ADVERTISEMENT

ರೈತರ ಹಿತ ರಕ್ಷಿಸಲಾಗದಿದ್ದರೆ ಕಾರ್ಖಾನೆ ಮುಚ್ಚಿ: ಕಿಶನರಾವ್ ಸಾಯಗಾಂವಕರ್ ಆರೋಪ

ಕಬ್ಬಿಗೆ ನೆರೆ ರಾಜ್ಯಗಳಿಗಿಂತ ಕಡಿಮೆ ಬೆಲೆ: ಕಿಶನರಾವ್ ಸಾಯಗಾಂವಕರ್ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2022, 14:02 IST
Last Updated 13 ಮೇ 2022, 14:02 IST
ಕಿಶನರಾವ್ ಸಾಯಗಾಂವಕರ್
ಕಿಶನರಾವ್ ಸಾಯಗಾಂವಕರ್   

ಬೀದರ್: ರೈತರ ಹಿತ ರಕ್ಷಿಸಲು ಸಾಧ್ಯವಾಗದಿದ್ದರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಬೇಕು ಎಂದು ಹಿರಿಯ ವಕೀಲ ಕಿಶನರಾವ್ ಸಾಯಗಾಂವಕರ್ ಒತ್ತಾಯಿಸಿದ್ದಾರೆ.

ನೆರೆಯ ರಾಜ್ಯಗಳ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹. 2,500 ಬೆಲೆ ಪಾವತಿಸುತ್ತಿರುವಾಗ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ₹ 2,000 ಮಾತ್ರ ಕೊಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಎಫ್‍ಆರ್‌ಪಿ ಪ್ರಕಾರ ಕಬ್ಬು ಸಾಗಿಸಿದ ರೈತರಿಗೆ ಕಬ್ಬು ಹಣ ಪಾವತಿಸಲಾಗಿದೆ ಎಂದು ಹೇಳಿದ್ದಾರೆ. ಎಫ್‍ಆರ್‌ಪಿ ಅನ್ವಯ ಹೇಗೆ ಹಣ ಸಂದಾಯ ಮಾಡಲಾಗಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಸಕ್ಕರೆ ಬೆಲೆ ₹ 4 ಸಾವಿರ ಇದೆ. ಕಬ್ಬು ಕಟಾವು, ಸಾಗಣೆ, ಸಕ್ಕರೆ ಉತ್ಪಾದನೆ ವೆಚ್ಚ ತೆಗೆದು, ಕಾರ್ಖಾನೆಗೆ ಒಂದಿಷ್ಟು ಲಾಭ ಉಳಿಸಿಕೊಂಡರೂ ಪ್ರತಿ ಟನ್ ಕಬ್ಬಿಗೆ ₹ 2,500 ಬೆಲೆ ಪಾವತಿಸಬಹುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಜನಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ನಿಗದಿಪಡಿಸಲಾಗಿತ್ತು. ಆದರೆ, ನಂತರ ರೈತರಿಗೆ ಪ್ರತಿ ಟನ್‍ಗೆ ₹ 1,950 ಮಾತ್ರ ಪಾವತಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಒಂದೆಡೆ ಕಬ್ಬಿಗೆ ಯೋಗ್ಯ ಬೆಲೆ ಕೊಡುತ್ತಿಲ್ಲ. ಮತ್ತೊಂದೆಡೆ ನಿಯಮ ಪ್ರಕಾರ ಎರಡು ವಾರಗಳಲ್ಲಿ ಕಬ್ಬು ಹಣ ಸಂದಾಯ ಸಹ ಮಾಡುತ್ತಿಲ್ಲ. ಮೂರು ತಿಂಗಳ ನಂತರ ಬಿಲ್ ಪಾವತಿಸಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಡಳಿತ ಮಂಡಳಿಗಳಿಂದ ರೈತರ ಹಿತಕ್ಕೆ ಪೂರಕವಾಗಿ ಕಾರ್ಖಾನೆ ಮುನ್ನಡೆಸಲು ಆಗದಿದ್ದರೆ, ಸರ್ಕಾರ ಕೂಡಲೇ ಕಾರ್ಖಾನೆಗಳನ್ನು ವಶಕ್ಕೆ ಪಡೆಯಬೇಕು. ಆಡಳಿತಾಧಿಕಾರಿ ನೇಮಕ ಮಾಡಿ, ರೈತರ ಕಬ್ಬಿಗೆ ಯೋಗ್ಯ ಬೆಲೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.