
ಹುಮನಾಬಾದ್: ತುಕ್ಕು ಹಿಡಿದಿರುವ ಶುದ್ಧ ಕುಡಿಯುವ ನೀರಿನ ಘಟಕ, ಹದಗೆಟ್ಟ ರಸ್ತೆ, ಇದ್ದೂ ಇಲ್ಲದಂತಿರುವ ಚರಂಡಿಗಳು, ನೀರಿನ ಸಮಸ್ಯೆ...
ಇದು ತಾಲ್ಲೂಕಿನ ಮದರವಾಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಕಾಪುರ್ ವಾಡಿ ಗ್ರಾಮದ ಚಿತ್ರಣ. ಗ್ರಾ.ಪಂ ಅಧ್ಯಕ್ಷರ ಸ್ವಂತ ಗ್ರಾಮದಲ್ಲೇ ಇಂತಹ ಸ್ಥಿತಿ ಇರುವಾಗ ಬೇರೆ ಗ್ರಾಮಗಳ ಸ್ಥಿತಿ ಏನಿರಬಹುದು ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ.
ಗ್ರಾಮ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಬಹುತೇಕ ಬಡಾವಣೆಗಳಲ್ಲಿ ಸೂಕ್ತ ಚರಂಡಿಗಳು ಇಲ್ಲ, ರಸ್ತೆಗಳ್ಲೇ ಕೊಳಚೆ ನೀರು ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ ಸೊಳ್ಳೆಗಳ ಕಾಟವೂ ಹೆಚ್ಚಳವಾಗಿದೆ.
ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ಗ್ರಾಮಸ್ಥರಲ್ಲಿ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿದೆ.
ಹಲವಾರು ತಿಂಗಳಿನಿಂದ ಪಂಚಾಯಿತಿ ಅಧಿಕಾರಿಗಳಿಗೆ ಕಾಲನಿಯ ವಾಸ್ತವ ಸ್ಥಿತಿ ಪರಿಶೀಲನೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿಗಳ ಸ್ವಚ್ಛತೆಯ ಬಗ್ಗೆ ಮನವಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು, ಜನಪ್ರತಿನಿದಿಗಳು ಬಂದು ಸಮಸ್ಯೆ ಆಲಸಿ ಹೋಗುತ್ತಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ ಎಂಬುದು ಜನರ ದೂರು.
‘ಅನೇಕ ವರ್ಷಗಳಿಂದ ಸಿಸಿ ರಸ್ತೆ, ಚರಂಡಿ ಸಮಸ್ಯೆ ಕಾಡುತ್ತಿದೇ. ಚರಂಡಿಗಳ ನೀರು ಮನೆ ಮುಂದೆ ನಿಲ್ಲುತ್ತಿದೆ. ನಮ್ಮ ಮಕ್ಕಳಿಗೆ ಮಲೇರಿಯಾಗಳಂತ ರೋಗಗಳು ಆಗಾಗ ಕಾಡುತ್ತವೆ. ಹೀಗಾಗಿ ಸಂಬಂಧಟ್ಟವರು ಚರಂಡಿ, ಸಿಸಿ ರಸ್ತೆ ನಿರ್ಮಾಣ ಮಾಡಬೇಕು’ ಎಂದು ನಿವಾಸಿ ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಮನೆಗಳಿದ್ದು, 1500 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲ ಜೀವನ ಮಷಿನ್ ಕಾಮಗಾರಿ ಉಪಯೋಗಕ್ಕೆ ಬಾರದಂತಾಗಿದೆ. ಒಂದು ಬಡಾವಣೆಗೆ ನೀರು ಬಂದರೆ ಇದರ ಪಕ್ಕದ ಬಡಾವಣೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಸರ್ಕಾರದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಸಮರ್ಕವಾಗಿ ನೀರು ಬರುತ್ತಿಲ್ಲ’ ಎಂದು ಗ್ರಾಮದ ಸರಸ್ವತಿ ಆಕ್ರೋಶಕ್ಕೆ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಶೀಘ್ರ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಬಗೆ ಹರಿಸಲಾಗುವುದುದಿಪೀಕಾ ನಾಯ್ಕರ್ ತಾ.ಪಂ ಅಧಿಕಾರಿ ಹುಮನಾಬಾದ್
ಜೆಜೆಎಂ ಕಾಮಗಾರಿ ಪರಿಶೀಲನೆ ನಡೆಸಲಾಗುವುದು. ಗ್ರಾಮದ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದುಶೇಖರ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಹುಮನಾಬಾದ್
ಚರಂಡಿಯಲ್ಲಿ ನೀರು ಹಿಡಿದುಕೊಳ್ಳುವ ಪರಿಸ್ಥಿತಿ!
‘ಮಲ್ಕಾಪುರ್ ವಾಡಿ ಗ್ರಾಮದಲ್ಲಿ ಮನೆ ಮನೆಗೆ ಸರಿಯಾಗಿ ನೀರು ಬರುತ್ತಿಲ್ಲ. ನಮ್ಮ ಮನೆಯ ಪಕ್ಕದಲ್ಲಿನ ನಲ್ಲಿಗಳು ಬಂದ್ ಆಗಿವೆ. ನಾವು ಕೊಲಿ ಕಾರ್ಮಿಕರು ನಿತ್ಯ ಕೆಲಸಕ್ಕೆ ಹೋಗಬೇಕು. ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸರಸ್ವತಿ ಬಸಮ್ಮಾ ತಮ್ಮ ಅಳಲು ತೋಡಿಕೊಂಡರು. ‘ಚರಂಡಿ ಪಕ್ಕದಲ್ಲಿ ಪೈಪ್‌ಲೈನ್‌ಗೆ ಸ್ವಲ್ಪ ನೀರು ಬರುತ್ತವೆ ಚರಂಡಿಯಲ್ಲಿ ಬಿಂದಿಗೆ ಇಟ್ಟುಕೊಂಡು ಅದೇ ನೀರು ತೆಗೆದುಕೊಳ್ಳುಬೇಕು. ಚರಂಡಿಯಲ್ಲಿ ತ್ಯಾಜ್ಯ ತುಂಬಿ ಗುಬ್ಬ ನಾರುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.