
ಬೀದರ್: ‘ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಸರ್ಕಾರದ ಅನುದಾನದಿಂದ ವರ್ಷಕ್ಕೆ ಆರು ಸಿಲಿಂಡರ್ ಉಚಿತವಾಗಿ ಕೊಡಿಸುವೆ’ ಎಂದು ಪಕ್ಷೇತರ ಅಭ್ಯರ್ಥಿ ರಾಮವಿಲಾಸ ರಾಮುಲಾಲಜಿ ತಿಳಿಸಿದರು.
ಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ, ರೈತರಿಗೆ ಮಾಸಿಕ ₹2 ಸಾವಿರ, ಶಿಕ್ಷಿತ ನಿರುದ್ಯೋಗಿ ಯುವಕರಿಗೆ ಮಾಸಿಕ ಉದ್ಯೋಗ ಭತ್ಯೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸುವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಜನ ಬೇಸತ್ತು ಹೋಗಿದ್ದಾರೆ. ಬದಲಾವಣೆ ಬಯಸಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜನಸೇವೆ ಮಾಡುವ ಅಭ್ಯರ್ಥಿಯನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಬೇಕು. ಸಂಸದರ ವೇತನದಿಂದ ಮಾಸಿಕ ಸಾಂಕೇತಿಕವಾಗಿ ₹5 ಪಡೆದು, ಮಿಕ್ಕುಳಿದ ಹಣವನ್ನು ಜನಕಲ್ಯಾಣಕ್ಕೆ ಬಳಸುವೆ ಎಂದರು.
ನನ್ನ ಕ್ರಮ ಸಂಖ್ಯೆ 14 ಆಗಿದ್ದು, ಗ್ಯಾಸ್ ಸಿಲಿಂಡರ್ ನನಗೆ ನೀಡಿರುವ ಚಿಹ್ನೆ. ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ಕೊಟ್ಟು ಗೆಲ್ಲಿಸಿದರೆ ಜನಪರವಾದ ಕೆಲಸಗಳನ್ನು ಮಾಡುವೆ ಎಂದು ಹೇಳಿದರು.
ಪ್ರಮುಖರಾದ ಅಶೋಕ ನಾಯಕ, ಮುರಳಿಧರ ಜಾಧವ, ವೀರಭದ್ರ ಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.