ADVERTISEMENT

ಹುಲಸೂರ: ಕೊಂಗಳಿ ಏತ ನೀರಾವರಿ ಯೋಜನೆಗೆ ಗ್ರಹಣ

ಅವಧಿ ಮುಗಿದು ಐದೂವರೆ ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ

ಪ್ರಜಾವಾಣಿ ವಿಶೇಷ
Published 22 ನವೆಂಬರ್ 2025, 5:45 IST
Last Updated 22 ನವೆಂಬರ್ 2025, 5:45 IST
ಹುಲಸೂರ ತಾಲ್ಲೂಕಿನ ಗೋವರ್ಧನ ತಾಂಡಾ ಸಮೀಪ ನಿರ್ಮಾಣಗೊಳ್ಳುತ್ತಿರುವ ಕೊಂಗಳಿ ಏತ ನೀರಾವರಿ ಯೋಜನೆಯ ಪಂಪ್‌ಹೌಸ್‌
ಹುಲಸೂರ ತಾಲ್ಲೂಕಿನ ಗೋವರ್ಧನ ತಾಂಡಾ ಸಮೀಪ ನಿರ್ಮಾಣಗೊಳ್ಳುತ್ತಿರುವ ಕೊಂಗಳಿ ಏತ ನೀರಾವರಿ ಯೋಜನೆಯ ಪಂಪ್‌ಹೌಸ್‌   

ಹುಲಸೂರ: ಸರ್ಕಾರದ ನಿರ್ಲಕ್ಷ್ಯದಿಂದ ಸಣ್ಣ ನೀರಾವರಿ ಇಲಾಖೆಗೆ ಸೇರಿದ ₹180 ಕೋಟಿ ಅಂದಾಜು ವೆಚ್ಚದ 8 ಕೆರೆ ತುಂಬಿಸುವ ಕೊಂಗಳಿ ಏತ ನೀರಾವರಿ ಯೋಜನೆಗೆ ಗ್ರಹಣ ಹಿಡಿದಿದೆ. 

ಕರ್ನಾಟಕ ನೀರಾವರಿ ನಿಗಮ ಅಡಿಯಲ್ಲಿ ತಾಲ್ಲೂಕಿನ ಗೋವರ್ಧನ ತಾಂಡಾ ಸಮೀಪ ನಿರ್ಮಾಣಗೊಳ್ಳುತ್ತಿರುವ ಕೊಂಗಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಎರಡು ವರ್ಷ ಕಾಲಾವಧಿಯಲ್ಲಿ 2020 ಮಾರ್ಚ್ 26ಕ್ಕೆ ಮುಗಿಯಬೇಕಿದ್ದ ಈ ಯೋಜನೆ ಹೆಚ್ಚುವರಿ 68 ತಿಂಗಳು ಉರುಳಿದರೂ ಇನ್ನೂ ಮುಕ್ತಾಯವಾಗಿಲ್ಲ. 

ಕಳೆದ 5 ವರ್ಷಗಳ ಹಿಂದೆ ಟೆಂಡರ್ ಕೈಗೆತ್ತಿಕೊಂಡಿರುವ ಮಂಗಳೂರಿನ ಒಶಿಯನ್ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆದಾರರು, ಸಹಾಯಕ ಎಂಜಿನಿಯರ್‌ ಎಚ್.ಡಿ.ಪಾಟೀಲ ಮತ್ತು ಯೋಜನೆಗೆ ಸಂಬಂಧಿಸಿದ ಇನ್ನಿತರ ಸಿಬ್ಬಂದಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ಶರಣು ಸಲಗರ ಕಾಮಗಾರಿ ಪೂರ್ಣಗೊಳಿಸಲು ಕೋರಿದ್ದರು. ಹಲವು ಬಾರಿ ಮುಖ್ಯಮಂತ್ರಿ ಸೇರಿ ನೀರಾವರಿ ಇಲಾಖೆ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ADVERTISEMENT

ಜನರ ತೆರಿಗೆಯ ನೂರಾರು ಕೋಟಿ ಹಣವನ್ನು ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ ಎಂಬ ಅಸಮಾಧಾನ ರೈತರದ್ದು.

‘ಕೊಂಗಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿದೆ. ಗುತ್ತಿಗೆದಾರ ಯಾರೇ ಇರಲಿ  ಕಾಮಗಾರಿ ಸ್ಥಳದಲ್ಲೇ ಠಿಕಾಣಿ ಹೂಡಿ ಹಗಲು-ರಾತ್ರಿ ಕೆಲಸ ಮಾಡಬೇಕು’ ಎಂದು ಶಾಸಕರು 20 ತಿಂಗಳ ಹಿಂದೆ ಎಚ್ಚರಿಕೆ ನೀಡಿದರು. ಆದರೂ 48 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಯಾವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡದೆ ಇರುವುದು ವಿಪರ್ಯಾಸ.

