ADVERTISEMENT

ಹುಲಸೂರ: ರಸ್ತೆ ಸೌಲಭ್ಯ ಕಾಣದ ಘೋಲ ತಾಂಡಾ!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:14 IST
Last Updated 15 ಸೆಪ್ಟೆಂಬರ್ 2025, 6:14 IST
ಹುಲಸೂರ ಸಮೀಪದ ವಾಂಝರಖೆಡಾ ಪಂಚಾಯಿತಿ ವ್ಯಾಪ್ತಿಯ ಘೋಲ ತಾಂಡಾದ ರಸ್ತೆಯ ದುಸ್ಥಿತಿ
ಹುಲಸೂರ ಸಮೀಪದ ವಾಂಝರಖೆಡಾ ಪಂಚಾಯಿತಿ ವ್ಯಾಪ್ತಿಯ ಘೋಲ ತಾಂಡಾದ ರಸ್ತೆಯ ದುಸ್ಥಿತಿ   

ಹುಲಸೂರ: ಸಮೀಪದ ವಾಂಝರಖೆಡಾ ಪಂಚಾಯಿತಿ ವ್ಯಾಪ್ತಿಯ ಘೋಲ ತಾಂಡಾ ಇನ್ನೂ ರಸ್ತೆ ಸೌಲಭ್ಯ ಕಂಡಿಲ್ಲ.

ಗ್ರಾಮದಲ್ಲಿ ಒಟ್ಟು 50 ಕುಟುಂಬಗಳಿವೆ. 160ಕ್ಕೂ ಹೆಚ್ಚು ಮತದಾರರಿದ್ದಾರೆ. 53 ವರ್ಷಗಳಷ್ಟು ಹಳೆಯ ಕಂದಾಯ ಗ್ರಾಮ ಇದಾಗಿದ್ದು, ಬಸ್ ಸೌಕರ್ಯ ಇಲ್ಲದ ಕಾರಣ ಇಲ್ಲಿನ ನಿವಾಸಿಗಳು ಮೂರು ಕಿ.ಮೀ ಮಣ್ಣು–ಜಲ್ಲಿ, ಕಲ್ಲಿನ ನಡುವೆ ನಡೆದುಕೊಂಡು ಪಟ್ಟಣಕ್ಕೆ ತೆರಳಬೇಕು.

50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ–ಕಾಲೇಜುಗಳಿಗೆ ಈ ರಸ್ತೆ ಮೂಲಕವೇ ಅಡ್ಡಾಡುತ್ತಿದ್ದು, ಹೆಜ್ಜೆ ಹೆಜ್ಜೆಗೂ ಆತಂಕ ಎದುರಿಸುತ್ತಿದ್ದಾರೆ. ದಾರಿಯುದ್ದಕ್ಕೂ ಮುಳ್ಳು–ಕಂಟಿಗಳು ಬೆಳೆದು ನಿಂತಿವೆ. ಹಾವು–ಚೇಳುಗಳು ರಸ್ತೆ ಮೇಲೆಯೇ ಓಡಾಡುತ್ತವೆ.

ADVERTISEMENT

ಹಗಲು ಹೊತ್ತಿನಲ್ಲೂ ಇಲ್ಲಿ ಜನರು ಒಂಟಿಯಾಗಿ ತೆರಳಲು ಹೆದರುತ್ತಾರೆ. ರಸ್ತೆಯ ಎರಡು ಕಡೆಗಳಲ್ಲೂ ಜಾಲಿ ಮರಗಳು ಬೆಳೆದು ನಿಂತಿದ್ದು, ರಸ್ತೆ ಕಡೆ ವಾಲಿ ನಡೆದಾಡಲು ಮತ್ತಷ್ಟು ಇಕ್ಕಟ್ಟು ಉಂಟಾಗಿದೆ. ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿದಾರರು ಹೆಚ್ಚಾಗಿ ಇರುವ ಇಲ್ಲಿ ಮನೆಗೆ ಬೇಕಾಗುವ ಆಹಾರ ಸಾಮಗ್ರಿಯನ್ನು ಈ ರಸ್ತೆಯಲ್ಲಿಯೇ ನಡೆದು ತರಬೇಕು. 

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ರಸ್ತೆಗೆ ಅರ್ಧ ಜಲ್ಲಿ ಹಾಕಲಾಗಿದೆ. ಮೋರಿ ಕಾಮಗಾರಿ ನಿರ್ವಹಿಸಲಾಗಿದೆ. ನಂತರ ಗ್ರಾಮ ಪಂಚಾಯಿತಿ ವತಿಯಿಂದ 15ನೇ ಹಣಕಾಸಿನ ಯೋಜನೆಯಡಿ ₹1 ಲಕ್ಷ ಅನುದಾನದಲ್ಲಿ ರಸ್ತೆ ಸಮತಟ್ಟು ಮಾಡಲಾಗಿದೆ. ಇದಾದ ಬಳಿಕ ರಸ್ತೆ ಅಭಿವೃದ್ಧಿಯನ್ನೇ ಕಂಡಿಲ್ಲ.

