
ಹುಮನಾಬಾದ್ ಪಟ್ಟಣದಲ್ಲಿರುವ ತಹಶೀಲ್ದಾರ್ ವಸತಿ ಗೃಹ
ಹುಮನಾಬಾದ್: ತಾಲ್ಲೂಕಿನ ತಹಶೀಲ್ದಾರ್ ವಸತಿ ಗೃಹವು ಐದಾರು ವರ್ಷಗಳಿಂದ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಪಟ್ಟಣದ ಹಳೆಯ ತಹಶೀಲ್ದಾರ್ ಕಚೇರಿಯ ಸಮೀಪದಲ್ಲಿರುವ ತಹಶೀಲ್ದಾರ್ ವಸತಿ ಕೇಂದ್ರವು ಸೂಕ್ತ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾಗಿದ್ದು, ಸುಮಾರು ಆರು ವರ್ಷಗಳಿಂದ ವಸತಿ ಗೃಹದಲ್ಲಿ ಯಾವ ಅಧಿಕಾರಿಯೂ ವಾಸವಿಲ್ಲದೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.
ಹಳೇ ತಹಶೀಲ್ದಾರ್ ಕಚೇರಿಗೆ ಹೊಂದಿಕೊಂಡಿರುವ ಈ ವಸತಿ ಗೃಹಕ್ಕೆ ಬಾಗಿಲುಗಳಿಲ್ಲ. ಹಾಗಾಗಿ ಜೂಜಾಟ ಹಾಗೂ ಕುಡುಕರ ಇಲ್ಲಿ ಬರುತ್ತಿದ್ದಾರೆ. ಕಟ್ಟಡದ ಮುಂದೆ ಗಿಡಗಂಟಿ ಬೆಳೆದು ಯಾರೂ ಒಳಗಡೆ ಪ್ರವೇಶಿಸದ ಸ್ಥಿತಿ ತಲುಪಿದೆ. ಜೊತೆಗೆ ಮಲ, ಮೂತ್ರ ವಿಸರ್ಜನೆ ತಾಣವಾಗಿ ಪರಿವರ್ತನೆಯಾಗಿದೆ.
ಪಟ್ಟಣದ ಕೇಂದ್ರ ಸ್ಥಾನದಲ್ಲಿ ತಹಶೀಲ್ದಾರ್ ವಾಸವಿದ್ದರೆ ಸಾರ್ವಜನಿಕರ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಿಸಿದ್ದ ವಸತಿ ಗೃಹ ಅಧಿಕಾರಿಗಳು ವಾಸಿಸದೆ ಶಿಥಿಲಾವಸ್ಥೆ ತಲುಪಿದೆ. ಹಾಗಾಗಿ ಕಟ್ಟಡ ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಶಯ.
ಅಕ್ರಮ ಚಟುವಟಿಕೆಗಳ ತಾಣ: ಪಾಳು ಬಿದ್ದ ತಹಶೀಲ್ದಾರ್ ವಸತಿ ಗೃಹ ಕಟ್ಟಡದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಕುಡಿಯುವ ನೀರು, ಮದ್ಯದ ಬಾಟಲ್, ಸಿಗರೇಟ್ ಸೇರಿದಂತೆ ಇನ್ನಿತರ ಚಟುವಟಿಕೆಗಳ ತ್ಯಾಜ್ಯ ದುರ್ನಾತ ಹರಡುತ್ತಿದೆ. ಮಧ್ಯಾಹ್ನ, ರಾತ್ರಿ ಯುವಕರ ಗುಂಪು ನಶೆಯ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ಕೊಠಡಿಗಳು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ.
‘ಏನಾದರೂ ಪ್ರಶ್ನಿಸಿದರೆ ಅಮಲಿನಲ್ಲಿರುವ ಯುವಕರ ಗುಂಪು ಹಲ್ಲೆಗೆ ಮುಂದಾಗುತ್ತಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಅಕ್ರಮ ಚಟುವಟಿಕೆಗಳಿಗೆ ತಕ್ಷಣಕ ಕಡಿವಾಣ ಹಾಕಬೇಕು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಸದ್ಬಳಕೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಸಾರ್ವಜನಿಕರು.
ಈಗಲಾದರೂ ಅಧಿಕಾರಿಗಳು ಬಗ್ಗೆ ಗಮನ ಹರಿಸಬೇಕು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.–ನವಿನ್ ಬತಲಿ, ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯದರ್ಶಿ
ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹ ನೆಲಸಮ ಮಾಡಿ ನೂತನ ವಸತಿ ಗೃಹ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು–ಅಂಜುಂ ತಬಸುಮ್, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.