ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿಯಿಂದ ಆಪರೇಷನ್ ಪೋಲೋ ಕಾರ್ಯಾಚರಣೆಗಾಗಿ ಹೈದರಾಬಾದ್ ಕಡೆಗೆ ನಡೆದಿದ್ದ ಯುದ್ಧ ಟ್ಯಾಂಕರ್‌ಗಳನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿರುವುದು
ಸಂಗ್ರಹ ಚಿತ್ರ
ಬಸವಕಲ್ಯಾಣ: ತಾಲ್ಲೂಕಿನ ಮಧ್ಯದಿಂದ ಹಾದು ಹೋಗಿರುವ ಹೆದ್ದಾರಿ 1948ರಲ್ಲಿ ನಡೆದ ಸೇನಾ ಕಾರ್ಯಾಚರಣೆಯ ಯುದ್ಧ ಸದೃಶ್ಯ ವಾತಾವರಣಕ್ಕೆ ಸಾಕ್ಷಿಯಾಗಿ ನಿಂತಿದೆ.
ಹೈದರಾಬಾದ್ ಸಂಸ್ಥಾನದ ವಿಲೀನಕ್ಕೆ ನಡೆದ ಈ ಕಾರ್ಯಾಚರಣೆಯ ಮುಖ್ಯ ಮಾರ್ಗ ಇದಾಗಿದ್ದರಿಂದ ಯುದ್ಧ ಟ್ಯಾಂಕರ್‌ಗಳು ಇಲ್ಲಿಂದ ದೂಳೆಬ್ಬಿಸುತ್ತ ಮುನ್ನುಗ್ಗಿದ್ದವು. ಹೆದ್ದಾರಿ ಪಕ್ಕದ ಸಸ್ತಾಪುರ ಬಂಗ್ಲಾ ಎಂದೇ ಕರೆಯುವ ಪ್ರವಾಸಿ ಬಂಗ್ಲೆಯಲ್ಲಿ ಸೈನಿಕರು ಕೆಲಕಾಲ ವಿಶ್ರಮಿಸಿದ್ದರು.
ಸೈನಿಕ ತುಕಡಿಗಳ ಆರ್ಭಟ, ಮದ್ದು ಗುಂಡುಗಳ ಸದ್ದಿನಿಂದ ಈ ಭಾಗದ ಜನತೆ ಬೆಚ್ಚಿಬಿದ್ದಿತ್ತು. ಹೆದ್ದಾರಿ ಪಕ್ಕದ ಊರಿನವರಷ್ಟೇ ಅಲ್ಲ; ಕಲಬುರಗಿ, ಆಳಂದ, ಚಿಂಚೋಳಿವರೆಗಿನ ಜನರೂ ಇಲ್ಲಿಗೆ ಧಾವಿಸಿ ಬಂದು ಸೈನ್ಯ ಶಕ್ತಿಯನ್ನು ಕಣ್ಣಾರೆ ಕಂಡರು. 1948 ರ ಸೆಪ್ಟೆಂಬರ್ 13ರಂದು ಸೊಲ್ಲಾಪುರದಿಂದ ಹೊರಟಿದ್ದ ಸೈನ್ಯ ನಳದುರ್ಗ, ಉಮರ್ಗಾ, ಚಂಡಕಾಪುರ, ಹಳ್ಳಿ, ಸಸ್ತಾಪುರ, ಬಸವಕಲ್ಯಾಣ, ತಡೋಳಾ, ರಾಜೇಶ್ವರ, ಹುಮನಾಬಾದ್, ಹುಡಗಿ, ತಾಳಮಡಗಿ, ಮನ್ನಾಎಖ್ಖೆಳ್ಳಿ, ಜಹೀರಾಬಾದ್ ಮೂಲಕ ಸೆಪ್ಟೆಂಬರ್ 17ಕ್ಕೆ ಹೈದರಾಬಾದ್ ತಲುಪಿತು.
ಹೆದ್ದಾರಿ ಕಚ್ಚಾ ರಸ್ತೆಯಂತಿದ್ದ ಕಾರಣ ಸೈನಿಕರ ವಾಹನಗಳು, ಟ್ಯಾಂಕರ್‌ಗಳಿಗೆ ಹೋಗಲು ಅಡೆತಡೆ ಆಗುತ್ತಿತ್ತು. ಆದ್ದರಿಂದ ಆಯಾ ಗ್ರಾಮದವರು ಹಾರೆ, ಗುದ್ದಲಿ, ಟಿಕಾವು, ಬುಟ್ಟಿಗಳನ್ನು ತಂದು ತಗ್ಗು–ಗುಂಡಿಗಳನ್ನು ಮುಚ್ಚಿ, ಮುಳ್ಳು–ಕಂಟಿಗಳನ್ನು ತೆರವುಗೊಳಿಸಿ ಸೈನ್ಯ ಮುಂದೆ ಸಾಗುವುದಕ್ಕೆ ನೆರವಾದರು. ಸೈನಿಕರಿಗೆ ನೀರು, ಆಹಾರ ಪೊರೈಕೆಯೂ ಮಾಡಲಾಗಿತ್ತು ಎಂದು ಹಿರಿಯರು ಹೆಮ್ಮೆಯಿಂದ ಹೇಳಿರುವುದು ಈಗಲೂ ಅನೇಕರಿಗೆ ನೆನಪಿದೆ.
