ಚಿಟಗುಪ್ಪ (ಹುಮನಾಬಾದ್): ಚಿಟಗುಪ್ಪ ಪಟ್ಟಣದಲ್ಲಿರುವ ತಾಲ್ಲೂಕು ಪಶು ಆಸ್ಪತ್ರೆ ಈಗ ಸ್ಥಳ ಅಭಾವದಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಚಿಕಿತ್ಸೆಗಾಗಿ ಜಾನುವಾರು ತರುವ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಪಟ್ಟಣ ಸೇರಿದಂತೆ ಸುತ್ತಮೂತ್ತಲ್ಲಿನ ಹತ್ತಾರು ಗ್ರಾಮಗಳ ರೈತಾಪಿ ಜನರು ತಮ್ಮ ಜಾನುವಾರಗಳ ಚಿಕಿತ್ಸೆಗಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.
ಸುಮಾರು 5, 6 ದಶಕಗಳ ಹಿಂದೆ ಪಟ್ಟಣದ ಹೊರಭಾಗದಲ್ಲಿ ಪಶು ಆಸ್ಪತ್ರೆ ನಿರ್ಮಾಣಗೊಂಡಿತ್ತು. ಆಗ ಸ್ಥಳದ ಕೊರತೆ ಅಷ್ಟಾಗಿ ಬಾಧಿಸಲಿಲ್ಲ. ಆದರೆ ದಿನಕಳೆದಂತೆ ಪಟ್ಟಣ ವ್ಯಾಪಕವಾಗಿ ಬೆಳೆದಿದ್ದು, ಆಸ್ಪತ್ರೆ ಈಗ ಮಧ್ಯಭಾಗದಲ್ಲಿ ಬಂದಿದೆ. ಕಟ್ಟಡಗಳ ದಡ್ಡಣೆಯಿಂದ ಈಗ ಸ್ಥಳದ ಅಭಾವ ಉದ್ಭವವಾಗಿದೆ. ಹಳೆಯ ಕಟ್ಟಡಕ್ಕೆ ಹೊಂದಿಕೊಂಡೆ ಹೊಸದೊಂದು ಕಟ್ಟಡ ನಿರ್ಮಾಣವಾಗಿರುವುದರಿಂದ ಇಲ್ಲಿ ಜಾನುವಾರು ಸೇರಿದಂತೆ ಇಲ್ಲಿಗೆ ಬರುವ ಜನರಿಗೂ ಒಡಾಡಲು ಕಷ್ಟವಾಗುವ ಪರಿಸ್ಥತಿ ನಿರ್ಮಾಣವಾಗಿದೆ. ಚಿಕಿತ್ಸೆಗಾಗಿ ಇಲ್ಲಿಗೆ ಜಾನುವಾರ ತರಬೇಕೆಂದರೆ ಸಾಹಸವೇ ಮಾಡಬೇಕಾಗುತ್ತದೆ. ಪಟ್ಟಣದಲ್ಲಿ ಜನರು ಹಾಗೂ ವಾಹನಗಳ ಓಡಾಟದ ಮಧ್ಯೆ ಜಾನುವಾರು ತೆಗೆದುಕೊಂಡು ಬರುಲು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತಿದೆ ಎನ್ನುವುದು ಇಲ್ಲಿನ ರೈತಾಪಿ ಜನರ ಗೋಳಾಗಿದೆ.
ನೂತನ ತಾಲ್ಲೂಕು ಕೇಂದ್ರವಾಗಿರುವ ಚಿಟಗುಪ್ಪ ಪಟ್ಟಣದ ಹೊರವಲಯದ ಸೂಕ್ತ ಸ್ಥಳದಲ್ಲಿ ತಾಲ್ಲೂಕು ಪಶು ಚಿಕಿತ್ಸಾಲಯ ಕಚೇರಿ ಕಟ್ಟಡ, ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿವಾಸಿ ದತ್ತು ಒತ್ತಾಯಿಸಿದರು.
ಈಗಿರುವ ಪಶು ಚಿಕಿತ್ಸಾಲಯದಲ್ಲಿ ಅಗತ್ಯ ಸೌಕರ್ಯಗಳೂ ಇಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ. ಚಿಕಿತ್ಸೆಗೆಂದು ಜಾನುವಾರು ತರುವ ರೈತರು ಮತ್ತು ವೈದ್ಯರು ಸಹ ಬಹಿರ್ದೆಸೆ ಮತ್ತು ಮೂತ್ರ ವಿಸರ್ಜನೆಗೆ ಪರದಾಡಬೇಕಾದ ಸ್ಥತಿ ಇದೆ. ಆಸ್ಪತ್ರೆಯ ಅಕ್ಕಪಕ್ಕದಲ್ಲಿ ಅಂಗಡಿಗಳು ಮತ್ತು ಮನೆಗಳು ಇವೆ. ಹೀಗಾಗಿ ಮೂತ್ರಕ್ಕಾಗಿ ವಾಹನದಲ್ಲಿ ಕಿ.ಮೀವರೆಗೆ ಕ್ರಮಿಸಬೇಕು. ಸಂಬಂಧಪಟ್ಟ ಮೇಲಾಧಿಕಾರಿಗಳು ಆಸ್ಪತ್ರೆಯಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಮಾದಿಗ ದಂಡೋರ ಸಮಿತಿ ಮುಖಂಡ ಲಾಲಪ್ ಆಗ್ರಹಿಸಿದ್ದಾರೆ.
ಪಶು ಚಿಕಿತ್ಸಾಲ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಆಸ್ಪತ್ರೆ ಒಳಗಡೆ ಜಾನುವಾರು ತರುವ ಸ್ಥಳ ಇಕ್ಕಟ್ಟಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕುಮಲ್ಲಿಕಾರ್ಜುನ ಪಾಟೀಲ ನಿವಾಸಿ
ಪಶು ಚಿಕಿತ್ಸಾಲಯದಲ್ಲಿ ಡಿ. ಗ್ರುಪ್ ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆಶಾಂತವೀರ ಗೋಪಾ ಚಿಕಿತ್ಸಾಲಯ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.