
ಹುಲಸೂರ: ಎರಡು ವರ್ಷಗಳ ಹಿಂದೆ ಕೆಕೆಆರ್‌ಡಿಬಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಿಂಬದಿಯಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಇಂದಿಗೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಕಾಮಗಾರಿ ಮುಕ್ತಾಯ ದಿನಾಂಕ ಮುಗಿದು ವರ್ಷ ಕಳೆದರೂ ಇಂದಿಗೂ ಬಾಗಿಲು ತೆರೆದಿಲ್ಲ.
ಕಟ್ಟಡದಲ್ಲಿ ಪುಸ್ತಕಗಳನ್ನು ಸರಿಯಾಗಿ ಸಂರಕ್ಷಿಸಿಲ್ಲ, ಗ್ರಂಥಾಲಯದ ಒಳಾಂಗಣ ನಿರಂತರ ಬಳಕೆಯ ಕೊರತೆಯಿಂದ ಅಸಮರ್ಪಕ ಸ್ಥಿತಿಯಲ್ಲಿದೆ. ಇಲ್ಲಿಂದ ಕೇವಲ 50 ಮೀಟರ್ ಅಂತರದಲ್ಲೇ ಇರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಂಥಾಲಯಂದ ಉಪಯೋಗವಾಗುತ್ತಿತ್ತು. ಆದರೆ ಪೂರ್ಣಗೊಂಡರು ಉಪಯೋಗ ಸಿಗದಂತಾಗಿದೆ.
ಪ್ರಸ್ತುತ ಗ್ರಾಮ ಪಂಚಾಯಿತಿ ಕಟ್ಟಡದ ಎದುರು ಪಾಳು ಬಿದ್ದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಚಿಕ್ಕದಾಗಿದೆ. ಹೊಸ ಗ್ರಂಥಾಲಯದ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದರೂ ಶಾಸಕರು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆ ಭಾಗ್ಯ ದೊರೆಯದಿರುವುದು ವಿಪರ್ಯಾಸ.
ಬಾಡಿಗೆ ಕಟ್ಟಡಲ್ಲಿ ನಡೆಯುತ್ತಿರುವ ಗ್ರಂಥಾಲಯಕ್ಕೆ ನಿತ್ಯ 50 ರಿಂದ 100 ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಬಾಡಿಗೆ ಕಟ್ಟಡದಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ನಡೆಯುತ್ತಿದ್ದ ಗ್ರಂಥಾಲಯಕ್ಕೆ ಸುಸಜ್ಜಿತವಾದ ಹೊಸ ಕಟ್ಟಡ ನಿರ್ಮಿಸಿದರೂ ಉಯೋಗವಾಗುತ್ತಿಲ್ಲ. ನೂತನ ಕಟ್ಟಡ ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕು ಎಂದು ಪುಸ್ತಕ ಪ್ರೇಮಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಪ್ರತಿಕ್ರಿಯಿಸಿದ ಕೇಂದ್ರ ಗ್ರಂಥಾಲಯ ಅಧಿಕಾರಿ ಸಿದ್ದಾರ್ಥ, ‘ಹುಲಸೂರ ನೂತನ ತಾಲ್ಲೂಕ ಕೇಂದ್ರವಾಗಿದ್ದರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರಿಂದ ಕಟ್ಟಡದ ಉದ್ಘಾಟನೆ ಹಾಗೂ ಗ್ರಂಥಾಲಯ ಪ್ರಾರಂಭಿಸಲು ಅನುಮತಿ ಪಡೆಯಬೇಕು. ಅವರಿಂದ ಅನುಮತಿ ಆದೇಶ ಪತ್ರ ಬಂದ ಕೂಡಲೇ ಸ್ಥಳೀಯ ಶಾಸಕರ ಜೊತೆ ಮಾತನಾಡಿ ಉದ್ಘಾಟನೆ ನೆರವೇರಿಸಲಾಗುವುದು’ ತಿಳಿಸಿದರು.
ಪ್ರಜಾವಠಾಣಿ ಜೊತೆ ಮಾತನಾಡಿದ ತಾ.ಪಂ ಇಒ ಮಹಾದೇವ ಜಮ್ಮು, ‘ಸಾರ್ವಜನಿಕರಿಗಾಗಿ ಸರ್ಕಾರಿ ಪ್ರೌಢಶಾಲೆ ಹಿಂಬದಿಯಲ್ಲಿ ನೂತನ ಗ್ರಂಥಾಲಯ ನಿರ್ಮಿಸಿ ಪುಸ್ತಕ, ಕುರ್ಚಿ ಹಾಗೂ ಮತ್ತಿತರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಆದಷ್ಟು ಬೇಗ ಉದ್ಘಾಟಿಸಲಾಗುವುದು’ ಎಂದು ಹೇಳಿದರು.
ಬಸ್ ನಿಲ್ದಾಣದ ಹತ್ತಿರ ಗ್ರಂಥಾಲಯ ಇದ್ದರೆ ಗ್ರಾಮಾಂತರ ಪ್ರದೇಶಗಳಿಂದ ಬಂದ ಸಾರ್ವಜನಿಕರು ಬಿಡುವಿನ ವೇಳೆಯಲ್ಲಿ ಬಸ್‌ಗಳು ತಡವಾದರೆ ವಿದ್ಯಾರ್ಥಿಗಳು ಓದಿನಲ್ಲಿ ತೊಡಗುತ್ತಾರೆ–ಅಂಬಿಕಾ, ಎಂಜಿನಿಯರಿಂಗ್ ವಿದ್ಯಾರ್ಥಿನಿ
ಗ್ರಂಥಾಲಯ ಒಳ್ಳೆಯ ವಾತಾವರಣದಲ್ಲಿ ನಿರ್ಮಾಣವಾಗಿದೆ. ಇನ್ನಷ್ಟು ಉತ್ತಮ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಅಭಿವೃದ್ಧಿಯಾಗಲಿ–ಬಸವಕುಮಾರ ಕವಟೇ, ಇತಿಹಾಸ ಉಪನ್ಯಾಸಕ
ಗ್ರಂಥಾಲಯಕ್ಕೆ ಎಲ್ಲ ವಯೋಮಾನದವರೂ ಬರುತ್ತಾರೆ. ನೂತನ ಕಟ್ಟಡ ನಿರ್ಮಾಣ ಮಾಡಿರುವುದು ಸಂತೋಷ. ಸುತ್ತಲಿನ ವಾತಾವರಣ ಕಲುಷಿತಗೊಂಡಿದ್ದು ಓದುಗರಿಗೆ ಶುಭ್ರ ವಾತಾವರಣ ಶುದ್ಧ ಗಾಳಿ ಅಚ್ಚುಕಟ್ಟಾದ ಬೆಳಕು ಅವಶ್ಯ–ಶೇಷರಾವ್ ಪಾಟಿಲ, ನಿವೃತ್ತ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.