
ಹುಲಸೂರ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಂಗಾರು ಬಿತ್ತನೆಗೆ ಅಡ್ಡಿ ಆಗಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಹಿಂಗಾರು ಹಂಗಾಮಿನ ಕಡಲೆ, ಗೋಧಿ, ಬಿಳಿಜೋಳ, ಕುಸುಬಿ ಬಿತ್ತನೆ ಕಾರ್ಯ ಮುಗಿಯಬೇಕಾಗಿತ್ತು. ಆದರೆ, ಆಗಾಗ ಸುರಿಯುತ್ತಿರುವ ಮಳೆ ಬಿತ್ತನೆಗೆ ತಡೆಯೊಡ್ಡಿದೆ.
ಈ ವರ್ಷದ ಮುಂಗಾರು ಮಳೆಗೆ ಎಲ್ಲ ಬೆಳೆಗಳೂ ಹಾಳಾಗಿದ್ದು ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಿಂಗಾರು ಬೆಳೆಗಳಾದರೂ ಕೈ ಹಿಡಿಯುತ್ತದೆ ಎಂಬ ಆಸೆ ರೈತರಲ್ಲಿತ್ತು. ಈ ಮಧ್ಯೆ ಕೆಲ ರೈತರು ಧೈರ್ಯ ಮಾಡಿ ಬಿತ್ತನೆ ಮಾಡಿರುವ ಬೀಜಗಳು ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಹೊಲದಲ್ಲಿ ನೀರು ನಿಂತಿರುವುದರಿಂದ ಬೆಳೆಗಳು ಕೊಳೆತು ಹೋಗುವ ಸ್ಥಿತಿಗೆ ತಲುಪಿವೆ. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಮಾಡಿರುವ ಸಾಲ ತೀರಿಸುವುದು ಹೇಗೆ, ಬದುಕು ನಡೆಸುವುದು ಹೇಗೆ ಎಂಬ ಚಿಂತೆ ಅನ್ನದಾತರನ್ನು ಕಾಡುತ್ತಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆಯಾಗಿದೆ. ಇಳುವರಿ ಕುಸಿಯುವ ಆತಂಕ ಎದುರಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ತೊಗರಿ ಬೆಳೆಯಲಾಗುತ್ತದೆ. ಸತತ ಮಳೆಗೆ ಎಲ್ಲ ಫಸಲು ನಲುಗಿದ್ದು, ಕೊಳೆ ರೋಗಕ್ಕೆ ತುತ್ತಾಗಿದೆ. ಗಿಡಗಳು ಒಣಗಿ ನಿಂತಿವೆ. ರೈತರು ಫಸಲು ಉಳಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ.
ತಾಲ್ಲೂಕಿನ ಕೆಲವೆಡೆ ಹೆಚ್ಚು ಮಳೆ ಸುರಿದಿದ್ದರಿಂದ ತೊಗರಿ ಎಲೆ ಉದುರಿವೆ. ಶೇ 50 ರಷ್ಟು ನಾಶವಾಗಿದೆ. ಬೇರು ಕೊಳೆಯುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಳ, ಪೋಷಕಾಂಶದ ಕೊರತೆ ಮತ್ತು ಸೂರ್ಯನ ಬಿಸಿಲಿನ ಕೊರತೆಯಿಂದ ಈ ಸಮಸ್ಯೆ ಕಾಡುತ್ತಿದೆ ಹವಾಮಾನ ವೈಪರೀತ್ಯದಿಂದಾಗಿ ದುಬಾರಿ ಔಷಧ ತಂದು ಹಾಕಿದರೂ ರೋಗಗಳು ಹತೋಟಿಗೆ ಬರುತ್ತಿಲ್ಲ ಎನ್ನುತ್ತಾರೆ ರೈತ ಶಿವಕುಮಾರ ಮೇತ್ರೆ.
ಹುಲಸೂರ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗುತ್ತಿರುವುದರಿಂದ ಅನೇಕ ರೈತ ಕುಟುಂಬಗಳು ಕೃಷಿ ಸಾಲ ತೀರಿಸಲು ನಗರಗಳತ್ತ ದುಡಿಯಲು ಹೋಗುವುದು ಅನಿವಾರ್ಯವಾಗಿದೆ. ಕೆಲ ಸಣ್ಣ ರೈತರು ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.ಅದಕ್ಕಾಗಿ ಕೃಷಿ ಹಾಗೂ ಕಂದಾಯ ಇಲಾಖೆ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸಕಾಲಕ್ಕೆ ಸರ್ಕಾರ ಬೆಳೆ ಪರಿಹಾರ ಮಂಜೂರು ಮಾಡಬೇಕು ಎಂದು ರೈತ ಸುನೀಲ ಭುಜಂಗೆ ಆಗ್ರಹಿಸುತ್ತಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಮುಂಗಾರು, ಹಿಂಗಾರು ಎರಡು ಬೆಳೆಗಳು ಮಳೆ ನೀರಿಗೆ ತುತ್ತಾಗಿವೆ. ವರ್ಷವಿಡೀ ದುಡಿದರೂ ತಕ್ಕ ಫಲ ಸಿಗಲಿಲ್ಲ. ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ತಕ್ಷಣ ಮುಂಗಾರು, ಬೆಳೆ ಹಾನಿ, ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ಬಿತ್ತನೆ ಸಂದರ್ಭದಲ್ಲಿ ಹಾನಿ ಮತ್ತು ಬೆಳೆ ನಷ್ಟವನ್ನು ಸ್ಥಳಕ್ಕೆ ಬಂದು ಪರಿಶೀಲಿಸಿ, ಸಮೀಕ್ಷೆ ನಡೆಸಿ ಪರಿಹಾರ ಧನ ನೀಡಬೇಕು. ಸರ್ಕಾರ ವಿಶೇಷ ಪ್ಯಾಕೇಜ್ ರೂಪದಲ್ಲಿ ಪರಿಹಾರ ನೀಡಬೇಕು ಎಂದು ರೈತ ಮುಖಂಡ ದೇವೇಂದ್ರ ಹಾಲಿಂಗೆ ಆಗ್ರಹಿಸಿದ್ದಾರೆ.
