ADVERTISEMENT

ಜಿಲ್ಲೆಯಲ್ಲಿ ಹೆಚ್ಚಿದ ಡೆಂಗಿ, ಚಿಕೂನ್‌ಗುನ್ಯ ಪ್ರಕರಣ

ಫಲ ನೀಡದ ಸ್ವಚ್ಛ ಭಾರತ ಅಭಿಯಾನ

ಚಂದ್ರಕಾಂತ ಮಸಾನಿ
Published 2 ಅಕ್ಟೋಬರ್ 2019, 6:16 IST
Last Updated 2 ಅಕ್ಟೋಬರ್ 2019, 6:16 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾದಲ್ಲಿ ಕೊಳಕು ನೀರಲ್ಲಿ ಉರುಳಾಡುತ್ತಿರುವ ಹಂದಿಗಳು
ಚಿಟಗುಪ್ಪ ತಾಲ್ಲೂಕಿನ ನಿರ್ಣಾದಲ್ಲಿ ಕೊಳಕು ನೀರಲ್ಲಿ ಉರುಳಾಡುತ್ತಿರುವ ಹಂದಿಗಳು   

ಬೀದರ್‌: ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಂಡು ಬರುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳು ಸಹ ಸ್ವಚ್ಛತೆಗೆ ಪ್ರಾಮುಖ್ಯ ನೀಡಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಡೆಂಗಿ ಹಾಗೂ ಚಿಕೂನ್‌ಗುನ್ಯ ಪ್ರಕರಣಗಳು ಹೆಚ್ಚುತ್ತಿವೆ.

2017ರಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ 154 ಡೆಂಗಿ ಹಾಗೂ 7 ಚಿಕೂನ್‌ಗುನ್ಯ ಪ್ರಕರಣಗಳು ಪತ್ತೆಯಾಗಿದ್ದವು. ಚಿಕೂನ್‌ಗುನ್ಯ ಕಳೆದ ವರ್ಷ ಸಂಪೂರ್ಣ ನಿಯಂತ್ರಣಕ್ಕೆ ