
ಹುಲಸೂರನಲ್ಲಿ ಪರವಾನಗಿ ಇಲ್ಲದೇ ಅಕ್ರಮವಾಗಿ ಕಟ್ಟಿಗೆಯನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿರುವುದು.
ಹುಲಸೂರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಿಯಮಬಾಹಿರವಾಗಿ ನಡೆಯುತ್ತಿರುವ ಸಾಮಿಲ್(ಕಟ್ಟಿಗೆ ಅಡ್ಡೆ)ಗಳಿಗೆ ಕಡಿವಾಣ ಬೀಳಬೇಕಿದೆ. ಪರವಾನಗಿ ನವೀಕರಣವಿಲ್ಲ, ಬೇಕಾಬಿಟ್ಟಿ ಮರಗಳ ಕತ್ತರಿಸುವಿಕೆ, ಅಕ್ರಮ ದಾಸ್ತಾನು, ನಿಯಮಬಾಹಿರವಾಗಿ ವ್ಯಾಪಾರ ನಡೆಸುತ್ತಿವೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ
‘ಸರ್ಕಾರ, ಮರಗಳನ್ನು ಬೆಳೆಸಲು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತದೆ. ‘ಕಾಡು ಬೆಳೆಸಿ, ನಾಡು ಉಳಿಸಿ’ ಎಂಬ ಹತ್ತಾರು ಸಂದೇಶಗಳ ಜಾಹೀರಾತು ನೀಡುತ್ತದೆ. ಅರಣ್ಯ ರಕ್ಷಣೆ, ಗಿಡಗಳ ಪೋಷಣೆಗೆ ಪ್ರತ್ಯೇಕ ಇಲಾಖೆಗಳಿವೆ. ಸಸಿ ನೆಡಲು ಮತ್ತು ಪೋಷಣೆಗೆ ಸಾಕಷ್ಟು ಅನುದಾನ ನೀಡಿದೆ. ಆದರೆ ತಾಲ್ಲೂಕಿನಲ್ಲಿ ಬೃಹತ್ ಮರಗಳನ್ನು ಕತ್ತರಿಸಿ ಬೇಕಾಬಿಟ್ಟಿಯಾಗಿ ಸಾಗಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿಯಮ ಏನಿದೆ?: ಸಾಮಿಲ್ ತೆರೆಯಲು ಸ್ಥಳೀಯ ಪಂಚಾಯಿತಿ ಎನ್‌ಓಸಿ ಪಡೆಯಬೇಕು. ಈ ಆಧಾರದ ಮೇಲೆ, ಇಂಧನ ಇಲಾಖೆ(ಜೆಸ್ಕಾಂ) ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಾಮಿಲ್‌ಗಳಲ್ಲಿರುವ ಕಟ್ಟಿಗೆಯ ಮೇಲಿನ ತೊಗಟೆಯನ್ನು ತೆಗೆಯುವ(ಸಾಪ್) ಯಂತ್ರದ ಅಳವಡಿಕೆಗೆ ಗುಡಿ ಕೈಗಾರಿಕೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಕಟ್ಟಿಗೆ ತುಂಡು ಮಾಡುವ ಯಂತ್ರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೀಗೆ ಪ್ರತ್ಯೇಕ ಇಲಾಖೆಯಿಂದ ಪಡೆದ ಪರವಾನಗಿಯನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕು. ಆದರೆ ಕೆಲವು ಸಾಮಿಲ್‌ಗಳು ಈ ಯಾವ ಪರವಾನಗಿ ಪಡೆಯದೆಯೇ ವ್ಯಾಪಾರ ಮಾಡುತ್ತಿವೆ ಎಂಬ ಆರೋಪ ಕೇಳಿದೆ.
