ಹುಲಸೂರ: ‘ಗ್ರಾಮ ಪಂಚಾಯಿಯಿತಿಯ 15ನೇ ಹಣಕಾಸು ಯೋಜನೆಯಲ್ಲಿ ₹ 35 ಲಕ್ಷ ರೂಪಾಯಿ ಅವ್ಯವಹಾರ ನಡೆದಿದೆ’ ಎಂದು ಗ್ರಾಮ ಪಂಚಾಯಿತಿ 14 ಜನ ಸದಸ್ಯರು ಆರೋಪಿಸಿ ಗುರುವಾರ ಬೆಳಗ್ಗೆ ಪಂಚಾಯಿತಿ ಎದುರು ಧರಣಿ ನಡೆಸಿದರು.
ಗ್ರಾಮ ಪಂಚಾಯತಿ ಸದಸ್ಯ ನಾಗೇಶ ಮೇತ್ರೆ ಮಾತನಾಡಿ, ‘ಪಿಡಿಒ ಅವರು ಕಳೆದ ಮೂರು ತಿಂಗಳಿಂದ ಗ್ರಾ.ಪಂ. ವತಿಯಿಂದ ನಿಧಿ 1 ಮತ್ತು 2 ಹಾಗೂ 15ನೇ ಹಣಕಾಸಿನಲ್ಲಿ ಆದ ಜಮಾ ಖರ್ಚು ವೆಚ್ಚದ ಕುರಿತು ಮಾಹಿತಿ ನೀಡುತ್ತಿಲ್ಲ. ಪಂಚಾಯಿತಿಯಲ್ಲಿ ಹಣದ ಅವ್ಯವಹಾರ ನಡೆದಿದೆ. ಸುಳ್ಳು ದಾಖಲೆ ಸೃಷ್ಟಿಸಿ ಹಣ ವರ್ಗಾವಣೆ ನಡೆಯುತ್ತಿರುವ ಕುರಿತು ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ತನಿಖೆ ನಡೆಸಲು ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.
ಇನ್ನೊಬ್ಬ ಸದಸ್ಯ ದೇವೇಂದ್ರ ಪವಾರ ಮಾತನಾಡಿ, ‘2021ರಿಂದ 2025ನೇ ಸಾಲಿನ ಜಮಾ ಖರ್ಚು, ಖಾತಾ ಮುಟೇಶನ್ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಯ ವಿವರವಾಗಿ ಲಿಖಿತ ಮಾಹಿತಿ ನೀಡಬೇಕು. ಜಿ.ಪಂ ಮುಖ್ಯ ಸಿಇಒ ಅವರು ನಮ್ಮ ಅಹವಾಲು ಸ್ವೀಕರಿಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ ಮೇತ್ರೆ ಹಾಗೂ ತಾಲ್ಲೂಕು ಪಂಚಾಯತ ಇಒ ಮಹಾದೇವ ಜಮ್ಮು ಭೇಟಿ ಕೊಟ್ಟು, ‘ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರ ಬೇಡಿಕೆ ಕುರಿತು ಜಿ.ಪಂ ಉಪಕಾರ್ಯದರ್ಶಿ ಮುತ್ತಣ್ಣ ಕರಿಗಾರ ಅವರ ಗಮನಕ್ಕೆ ತರುವ ಮೂಲಕ ಹುಲಸೂರ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಮಗ್ರ ಮಾಹಿತಿ ನೀಡಲಾಗುವುದು. ಕೂಡಲೇ ಸದಸ್ಯರು ಧರಣಿ ನಿಲ್ಲಿಸಬೇಕು’ ಎಂದು ಮನವೊಲಿಕೆ ಮಾಡಿದರು.
ಮನವಿಗೆ ಸ್ಪಂದಿಸದ ಗ್ರಾಮ ಪಂಚಾಯತಿ ಸದಸ್ಯರು ಬಳಿಕ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜಯಪ್ರಕಾಶ ಚವ್ಹಾಣ ಭೇಟಿ ಕೊಟ್ಟು ಸದಸ್ಯರೊಂದಿಗೆ ಚರ್ಚಿಸಿ ಪಿಡಿಒ ಅವರಿಗೆ ಅವರ ಬೇಜವಾಬ್ದಾರಿ ಧೋರಣೆಗೆ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿ, ತಾ.ಪಂ ಇಒ ಅವರಿಂದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪ್ರಯತ್ನ ಮಾಡಲಾಗುವುದು ಎಂದರು. ಬಳಿಕ ಸದಸ್ಯರು ಧರಣಿ ಹೋರಾಟ ಕೈಬಿಟ್ಟರು.
ಗ್ರಾಮ ಪಂಚಾಯತಿ ಸದಸ್ಯರಾದ ಸಂಜುಕುಮಾರ ಭೂಸಾರೆ,ಸಂತೋಷ್ ಗಾಯಕವಾಡ, ಯಾಸ್ಮಿನ್ ಪಟೇಲ್, ರೋಹಿಣಿ ಜಾನಬ, ನಿತೇಶ್ ಪಾಟೀಲ್, ಮುಕ್ತಬಾಯಿ ಜಾಧವ, ನಸ್ರೀನ್ ಠಾಕೂರ್, ಸುನೀತಾ ಶಿವಕುಮಾರ, ಪ್ರೇಮಾಲಾ ಚಂದ್ರಕಾಂತ್, ಅನುಸಾಯ ಸೂರ್ಯಕಾಂತ, ಅನಿತಾ ಜಾಧವ, ಗುರುನಾಥ ಕೊಡಂಬಲೆ ಉಪಸ್ಥಿತರಿದ್ದರು.
ಗ್ರಾ.ಪಂಗೆ ಸಂಬಂಧಿಸಿದ ನಿಯಮ ಗಾಳಿಗೆ ತೂರಿ ಅಧ್ಯಕ್ಷ ಮತ್ತು ಪಿಡಿಒ ಅವರು ತಮ್ಮದೇ ರೀತಿಯಲ್ಲಿ ಆಡಳಿತ ನಡೆಸುತ್ತಿರುವುದು ಖಂಡನೀಯಯಾಸ್ಮಿನ್ ಪಟೇಲ್ ಗ್ರಾ.ಪಂ ಸದಸ್ಯೆ ಹುಲಸೂರ
‘ಕಾರಣ ಕೇಳಿ ಕ್ರಮ’
‘ಗ್ರಾ.ಪಂಗೆ ಸಂಬಂಧಿಸಿದ ಲೆಕ್ಕ ಪತ್ರ ನೀಡಲು ಆಗ್ರಹಿಸಿ ಒಂದು ತಿಂಗಳ ಹಿಂದೆ ಸದಸ್ಯರು ಮನವಿ ಪತ್ರ ಸಲ್ಲಿಸಿದ್ದಾರೆ. ಈ ವಿಷಯ ಕುರಿತು ಸಂಬಂಧಿಸಿದ ಪಿಡಿಒ ಅವರಿಗೆ ಮಾಹಿತಿ ನೀಡುವಂತೆ ಒಂದು ವಾರ ಕಾಲಾವಕಾಶ ನೀಡಿದ್ದೇವೆ. ಆದರೆ ಪಿಡಿಒ ಅವರು ತಾ.ಪಂ ಗೆ ಮಾಹಿತಿ ನೀಡಿಲ್ಲ ಈ ಕುರಿತು ಕಾರಣ ಕೇಳಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಾ.ಪಂ ಇಒ ಮಹಾದೇವ ಜಮ್ಮು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.