ಎಷ್ಟೇ ಪ್ರಯತ್ನಿಸಿದರೂ ಈ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ಒಪ್ಪಿರಲಿಲ್ಲ. ಆದ್ದರಿಂದ 1947ರಲ್ಲಿ ಮುದ್ರಿತಗೊಂಡ ಭಾರತದ ನಕಾಶೆಯಲ್ಲಿ ಈ ಸಂಸ್ಥಾನದ ಭಾಗವನ್ನು ಖಾಲಿಯಾಗಿ ಬಿಡಲಾಗಿತ್ತು. ‘ದ ನ್ಯೂಯಾರ್ಕ್ ಟೈಮ್ಸ್’ನಂಥ ಪ್ರತಿಷ್ಠಿತ ಪತ್ರಿಕೆ ಇದೇ ನಕಾಶೆಯನ್ನು ಮುಖಪುಟದಲ್ಲಿ ಪ್ರಕಟಿಸಿತ್ತು.
ಮೇಲಾಗಿ ಇಲ್ಲಿ ರಜಾಕಾರ್ ಸಂಘಟನೆಯವರ ದೌರ್ಜನ್ಯ ಹೆಚ್ಚಿತು. ಆರ್ಯ ಸಮಾಜದ ಧುರೀಣರಾಗಿದ್ದ ಉಮರ್ಗಾ ಸಮೀಪದ ಗುಂಜೇಟಿಯ ವೇದಪ್ರಕಾಶ ಮತ್ತು ಬಸವಕಲ್ಯಾಣದ ಧರ್ಮಪ್ರಕಾಶ ಅವರ ಕೊಲೆ ನಡೆಯಿತು. ಧರ್ಮಪ್ರಕಾಶ ನೆಲಕ್ಕುರುಳಿದ್ದ ಸ್ಥಳದಲ್ಲಿ ಈಶ್ವರನಗರ ಓಣಿಯಲ್ಲಿ ಹುತಾತ್ಮ ಸ್ಮಾರಕದ ರೂಪದಲ್ಲಿ ಸ್ತಂಭ ನಿರ್ಮಿಸಲಾಗಿದೆ.
ಭಾರತ ಸರ್ಕಾರದ ರಾಜಪ್ರತಿನಿಧಿಯಾಗಿ ಈ ಸಂಸ್ಥಾನಕ್ಕೆ ನೇಮಕಗೊಂಡಿದ್ದ ಕೆ.ಎಂ.ಮುನ್ಶಿ ಅವರು ದಂಗೆ ನಡೆದ ಗೋರಟಾ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಮತ್ತಿತರೆ ಸ್ಥಳಗಳಿಗೆ ಭೇಟಿ ನೀಡಿದ್ದರು. ಆಗ ನೂರಾರು ಜನರ ಪ್ರಾಣ ಹೋಗಿರುವುದು ಮತ್ತು ರಸ್ತೆಗಳಲ್ಲೆಲ್ಲ ಹೆಣಗಳು ಸುಟ್ಟಿರುವುದು ಕಂಡುಬಂತು ಎಂದು ಅವರು ಸ್ವತಃ ಬರೆದ ‘ದ ಎಂಡ್ ಆಫ್ ಅನ್ ಇರಾ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದಂಗೆಯ ಕಾರಣ ಊರು ಬಿಟ್ಟಿದ್ದ ಬೀದರ್‌ನ ಬಹಳಷ್ಟು ನಿರಾಶ್ರಿತರಿಗೆ ಸೊಲ್ಲಾಪುರದಲ್ಲಿ ಕವಯತ್ರಿ ಜಯದೇವಿತಾಯಿ ಲಿಗಾಡೆ ಎರಡು ತಿಂಗಳವರೆಗೆ ಆಶ್ರಯ ನೀಡಿದ್ದರು.
ಈ ಭಾಗದಲ್ಲಿ ದಬ್ಬಾಳಿಕೆ ಹೆಚ್ಚಿದ್ದರಿಂದ ಸರ್ಕಾರ ಇದರ ವಶಕ್ಕಾಗಿ ಮೇಜರ್ ಜನರಲ್ ಜೆ.ಎನ್.ಚೌಧರಿ ನೇತೃತ್ವದಲ್ಲಿ ‘ಆಪರೇಷನ್ ಪೋಲೋ’ ಕಾರ್ಯಾಚರಣೆ ನಡೆಸಿತು. ಇತರೆ ಮೂರು ಸ್ಥಳಗಳಿಂದಲೂ ಸೈನ್ಯ ಹೈದರಾಬಾದ್‌ಗೆ ನುಗ್ಗಿತು. ಹೀಗಾಗಿ ಕೊನೆಯ ನಿಜಾಮ್ ಉಸ್ಮಾನ ಅಲಿಖಾನ್ ಅವರ 37 ವರ್ಷಗಳ ಮತ್ತು ಆಸಫಜಾಹಿ ಸಾಮ್ರಾಜ್ಯದ 224 ವರ್ಷಗಳ ಆಡಳಿತ ಕೊನೆಗೊಂಡಿತು. ಕಾರ್ಯಾಚರಣೆಯಲ್ಲಿ ರಜಾಕಾರ್ ಮತ್ತು ನಿಜಾಮ್ ಸೈನ್ಯದ 1,200 ಜನರು ಹತರಾದರು. 15 ಸಾವಿರ ಜನರು ಬಂಧಿಸಲ್ಪಟ್ಟರು. ಭಾರತೀಯ ಸೇನೆಯ 10 ಯೋಧರು ಪ್ರಾಣ ಕಳೆದುಕೊಂಡಿರುವ ಮಾಹಿತಿ ದಾಖಲೆಗಳಲ್ಲಿ ಇದೆ.
ಹೀಗೆ ರಕ್ತಪಾತಕ್ಕೆ ಕಾರಣನಾಗಿದ್ದ ಇತ್ತೇಹಾದುಲ್ ಮುಸ್ಲಿಮೀನ್ ಎಂಬ ರಜಾಕಾರ ಸಂಘಟನೆ ಮುಖ್ಯಸ್ಥ ಲಾತೂರನವನಾದ ಕಾಸಿಂ ರಜ್ವಿಯನ್ನು ಬಂಧಿಸಿ ಏಳು ವರ್ಷ ಜೈಲಿನಲ್ಲಿ ಇಡಲಾಗಿತ್ತು. ಬಿಡುಗಡೆಗೊಂಡ ನಂತರ ಈತ ಬೇಗಂಪೇಟ್ ವಿಮಾನ ನಿಲ್ದಾಣದಿಂದ ಕರಾಚಿಗೆ ಹೋಗಿದ್ದನು. ಈತ 1970ರಲ್ಲಿ ನಿಧನ ಹೊಂದಿರುವ ಬಗ್ಗೆ ಮಾರ್ಟಿನ್ ಲೂಥರ್‌ನ ‘ಹೈದರಾಬಾದ್ ಎ ಬಯಾಗ್ರಫಿ’ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.
ಯುದ್ಧದಲ್ಲಿ ಸಾಕಷ್ಟು ಹಾನಿ ಆಗಿದ್ದರೂ ಉಸ್ಮಾನ ಅಲಿಖಾನ್ ಮಾತ್ರ ಉಳಿದಿದ್ದ ಬಂಗಾರ ಹಾಗೂ ಮತ್ತಿತರೆ ಆಸ್ತಿಯನ್ನು 47 ಟ್ರಸ್ಟ್‌ಗಳನ್ನು ಸ್ಥಾಪಿಸಿ ಜನಪರ ಕಾರ್ಯಗಳಲ್ಲಿ ತೊಡಗಿಸಿದರು. ಶಿಷ್ಯವೇತನ, ಆಸ್ಪತ್ರೆ ಆರಂಭಿಸಿರುವ ಬಗ್ಗೆ ಪ್ರಸಿದ್ಧ ಇತಿಹಾಸ ತಜ್ಞರಾದ ಡಾ.ಆನಂದರಾಜ್ ವರ್ಮಾ ತಮ್ಮ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಡಾ.ವಿ.ಕೆ.ಬಾವಾ ಅವರ ‘ದ ಲಾಸ್ಟ್ ನಿಜಾಮ್’ ಗ್ರಂಥದಲ್ಲಿಯೂ ಈ ಬಗ್ಗೆ ಮಾಹಿತಿಯಿದೆ.
1947ರಲ್ಲಿಯೇ ಹಾಳಗೋರಟಾ ಹಾಗೂ ಮತ್ತಿತರೆಡೆ ರಾಷ್ಟ್ರಧ್ವಜ ಹಾರಿಸುವ ಪ್ರಯತ್ನ ನಡೆಯಿತು. ನಂತರ ದಂಗೆಗಳಾಗಿ ಕಲ್ಯಾಣ ಗೋರಟಾದಲ್ಲಿ ಹಾನಿಯಾಯಿತುಪ್ರಭುಶೆಟ್ಟೆಪ್ಪ ಪಾಟೀಲ ಹಿರಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.