ADVERTISEMENT

ಹುಲಸೂರ: ಕಸ ವಿಲೇವಾರಿ ಘಟಕಗಳಾದ ಮುಖ್ಯ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:02 IST
Last Updated 18 ಅಕ್ಟೋಬರ್ 2025, 6:02 IST
ಹುಲಸೂರ ಪಟ್ಟಣದಿಂದ ಬಸವಕಲ್ಯಾಣಕ್ಕೆ ಹೋಗುವ ಮುಖ್ಯರಸ್ತೆಯ ಪಕ್ಕ ಹಾಕಿರುವ ಪ್ಲಾಸ್ಟಿಕ್ ತ್ಯಾಜ್ಯ
ಹುಲಸೂರ ಪಟ್ಟಣದಿಂದ ಬಸವಕಲ್ಯಾಣಕ್ಕೆ ಹೋಗುವ ಮುಖ್ಯರಸ್ತೆಯ ಪಕ್ಕ ಹಾಕಿರುವ ಪ್ಲಾಸ್ಟಿಕ್ ತ್ಯಾಜ್ಯ   

ಹುಲಸೂರ: ಇಲ್ಲಿನ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ಹಂತದಲ್ಲಿದ್ದರೂ ಕಸದ ಸಮಸ್ಯೆ ಹೆಚ್ಚಾಗುತ್ತಲೇ ಇದೆ.

ಹುಲಸೂರ–ಬಸವಕಲ್ಯಾಣ ರಾಜ್ಯ ಹೆದ್ದಾರಿಯಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿದ್ದು ಪಟ್ಟಣದ ಒಳಗೆ ಹಾಗೂ ಹೊರಗೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದೆ ರಸ್ತೆಗಳಲ್ಲಿ ಕಸದ ರಾಶಿ ನಿತ್ಯ ಬೆಳೆಯುತ್ತಿದೆ. ದುರ್ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ.

ಒಂದು ಸಲ ಪಟ್ಟಣವನ್ನು ಪ್ರದಕ್ಷಿಣೆ ಹಾಕಿದರೆ ರಸ್ತೆ ಬದಿ, ಅಂಗಡಿ, ಖಾಲಿ ನಿವೇಶನ ಸೇರಿದಂತೆ ಎಲ್ಲೆಂದರಲ್ಲಿ ಕಸದ ರಾಶಿಯೇ ಕಣ್ಣಿಗೆ ರಾಚುತ್ತದೆ. ಇದರಲ್ಲಿ ಬಹುತೇಕ ಪ್ಲಾಸ್ಟಿಕ್ ಇರುತ್ತದೆ. ನಗರಸಭೆಯಿಂದ ಕಠಿಣ ನಿಯಮ ಜಾರಿಗೊಳಿಸದಿರುವುದೇ  ಈ ಎಲ್ಲ ಸಮಸ್ಯೆಗೆ ಕಾರಣ ಎಂದು ಜನ ದೂರುವಂತಾಗಿದೆ.

ADVERTISEMENT

ಪಟ್ಟಣದ ಭಾಲ್ಕಿ ಹಾಗೂ ಬಸವಕಲ್ಯಾಣ ಮುಖ್ಯರಸ್ತೆಯ ಪಕ್ಕ, ಹನುಮಾನ ದೇವಸ್ಥಾನದ ಬಳಿ, ವೀರಭದ್ರೇಶ್ವರ ದೇವಸ್ಥಾನದ ಬಳಿ, ಹಾಲಹಳ್ಳಿ ಗ್ರಾಮಕ್ಕೆ ಹೋಗುವ ದಾರಿ ಮಧ್ಯದಲ್ಲಿ ಹಾಗೂ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಗಳ ಅಕ್ಕಪಕ್ಕದಲ್ಲಿ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆ ಬದಿ ರಾಶಿರಾಶಿ ಪ್ಲಾಸ್ಟಿಕ್ ತ್ಯಾಜ್ಯದ ದರ್ಶನವಾಗುತ್ತದೆ.

ಕಸ ಮತ್ತು ಬೇಡವಾದ ವಸ್ತುಗಳನ್ನು ರಸ್ತೆ ಬದಿ ಸುರಿಯದಂತೆ ಗ್ರಾಮ ಪಂಚಾಯಿತಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಕೆಲವರು ಬಿಡುತ್ತಿಲ್ಲ. ನಿರುಪಯುಕ್ತ ವಸ್ತುಗಳನ್ನು ಮನಸ್ಸಿಗೆ ಬಂದಂತೆ ಎಸೆದು ಹೋಗುತ್ತಿದ್ದಾರೆ. ಸ್ವಚ್ಛತೆ ಕಾಪಾಡುವುದು ಪಾಲಿಕೆಗೆ ಸವಾಲಿನ ಕೆಲಸವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.

