ಬೀದರ್: ‘ಈ ವರ್ಷ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದು 25 ವರ್ಷಗಳಾಗಿವೆ. ಈ ಅವಧಿಯಲ್ಲಿ ಸರ್ಕಾರ, ಸಾರ್ವಜನಿಕರು ಹಾಗೂ ಸಹಕಾರಿಗಳ ಮನ್ನಣೆ ಗಳಿಸಿ ಉತ್ತಮ ಪ್ರಗತಿ ಸಾಧಿಸುತ್ತ ಮುನ್ನಡೆದಿದೆ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ತಿಳಿಸಿದರು.
ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಶೇ 80ರಷ್ಟು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇನ್ನೂ ಬೆಳೆಯಬೇಕಾದ ಅಗತ್ಯವಿದೆ. ಇದುದರಿಂದ ರಾಮ ರಾಜ್ಯದ ಕಲ್ಪನೆ ಸಾಕಾರವಾಗಲಿ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಹಕಾರ ಚಳವಳಿ ಭಾರತ ದೇಶದ ಆರ್ಥಿಕತೆಯ ಸುಭದ್ರತೆಗೆ ತನ್ನದೇ ಆದ ಕೊಡುಗೆ ಕೊಟ್ಟಿದೆ.ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಸಮಾಜಿಕ ನ್ಯಾಯದಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ಕಾರ್ಯಗತಗೊಂಡಿವೆ. ಕೃಷಿ ಕ್ರಾಂತಿ, ಕ್ಷೀರ ಕ್ರಾಂತಿ, ರಸಗೊಬ್ಬರ ಕ್ಷೇತ್ರದಲ್ಲಿ ಸಹಕಾರ ಚಳವಳಿ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಸೌಹಾರ್ದ ಸಹಕಾರ ಕ್ಷೇತ್ರದ ನೇತೃತ್ವ ವಹಿಸಿ, ಮಾತೃ ಸಂಸ್ಥೆಯಾಗಿ, ರಾಷ್ಟ್ರದ ಸಹಕಾರಿ ಕ್ಷೇತ್ರದ ಏಕೈಕ ಶಾಸನ ಬದ್ಧ ಸಂಸ್ಥೆಯಾಗಿದೆ. ಕಾನೂನು ಬದ್ದವಾಗಿ ರಚನೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು, ಶಾಸನಬದ್ಧ ಕಾರ್ಯಗಳ ಜೊತೆಗೆ ತರಬೇತಿ, ಶಿಕ್ಷಣ, ಪ್ರಚಾರ ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಿದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಸಂಯುಕ್ತ ಸಹಕಾರಿ ಸಾಮಾನ್ಯ ಸಭೆ ಹಮ್ಮಿಕೊಳ್ಳುವುದರ ಮೊದಲು ರಾಜ್ಯದಾದ್ಯಂತ ಪ್ರವಾಸ ಮಾಡಿ ಸಹಕಾರ ಕ್ಷೇತ್ರದ ಜ್ವಲಂತ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಅದರ ಭಾಗವಾಗಿಯೇ ಬೀದರ್‌ನಲ್ಲಿ ಸಭೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಒಟ್ಟು 6,514 ಸಹಕಾರಿಗಳಿವೆ. 72 ಲಕ್ಷ ಸದಸ್ಯರಿದ್ದಾರೆ. ₹16.30 ಕೋಟಿ ಷೇರು ಬಂಡವಾಳ ಇದೆ. ₹44.79 ಕೋಟಿ ಠೇವಣಿ ಇದೆ. ₹35.74 ಕೋಟಿ ಸಾಲ ನೀಡಲಾಗಿದೆ. ₹51.064 ಕೋಟಿ ದುಡಿಯುವ ಬಂಡವಾಳ ಇದೆ. ₹735 ಕೋಟಿ ಈ ವರ್ಷ ನಿವ್ವಳ ಲಾಭ ಹೊಂದಿದೆ. ₹3,992 ಕೋಟಿ ಕಾಯ್ದಿರಿಸಿದ ನಿಧಿ ಇದೆ. ಒಟ್ಟು 75 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. 1,700 ಇ–ಸ್ಟ್ಯಾಂಪಿಂಗ್ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ ಎಂದರು.
ಬೀದರ್ ಜಿಲ್ಲಾ ಒಕ್ಕೂಟದ ನಿರ್ದೇಕರಾದ ಸಂಜಯ ಖ್ಯಾಸಾ, ಶಿವಬಸಪ್ಪ ಚನ್ನಮಲ್ಲೆ, ವಿಭಾಗೀಯ ಅಧಿಕಾರಿ ಸೂರ್ಯಕಾಂತ ರ‍್ಯಾಕಲೆ, ಸಹಕಾರಿ ಸದಸ್ಯ ಮಾರುತಿ ವಾಡೇಕರ್ ಇದ್ದರು.
‘ಬೀದರ್‌ನಲ್ಲಿ 169 ಸಹಕಾರಿ’:
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಮಾತನಾಡಿ ಬೀದರ್ ಜಿಲ್ಲೆಯಲ್ಲಿ ಒಟ್ಟು 169 ಸೌಹಾರ್ದ ಸಹಕಾರಿಗಳಿವೆ. 43870 ಸದಸ್ಯರು ₹270.42 ಕೋಟಿ ದುಡಿಯುವ ಬಂಡವಾಳ ₹10.98 ಕೋಟಿ ಷೇರು ಬಂಡವಾಳ ₹244.32 ಕೋಟಿ ಠೇವಣಿ ₹251.39 ಕೋಟಿ ಸಾಲ ನೀಡಲಾಗಿದೆ. ₹14.26 ಕೋಟಿ ನಿಧಿ ₹3.70 ಕೋಟಿ ಲಾಭ ಬಂದಿದೆ. ಸದ್ಯ 10 ಇ–ಸ್ಟ್ಯಾಂಪಿಂಗ್ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.