗಿಡಗಂಟಿಗಳನ್ನು ಆಶ್ರಯಿಸಿದ್ದು, ಪುರುಷರು ಎಲ್ಲೆಂದೆರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ಮಹಿಳೆಯರು ಸೆರಗು ಮುಚ್ಚಿಕೊಂಡು ಹೋಗಬೇಕಿದೆ. ಅಲ್ಲದೇ ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸಮಸ್ಯೆ ಇಷ್ಟು ಬಿಗಡಾಯಿಸಿದ್ದರೂ ಪಟ್ಟಣದಲ್ಲಿ ಮಹಿಳೆಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಸಭೆಯಲ್ಲಿ ಪ್ರಸ್ತಾವ: ಹುಲಸೂರ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ ಇಲ್ಲಿನ ವ್ಯಾಪಾರ ಮಳಿಗೆಗಳ ಮಾಲೀಕರು, ಕೆಲಸಗಾರರು, ಆಟೊ ರಿಕ್ಷಾ ಚಾಲಕರು, ಗ್ರಾಮಸ್ಥರು ಅನುಭವಿಸುವ ತೊಂದರೆಯ ಬಗ್ಗೆ ಗ್ರಾಮಸಭೆಯಲ್ಲೂ ಪ್ರಸ್ತಾವವಾಗಿತ್ತು. ಆದರೆ ಶೌಚಾಲಯ ಬೇಡಿಕೆ ಈಡೇರಿಸುವ ಸಂಬಂಧ ಯಾವುದೇ ಬೆಳವಣಿಗೆ ಮಾತ್ರ ಆಗಿಲ್ಲ.

ಇಲ್ಲಿ ಪ್ರತಿದಿನವೂ  ಸಾವಿರಾರು ರೈತರು ಮಾರುಕಟ್ಟೆಗೆ ಭೇಟಿ ನೀಡುತ್ತಾರೆ. ಈ ಪೈಕಿ ಶೇ 30ರಿಂದ 40ರಷ್ಟು ಮಹಿಳೆಯರೇ ಆಗಿರುತ್ತಾರೆ. ಆದರೆ, ಇವರಿಗೆಲ್ಲ ಆಗುತ್ತಿರುವ ಸಮಸ್ಯೆಯ ಕೂಗು ಯಾವ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಗೆ ಮುಟ್ಟಿಲ್ಲವೆಂಬ ದೂರು ಸದಾ ಕೇಳಿಬರುತ್ತದೆ.

ಕರೆ ಸ್ವೀಕರಿಸದ ಶಾಸಕ: ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯದ ಸಮಸ್ಯೆಗೆ ಕುರಿತು ಪ್ರತಿಕ್ರಿಯೆಗಾಗಿ ಸ್ಥಳೀಯ ಶಾಸಕ ಶರಣು ಸಲಗರ ಅವರನ್ನು ಹಲವು ಬಾರಿ ಪ್ರಯತ್ನಿಸಲಾಯಿತು. ಆದರೂ ಅವರು ಕರೆ ಸ್ವೀಕರಿಸಲಿಲ್ಲ. ‘ಮಾಧ್ಯಮದವರಿಗೆ ಲಭ್ಯರಾಗದ ಶಾಸಕರು, ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುವವರೆ’ ಎಂದು ಸ್ಥಳೀಯ ನಾಗರಿಕರೊಬ್ಬರು ಪ್ರಶ್ನಿಸಿದರು.

ಹುಲಸೂರಿನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಸಾರ್ವಜನಿಕರು ಅದರಲ್ಲೂ ಮಹಿಳೆಯರು ತುಂಬಾ ಸಮಸ್ಯೆ ಅನುಭವಿಸುವಂತಾಗಿದೆ. ಶೌಚಾಲಯ ಸಮಸ್ಯೆಯನ್ನು ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಶೌಚಾಲಯ ನಿರ್ಮಿಸಬೇಕು
ದೈವತಾಬಾಯಿ ವ್ಯಾಪಾರಸ್ಥೆ
ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯದ ಬೇಡಿಕೆ ಬಗ್ಗೆ ಗಮನದಲ್ಲಿದ್ದು ಈ ಬಗ್ಗೆ ವರ್ತಕರು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಈಗಾಗಲೇ ಜಿಲ್ಲಾ ಪಂಚಾಯತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದಷ್ಟು ಬೇಗ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯ ಮಂಜೂರಾಗುವ ನಿರೀಕ್ಷೆಯಿದೆ.
ರಮೇಶ ಮಿಲಿಂದಕರ ಪಿಡಿಒ ಹುಲಸೂರ ಗ್ರಾಮ ಪಂಚಾಯಿತಿ
ಹುಲಸೂರ ಪಟ್ಟಣದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ದೊರೆತಿದ್ದರೂ ಪಟ್ಟಣದಲ್ಲಿ ಮಾತ್ರ ಈ ಅವ್ಯವಸ್ಥೆ ಮುಂದುವರಿದಿರುವುದು ದೌರ್ಭಾಗ್ಯ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಾರ್ವಜನಿಕ ಮೂತ್ರಾಲಯ ನಿರ್ಮಿಸಿ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
ದಯಾನಂದ ನಿಮಾಣೆ ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.