ADVERTISEMENT

ಐಎಫ್‌ಎಸ್ ಅಧಿಕಾರಿ ಅಮಾನತು ರದ್ದು, ಹಿಂಬಡ್ತಿಗೆ ಶಿಫಾರಸು; ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:02 IST
Last Updated 19 ಜುಲೈ 2025, 6:02 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೀದರ್: ‘ಎಚ್ಎಂಟಿ ವಶದಲ್ಲಿನ ಅರಣ್ಯ ಭೂಮಿ ಡಿನೋಟಿಫಿಕೇಶನ್, ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಅಮಾನತುಗೊಂಡಿರುವ ಐಎಫ್ಎಸ್ ಅಧಿಕಾರಿ ಆರ್.ಗೋಕುಲ್ ತಪ್ಪೊಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ್ದಾರೆ’ ಎಂದು ಅರಣ್ಯ ಸಚಿವ ತಿಳಿಸಿದ್ದಾರೆ.

‘ಅವರಿಗೆ ಸಿಸಿಎಫ್ ಹುದ್ದೆಗೆ ಹಿಂಬಡ್ತಿ ನೀಡಿ ಅಮಾನತು ರದ್ದುಪಡಿಸಲು ಶಿಫಾರಸು ಮಾಡಲಾಗಿದೆ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಇಲ್ಲಿ ತಿಳಿಸಿದ್ದಾರೆ.

ಆರ್.ಗೋಕುಲ್ ಅಮಾನತು ಅಧಿಕೃತಗೊಳಿಸಲು ಕೇಂದ್ರ ಪರಿಸರ ಸಚಿವಾಲಯ ಒಪ್ಪದೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ, ಅಮಾನತು ಮಾಡಿದ 15 ದಿನದಲ್ಲಿ ಸವಿವರ ಮಾಹಿತಿಯನ್ನು ಕಳುಹಿಸಿಲ್ಲ ಎಂಬ ತಾಂತ್ರಿಕ ಕಾರಣದಡಿ ಅಮಾನತು ಅಧಿಕೃತಗೊಳಿಸಲು ಪರಿಗಣಿಸಲಾಗದು ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿದೆ ಎಂದು ಈಗ ತಿಳಿದು ಬಂದಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಗೋಕುಲ್ ಅವರ ಸರಣಿ ತಪ್ಪು–ಒಪ್ಪುಗಳ ಕಾರಣದಿಂದ ಹಾಲಿ ಎಪಿಸಿಸಿಎಫ್ ಆಗಿರುವ ಅವರಿಗೆ ಸಿಸಿಎಫ್ ಆಗಿ ಹಿಂಬಡ್ತಿ ನೀಡಿ, ಅಮಾನತು ರದ್ದತಿಗೆ ಶಿಫಾರಸು ಮಾಡಿರುವುದಾಗಿ ಹೇಳಿದ್ದಾರೆ.

ಎಚ್ಎಂಟಿ ವಶದಲ್ಲಿರುವ ₹14,300 ಕೋಟಿ ಮೌಲ್ಯದ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿಯಾಗಿದೆ. ಅದನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಇನ್ನೂ ಅಲ್ಲಿ 280 ಎಕರೆ ಭೂಮಿ ಅರಣ್ಯ ಸ್ವರೂಪದಲ್ಲೇ ಇದೆ. ಆದರೆ, ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಗೋಕುಲ್ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಪೀಠ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.