- ರೈತರು ಬಿತ್ತನೆ ಸಂದರ್ಭದಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಲಘು ಪೋಷಕಾಂಶ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕು.ಗೌತಮ ವಾಘ್ಮಾರೆ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ
ಮಳೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಫಸಲು ಕೈಗೆ ಸಿಗದೆ ಖರ್ಚಿಗೆ ಕಾಸಿಲ್ಲದಂತಾಗಿದೆ. ಸರ್ಕಾರ ಪರಿಹಾರ ಕೊಟ್ಟರೆ ಮಾತ್ರ ರೈತ ಉಸಿರಾಡಬಹುದು.ದೇವೇಂದ್ರ ಹಾಲಿಂಗೆ ರೈತ ಸಂಘದ ತಾಲ್ಲೂಕು ಮುಖಂಡ
ಮುಂಗಾರು ಬೆಳೆ ಹಾನಿ ಬೆಳೆ ವಿಮೆ ಸಮೀಕ್ಷೆ ನಡೆಸಿ ಪರಿಹಾರಧನ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಹಿಂಗಾರು ಹಾನಿ ಕಂಡು ಬಂದರೆ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದುಶಿವಾನಂದ ಮೇತ್ರೆ, ತಹಶೀಲ್ದಾರ್
ಕಳೆದ ಒಂದು ತಿಂಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಮಾಂಜ್ರಾ ನದಿ ಪ್ರವಾಹದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಜಮೀನುಗಳನ್ನು ಲೀಸ್ (ಗುತ್ತಿಗೆ) ಪಡೆದು ಕೃಷಿ ಮಾಡಿದ್ದ ರೈತರಲ್ಲಿ ಆತಂಕದ ಛಾಯೆ ಮೂಡಿದೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ಅನೇಕ ಸಣ್ಣ ರೈತರು ಒಣ ಬೇಸಾಯ ಎಕರೆಗೆ ₹ 10,000, ನೀರಾವರಿ ಎಕರೆಗೆ ₹ 15,000 ಹಾಗೂ ಭತ್ತಕ್ಕೆ ₹ 40,000 ಹೀಗೆ ಹಣಕ್ಕೆ ಜಮೀನುಗಳನ್ನು ಲೀಸ್‌ಗೆ ಪಡೆದು ಅದರಲ್ಲಿ ಸೋಯಾ ಅವರೆ, ತೊಗರಿ, ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿದ್ದರು. ಆದರೆ ಈಗ ಹಿಂಗಾರು ಬಿತ್ತನೆಗೆ ವಿಳಂಬ ಆಗಿರುವ ಹಿನ್ನಲೆ ಜಮೀನುಗಳನ್ನು ಲೀಸ್‌ಗೆ ಪಡೆದು ಬೆಳೆಯನ್ನು ಬೆಳದ ರೈತರು ಭೂಮಾಲೀಕರಿಗೆ ಲೀಸ್‌ನ ಹಣ ಹೇಗೆ ಕೊಡುವುದು ಎಂಬ ಚಿಂತೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಜಮೀನು ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗೆ ಲಿಂಕ್ ಇರುತ್ತದೆ. ಅಂತಹ ರೈತರಿಗೆ ಮಾತ್ರ ಬೆಳೆ ಪರಿಹಾರ ಜಮಾ ಮಾಡುವುದು ಸರ್ಕಾರದ ನಿಯಮ, ಆದೇಶ ಇದೆ. ಆದರೆ ಲೀಸ್‌ಗೆ ಜಮೀನು ಪಡೆದಿರುವ ರೈತರು, ಸಾವಿರಾರು ರೂಪಾಯಿಗಳನ್ನು ಸಾಲ ಮಾಡಿ, ದುಬಾರಿ ಬೆಲೆಯ ಬಿತ್ತನೆಯ ಬೀಜ ತಂದು ಬಿತ್ತನೆ ಮಾಡಿದ್ದಾರೆ.
ಭೂಮಾಲೀಕರು ಸರ್ಕಾರದ ಬೆಳೆ ಪರಿಹಾರ ತಾವು ಪಡೆದು ಲೀಸ್ ಹಣವನ್ನು ಮನ್ನಾ ಮಾಡಬೇಕು ಎಂದು ಲೀಸ್ ಪಡೆದ ಅನೇಕ ರೈತರ ಒತ್ತಾಸೆಯಾಗಿದೆ.