1970ಕ್ಕೂ ಮೊದಲು ಹುಲಸೂರ ಗ್ರಾ.ಪಂ ಪರವಾನಗಿ ಪಡೆದು ಕಟ್ಟಿಗೆ ಅಡ್ಡೆಗಳು ಆರಂಭವಾಗಿವೆ. ಆಗ ಜನವಸತಿ ಪ್ರದೇಶಗಳಿಂದ ದೂರವಿದ್ದ ಕಟ್ಟಿಗೆ ಅಡ್ಡೆಗಳು ಇದೀಗ ಪಟ್ಟಣದ ಹೃದಯ ಭಾಗದಲ್ಲಿವೆ. ಆದರೆ, ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಜನವಸತಿ ಪ್ರದೇಶಗಳ ಮಧ್ಯದಲ್ಲಿದ್ದ ಕಟ್ಟಿಗೆ ಅಡ್ಡೆಗಳಿಗೆ ಪೂರಕವಾಗಿಯೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಪರವಾನಗಿ ನವೀಕರಣವಿಲ್ಲ: ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಒಟ್ಟು 2 ಸಾಮಿಲ್‌ಗಳು ಪರವಾನಗಿ ಪಡೆದಿದ್ದು, ಅದರಲ್ಲಿ 1 ನವೀಕರಣವಾಗಬೇಕು. ಸಾಮಿಲ್‌ಗಳನ್ನು ನಡೆಸಲು ಹಲವಾರು ನಿಯಮಗಳಿದ್ದರೂ ಪರಿಗಣಿಸದೇ ಕಟ್ಟಿಗೆ ವ್ಯಾಪಾರ ನಡೆಸುತ್ತಿದ್ದಾರೆ. ಸಾಕಷ್ಟು ದಾಸ್ತಾನು ಇದ್ದರೂ, ಫಾರ್ಂ ನಂ.43, 44ರಲ್ಲಿ ಬೆರಳಣಿಕೆಯ ಲೋಡ್‌ಗಳನ್ನು ತೋರಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಹಾಗೂ ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ಪರಿಸರವಾದಿಗಳ ಆತಂಕವಾಗಿದೆ.
ಸಾಮಿಲ್‌ಗಳ ಮಾಲೀಕರು ರೈತರಿಗೆ ಹಣದ ಆಮಿಷ ತೋರಿ ಹೊಲಗಳಿಲ್ಲನ ಮರಗಳನ್ನು ಕಡಿಯುತ್ತಿದ್ದಾರೆ. ಸಾಮಿಲ್‌ಗಳ ಮಾಲೀಕರು ರೈತರ ಮುಗ್ಧತೆಯ ಜತೆ ಆಟವಾಡುತ್ತಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಕರಾರು ಬಂದ ಅಥವಾ ಪಟ್ಟಣದ ಮಧ್ಯ ಭಾಗದಲ್ಲಿರುವ ಕಟ್ಟಿಗೆ ಅಡ್ಡೆಗಳ ಸಾಮಿಲ್‌ಗಳ ಎನ್‌ಓಸಿ ರದ್ದುಪಡಿಸಲು ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದುಶಿವಾನಂದ ಮೇತ್ರೆ, ತಹಶೀಲ್ದಾರ್
ಹುಲಸೂರ ವಲಯ ಕಾರ್ಯ ವ್ಯಾಪ್ತಿಯಲ್ಲಿರುವ ಸಾಮಿಲ್‌ಗಳಿಗೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ಹಾಗೂ ನೋಟಿಸ್ ನೀಡಲಾಗಿದೆ. ಅಕ್ರಮ ದಾಸ್ತಾನು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದುಸಂತೋಷ ಕುಮಾರ ಹಾಲಹಳ್ಳೇ, ಆರ್‌ಎಫ್‌ಒ ಹುಲಸೂರ
ಹುಲಸೂರಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಸಾಮಿಲ್‌ಗಳನ್ನು ಕೂಡಲೇ ಬಂದ್ ಮಾಡಬೇಕು. ನಿಯಮಬಾಹಿರವಾಗಿ ನಡೆಸುತ್ತಿರುವ ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡದಿದ್ದರೆ ಹೋರಾಟ ಕೈಗೊಳ್ಳಲಾಗುವುದುಅಜಿತ್ ಸೂರ್ಯವಂಶಿ, ಅಧ್ಯಕ್ಷ, ಲಹುಜಿ ಶಕ್ತಿ ಸೇನೆ
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪರಿಸರ ನಾಶ ಮಾಡುತ್ತಿರುವ ಸಾಮಿಲ್‌ಗಳನ್ನು ಕೂಡಲೇ ಬಂದ್ ಮಾಡಬೇಕು. ಸಾರ್ವಜನಿಕ ವಾಸಸ್ಥಳದಿಂದ ಸ್ಥಳಾಂತರಿಸಬೇಕುಗಣೇಶ ಸೂರ್ಯವಂಶಿ, ಅಧ್ಯಕ್ಷ, ಕರವೇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.