‘ನಿವೃತ ಎಂ.ಡಿ ಮಲ್ಲಿಕಾರ್ಜುನ ಗುಂಗೆ ಕಾರಣ’: ‘ಕೊಂಗಳಿ ಏತ ನೀರಾವರಿ ಹಳ್ಳ ಹಿಡಿಯಲು ನಿವೃತ ಎಂ.ಡಿ ಮಲ್ಲಿಕಾರ್ಜುನ ಗುಂಗೆ ಕಾರಣ, ಅವರ ಬೇಜವಾಬ್ದಾರಿಯಿಂದ ಯೋಜನೆಗೆ ಗ್ರಹಣ ಹತ್ತಿದೆ’ ಎಂದು ಶಾಸಕ ಶರಣು ಸಲಗರ ಆರೋಪಿಸಿದ್ದಾರೆ.

ನೀರಾವರಿ ಯೋಜನೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ ಆದರೂ ಸರ್ಕಾರ, ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಸಕ್ತಿ ತೋರುತ್ತಿಲ್ಲ ಎಂಬ ಅಸಮಾಧಾನ ಈ ಭಾಗದ ಜನರಲ್ಲಿದೆ. ಹಿಂದಿನ ಅವಧಿಗೆ ನೀರಾವರಿ ಯೋಜನೆಗೆ ಸಾಕಷ್ಟು ಕಾಳಜಿ ವಹಿಸಿದ್ದರು ಬಳಿಕ ಈ ಯೋಜನೆಯ ಬಗ್ಗೆ ಮರೀಚಿಕೆಯಾದಂತಿದೆ. ಈಗಲಾದರೂ ತಾಲ್ಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಮೌನ ಮುರಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಶಾಸಕ ಶರಣು ಸಲಗರ, ಬಸವಕಲ್ಯಾಣ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚೆಲ್ಲಾಬಟ್ಟೆ ಇತರರು.

ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ರೈತರು, ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆ  ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಯಾವ್ಯಾವ ಕೆರೆಗಳು  

ಕೊಂಗಳಿ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ ತಾಲ್ಲೂಕಿನ ಬೇಲೂರ ಗುತ್ತಿ ಮಿರಕಲ ನಾರಾಯಣಪುರ ತ್ರಿಪುರಾಂತ ಬೇಟಬಾಲಕುಂದ ಧನ್ನುರ ಸೇರಿ 8 ಕೆರೆಗಳು ನೀರಿನಿಂದ ತುಂಬಿ ತುಳುಕಲಿವೆ. ₹180 ಕೋಟಿ ಯೋಜನಾ ವೆಚ್ಚ ಇರುವ ಯೋಜನೆಯಡಿ ಬರುವ ಕೆರೆಗೆ ನೀರು ತುಂಬಿಸುವುದಲ್ಲದೇ ಸುತ್ತಲಿನ ಹಳ್ಳಿಗಳ ಸುಮಾರು 1500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಜನ–ಜಾನುವಾರುಗ ನೀರಿನ ಸಮಸ್ಯೆ ಪರಿಹಾರವಾಗಲಿದೆ. 

ರಾಜ್ಯ ಸರ್ಕಾರ ಸಕಾಲದಲ್ಲಿ ಬಿಲ್ ಪಾವತಿ ಮಾಡಿದರೂ ಗುತ್ತಿಗೆದಾರ ಕೆಲಸ ಮಾಡದಿರುವುದು ಹಾಗೂ ನೀರಾವರಿ ಇಲಾಖೆ ನಿವೃತ್ತ ಎಂ.ಡಿ ಮಲ್ಲಿಕಾರ್ಜುನ ಗುಂಗೆ ಅವರೇ ನೇರ ಕಾರಣ. ಅವರ ಈ ನಿರ್ಲಕ್ಷ್ಯಕ್ಕೆ ಇನ್ನೂ ಏಂಥ ಉದಾಹರಣೆ ಬೇಕು 
–ಶರಣು ಸಲಗರ, ಶಾಸಕ
ಬರ ಬಿದ್ದಾಗ ಕೆರೆಯಲ್ಲಿ ನೀರಿದ್ದರೆ ಕೊಳವೆ ಭಾವಿಗಳಿಗೆ ಹೆಚ್ಚಿನ ನೀರು ಬಂದು ಜನ–ಜಾನುವಾರುಗಳ ಬದುಕಿಗೆ ಆಸರೆಯಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬರುವ ಚಳಿಗಾಲ ಅಧಿವೇಶನದಲ್ಲಿ ಸ್ಥಳೀಯ ಶಾಸಕರು ಧ್ವನಿ ಎತ್ತಬೇಕು. ಶೀಘ್ರ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು 
–ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷರು ರಾಜ್ಯ ರೈತ ಸಂಘ ಬೀದರ್ 
ಕೊಂಗಳಿ ಏತನೀರಾವರಿ ಯೋಜನೆ ಅಂತಿಮ ಹಂತದಲ್ಲಿದೆ. ಈಗಾಗಲೇ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಗೋವರ್ಧನ ತಾಂಡಾ ಬಳಿ ಜಾಕ್‌ವೆಲ್‌ ನಿರ್ಮಿಸಿ ಮೋಟರ್‌ ಅಳವಡಿಸಲಾಗಿದ್ದು ನೀರಾವರಿ ಸೌಲಭ್ಯ ದೊರೆಯಲಿದೆ.
–ಸಂತೋಷ ಮಾಕಾ, ಎಇಇ ಕರ್ನಾಟಕ ನೀರಾವರಿ ನಿಗಮ ಹುಮನಾಬಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.