‘ನನಗೀಗ 58 ವರ್ಷ ವಯಸ್ಸು. ಬಾಲ್ಯದಿಂದಲೂ ಇದೇ ರೀತಿಯ ರಸ್ತೆ ನೋಡಿದ್ದೇವೆ. ಅಭಿವೃದ್ಧಿ ಆಗಿರುವುದನ್ನು ನೋಡಲು ಸಾಧ್ಯವೇ ಆಗಿಲ್ಲ. ತಾಂಡಾದ ಪುಟ್ಟ ಮಕ್ಕಳಿಗೆ ಸರ್ಕಾರದಿಂದಲೇ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಇದು ಸಾಧ್ಯವಾಗದಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಿನಿ ವ್ಯಾನ್ ಸೌಲಭ್ಯ ಕಲ್ಪಿಸಬೇಕು’ ಎಂದು ಗ್ರಾಮದ ನಿವಾಸಿ ಕಿಶನ್ ಸೋಮಾಜಿ ಚವ್ಹಾಣ ಆಗ್ರಹಿಸುತ್ತಾರೆ.

ಶುದ್ಧ ಕುಡಿಯುವ ನೀರಿನ ಸೌಕರ್ಯ ಇಲ್ಲ. ಉತ್ತಮ ಪೈಪ್‌ಲೈನ್‌ ವ್ಯವಸ್ಥೆ ಇಲ್ಲದಿರುವುದರಿಂದ ಮಣ್ಣು ಮಿಶ್ರಿತ ನೀರು ಕುಡಿಯುವ ಅನಿವಾರ್ಯತೆ ಇದೆ. ಇನ್ನಾದರೂ ಇತ್ತ ಗಮನಹರಿಸಿ ಎಂದು ಗ್ರಾಮಸ್ಥರಾದ ಸುಭಾಷ ಜಾಧವ, ಮೋಹನ್ ಚವ್ಹಾಣ, ಸಂಜು ಚವ್ಹಾಣ, ವಿನಾಯಕ ರಾಠೋಡ, ಶೆಶೆರಾವ್ ರಾಠೋಡ, ಬಾಳು ಚವ್ಹಾಣ, ಅನುಸೂಯಾ ಚವ್ಹಾಣ, ಸೀತಾಬಾಯಿ ಚವ್ಹಾಣ, ರಾಜು ಜಾಧವ, ಅವಿನಾಶ ಚವ್ಹಾಣ , ಪ್ರಕಾಶ ಚವ್ಹಾಣ , ರಮೇಶ ಚವ್ಹಾಣ ಆಗ್ರಹಿಸುತ್ತಾರೆ.

2025ರ ಮೇ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಯೋಜನೆಯಡಿ ಕೊಂಗಳಿ ಗ್ರಾಮದಿಂದ ಘೋಲತಾಂಡಾದವರೆಗೆ ರಸ್ತೆ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿ ಎಂದು ಪಿಆರ್‌ಇ ಇಲಾಖೆ ಎಂಜಿನಿಯರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರವೀಣ ಸುರೇಶ ಪಾಟೀಲ
ತಲೆಮಾರುಗಳು ಉರುಳಿ ಹೋಗಿವೆ. ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಮುಂದಿನ ಪೀಳಿಗೆಗಾದರೂ ರಸ್ತೆ ಅಭಿವೃದ್ಧಿಪಡಿಸಿಕೊಡಿ
ಪ್ರವೀಣ ಸುರೇಶ ಪಾಟೀಲ ಗ್ರಾಮದ ಮುಖಂಡ
ಘೋಲತಾಂಡಾಕ್ಕೆ ರಸ್ತೆ ಇರದಿರುವುದು ನನ್ನ ಗಮನಕ್ಕೆ ಇಲ್ಲ. ಕೆಕೆಆರ್‌ಡಿಬಿ ಯೋಜನೆಯಡಿ ರಸ್ತೆ ಮಾಡಲು ಅವಕಾಶ ಇದೆ. ರಸ್ತೆ ಮಂಜೂರಾತಿ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚಿಸುವೆ
ಸೂರ್ಯಕಾಂತ ಬಿರಾದಾರ ಇಒ ತಾ.ಪಂ
ಸೇತುವೆ ನಿರ್ಮಾಣಕ್ಕೆ ಒತ್ತಾಯ
ಘೋಲ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಹಳ್ಳಗಳು ಬರುತ್ತೇವೆ. ಸ್ವಲ್ಪ ಮಳೆಯಾದರೂ ಹಳ್ಳಗಳು ತುಂಬಿ ಹರಿಯುತ್ತವೆ. ‘ನಾವು ಹುಟ್ಟಿನಿಂದ ಅಲ್ಲ. ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ ಮಳೆಯಾದರೆ ದಾರಿ ಕೆಸರು ಗದ್ದೆಯಂತಾಗುತ್ತದೆ. ಹಳ್ಳ ತುಂಬಿ ಹರಿದರೆ ದಾಟಿ ಬೇರೆಡೆ ಹೋಗಲಾರದಂಥ ಪರಿಸ್ಥಿತಿ. ಈ ಹಾಣಾದಿಯಲ್ಲಿ ಬೈಕ್‌ ಓಡಿಸಲು ಆಗಲ್ಲ. ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ನಡೆಯಬೇಕು. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಬೇಕಾದರೆ ಮಂಚ ಅಥವಾ ಭುಜದ ಮೇಲೆ ಹೊತ್ತುಕೊಂಡು ಹೋಗಬೇಕು. ಕೂಡಲೇ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.