ಪ್ರತಿ ಮನೆಗೂ ಗ್ರಾಮ ಪಂಚಾಯಿತಿಯಿಂದ ಎರಡು ಪ್ರತ್ಯೇಕ ಡಬ್ಬಿಗಳನ್ನು ವಿತರಿಸಲಾಗಿದೆ. ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ ಹಾಕುವಂತೆ ಮಾಹಿತಿ ನೀಡಲಾಗಿದೆ. ವಾಹನಗಳು ನಿತ್ಯ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಿವೆ. ಆದರೂ ಜನ ರಸ್ತೆ ಬದಿ ಬೇಡವಾದ ವಸ್ತುಗಳನ್ನು ಎಸೆದು ಹೋಗುವುದನ್ನು ನಿಲ್ಲಿಸುತ್ತಿಲ್ಲ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ವಾರ್ಡ್‌ಗಳಲ್ಲಿ ಹೆಚ್ಚಾಗಿ ಕಸ ಬಿಸಾಡುವ ಜಾಗ ಗುರುತಿಸಿ ಅಲ್ಲಿ ಕಸ ಎಸೆಯದಂತೆ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿನ ಗ್ರಾಮ ಪಂಚಾಯಿತಿಯಿಂದ ಇದುವರೆಗೆ ಅಂತಹ ಬೆಳವಣಿಗೆ ಕಂಡುಬಂದಿಲ್ಲ. ಪ್ರತಿ ಬಡಾವಣೆಗಳಲ್ಲಿ ಬ್ಲಾಕ್ ಸ್ಪಾಟ್ ಇದೆಯಾದರೂ  ಅಲ್ಲಿನ ಕಸದ ರಾಶಿ ನಿಯಂತ್ರಣಕ್ಕೆ ಕ್ರಮ ವಹಿಸದೇ ಇರುವುದರಿಂದ ರಾತೋರಾತ್ರಿ ಅಥವಾ ಬೆಳಗಿನ ಜಾವ ಕಸ ತಂದು ಎಸೆಯುವವರ ಸಂಖ್ಯೆಯೂ ಹೆಚ್ಚಿದೆ.

ರಸ್ತೆ ಬದಿಯಲ್ಲಿ ಹಾಕಿದ ಕಸವನ್ನು ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನಗಳಲ್ಲಿ ಎತ್ತಿಕೊಂಡು ಹೋಗುತ್ತಿದ್ದರೂ ಜನ  ಮತ್ತೆ ಅದೇ ಸ್ಥಳದಲ್ಲಿ ಕಸ ಹಾಕುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿಸಬೇಕು. ತ್ಯಾಜ್ಯವನ್ನು ಕಸದ ಗಾಡಿಗೆ ಹಾಕುವಂತೆ ಸೂಚನೆ ನೀಡಬೇಕು. ಬೇಕಾಬಿಟ್ಟಿ ಕಸ ಎಸೆಯುವವರಿಗೆ ದಂಡ ಹಾಕುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಮಾಡಬೇಕಿದೆ ಎನ್ನುತ್ತಾರೆ ಪಟ್ಟಣದ ನಾಗರಿಕರು.

‘ಗ್ರಾಮ ಪಂಚಾಯಿತಿ ಮನೆಯಿಂದ ಸರಿಯಾಗಿ ಕಸ ಸಂಗ್ರಹಿಸಿದರೆ ಜನ ಹಾಗೂ ಅಂಗಡಿಯವರು ಬೇರೆ ಕಡೆ ಕಸ ಎಸೆಯುವುದಿಲ್ಲ. ಕಸದ ಗಾಡಿ ಒಂದು ದಿನ ಬಂದರೆ ಮತ್ತೊಂದು ದಿನ ಬರುವುದಿಲ್ಲ. ಹಾಗಾಗಿ ಬಡಾವಣೆಗಳಲ್ಲಿ ಕಾಣುವ ಮೂಲೆಗೆ ಅಥವಾ ರಸ್ತೆಯ ಬದಿಗೆ ಎಸೆಯುತ್ತಾರೆ’ ಎಂದು ನಿವಾಸಿಯೊಬ್ಬರು ಹೇಳುತ್ತಾರೆ.

ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಸೇರಿದಂತೆ ನಾನಾ ತ್ಯಾಜ್ಯವನ್ನು ಪ್ರಮುಖ ರಸ್ತೆಗಳ ಪಕ್ಕದಲ್ಲೇ ಎಸೆಯುತ್ತಿದ್ದಾರೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗದ ಭಯ ಎದುರಾಗುತ್ತಿದೆ. ಕೆಲ ದಿನಗಳ ಹಿಂದೆ ಪಟ್ಟಣದ ಕೆಲ ಪ್ರಮುಖ ರಸ್ತೆಗಳ ಪಕ್ಕ ಕಸದ ರಾಶಿ ಹಾಕುತ್ತಿರುವ ಬಗ್ಗೆ ದುರುಗಳು ಬರೆದಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಸ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳುವಂತೆ ಪಟ್ಟಣವಾಸಿಗಳು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. 

ಕೆಲ ಬಡಾವಣೆಗಳಲ್ಲಿ ಜನರು ಸಂಜೆ ಆಗುತ್ತಲೇ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗೆ ಬೆಂಕಿ ಹಚ್ಚುತ್ತಿದ್ದು ಇದರಿಂದ ಸುತ್ತಲಿನ ಪರಿಸರ ಹದಗೆಡುತ್ತಿದೆ. ಅಲ್ಲದೇ ಅಪಾಯಕಾರಿ ಅನಿಲ ಹೊರಸೂಸುತ್ತವೆ 
ಅಬ್ರಾರ್ ಸೌಧಾಗರ್ ಪರಿಸರವಾದಿ
ಪಟ್ಟಣದ ಸುತ್ತಲಿನ ಕಸ ವಿಲೇವಾರಿಗೆ ಹೆಚ್ಚುವರಿ ಆಟೊ ಟ್ರಾಕ್ಟರ್ ನಿಯೋಜಿಸಲಾಗಿದೆ. ಆದರೂ ಕೆಲವೆಡೆ ಕಸ ಹಾಕುತ್ತಿದ್ದು ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು 
ರಮೇಶ ಮಿಲಿಂದಕರ ಪಿಡಿಒ
ಕಸ ವಿಲೇವಾರಿ ನಿರ್ವಹಣೆ ಪಿಡಿಒಗಳ ಜವಾಬ್ದಾರಿ. ಈಗಾಗಲೇ ಸೂಕ್ತ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಗ್ರಾ.ಪಂಗೂ ಭೇಟಿ ನೀಡಿ ಕಸ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ 
ಮಹಾದೇವ ಜಮ್ಮು ಹುಲಸೂರ ತಾ.ಪಂ ಇಒ

ಹಂದಿಗಳ ಕಾಟ 

ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಕೆಸರಲ್ಲಿ ಉರುಳಾಡಿ ಜನನಿಬಿಡ ಪ್ರದೇಶದಲ್ಲಿ ಸುತ್ತುತ್ತಿರುವ ಹಂದಿಗಳ ನಿಯಂತ್ರಣಕ್ಕೆ ಕ್ರಮವಹಿಸುತ್ತಿಲ್ಲ. ನಿತ್ಯ ಮುಂಜಾನೆಯಿಂದಲೇ ರಸ್ತೆಗಿಳಿಯುವ ಹಂದಿಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಜನದಟ್ಟಣೆ ಪ್ರದೇಶದಲ್ಲಿ ಹಂದಿ ಸಾಕಣೆಗೆ ಅವಕಾಶವಿಲ್ಲ. ಆದರೂ ಹಲವು ವರ್ಷಗಳಿಂದ ನಗರದಲ್ಲಿ ಹಂದಿ ಸಾಕಣೆ ಮುಂದುವರಿದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಕ್ರಮವಾಗಿಲ್ಲ. ಹಂದಿ ಸಾಕಣೆಯಲ್ಲಿ ತೊಡಗಿಕೊಂಡವರು ರಾಜಕೀಯ ಪ್ರಭಾವವನ್ನೂ ಹೊಂದಿರುವ ಕಾರಣಕ್ಕೆ ಅಧಿಕಾರಿಗಳು ಕ್ರಮಕ್ಕೆ ಹಿಂಜರಿಯುತ್ತಿರುವ ಶಂಕೆ ಇದೆ’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.