
ಹುಲಸೂರ ಸಮೀಪದ ಮೇಹಕರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ನೂತನ ಬಸ್ ನಿಲ್ದಾಣದ ನೀಲನಕ್ಷೆ
ಹುಲಸೂರ: ಸಮೀಪದ ಮೇಹಕರನಲ್ಲಿ ಅಂದಾಜು ₹1.07 ಕೋಟಿ ಅನುದಾನದಲ್ಲಿ ನೂತನ ಬಸ್ ಸ್ಟಾಂಡ್ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
ಲೋಕೋಪಯೋಗಿ ಇಲಾಖೆ ಹಾಗೂ ಕೆಕೆಆರ್‌ಡಿಬಿ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಸ್ ನಿಲ್ದಾಣ ಕಾಮಗಾರಿಯಿಂದ ಸಾಯಗಾಂವ ಹೋಬಳಿಯ ಬೊಳೆಗಾಂವ, ನಾರದಾ ಸಂಗಮ, ಅಟ್ಟರಗಾ, ಕೊಂಗಳಿ, ಅಳವಾಯಿ, ಹಲಸಿ ತುಗಾಂವ, ಮಾಣಿಕೇಶ್ವರ ಗ್ರಾಮಗ ಜನ ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಸ್ಪಷ್ಟ ರೂಪ ದೊರೆತಿದೆ.
ಮೇಹಕರ ಗಡಿ ಪ್ರದೇಶದಲ್ಲಿರುವ ಪ್ರಮುಖ ಸಂಚಾರ ಕೇಂದ್ರವಾಗಿದ್ದು ಶಿಕ್ಷಣ, ವ್ಯಾಪಾರ, ಕೃಷಿ ಉತ್ಪನ್ನ ಸಾಗಣೆ ಹಾಗೂ ಉದ್ಯೋಗ ಸಂಬಂಧಿತ ಪ್ರಯಾಣಕ್ಕೆ ಪ್ರತಿದಿನ ನೂರಾರು ಜನ ಇದನ್ನೇ ಅವಲಂಬಿತರಾಗಿದ್ದಾರೆ. ನಿತ್ಯ ಭಾಲ್ಕಿ ಮತ್ತು ಬಸವಕಲ್ಯಾಣ ಬಸ್ ಘಟಕದಿಂದ ಸುಮಾರು 14 ಬಸ್ ಹಾಗೂ ಮಹಾರಾಷ್ಟ್ರದಿಂದ 8 ಬಸ್ ಪ್ರಯಾಣ ನಡೆಯುತ್ತದೆ.
ನೂತನ ಬಸ್ ಸ್ಟಾಂಡ್ ನಿರ್ಮಾಣದಿಂದ ಸುತ್ತಮುತ್ತಲಿನ ಹಳ್ಳಿಗಳ ಜನರ ಸಂಚಾರ ಸುಗಮವಾಗಲಿದ್ದು ಆರ್ಥಿಕ ಚಟುವಟಿಕೆಗಳಿಗೆ ಸಹ ಉತ್ತೇಜನ ದೊರೆಯಲಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಗಡಿಭಾಗದ ಗ್ರಾಮೀಣ ಜನಜೀವನಕ್ಕೆ ಸೌಕರ್ಯ, ಭದ್ರತೆ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ.
ಪ್ರಯಾಣಿಕ ಸ್ನೇಹಿ ವಿನ್ಯಾಸ: ನೂತನ ಬಸ್ ಸ್ಟಾಂಡ್ ಅನ್ನು ಪ್ರಯಾಣಿಕ ಸ್ನೇಹಿ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ವಿಶಾಲ ಆಶ್ರಯ ಮಂಟಪ, ಮಹಿಳೆ–ಪುರುಷರಿಗೆ ಪ್ರತ್ಯೇಕ ನಿರೀಕ್ಷಣಾ ಕೊಠಡಿಗಳು, ಸುವ್ಯವಸ್ಥಿತ ಟಿಕೆಟ್ ಕೌಂಟರ್‌ಗಳು, ಶುದ್ಧ ಶೌಚಾಲಯ ಸೌಲಭ್ಯ, ಕುಳಿತುಕೊಳ್ಳಲು ಬೆಂಚ್‌ಗಳು, ವಯೋವೃದ್ಧರು ಮತ್ತು ಅಂಗವಿಕಲರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ. ಇದರಿಂದ ಬಿಸಿಲು–ಮಳೆಯ ಸಮಯದಲ್ಲಿ ಪ್ರಯಾಣಿಕರು ಎದುರಿಸುತ್ತಿದ್ದ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಅಲ್ತಾಫ್ ಮಿಯಾ ಪ್ರಜಾವಾಣಿಗೆ ಮಾಹಿತಿ ನೀಡಿದರು.
ಈಗಾಗಲೇ ಬಸ್ ನಿಲ್ದಾಣದ ಕಾಮಗಾರಿಗೆ ಸಚಿವರಿಂದ ಶಂಕುಸ್ಥಾಪನೆ ಮಾಡಲಾಗಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆಅಲ್ತಾಫ್ ಮಿಯಾ ಎಇಇ ಲೋಕೋಪಯೋಗಿ ಇಲಾಖೆ ಭಾಲ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.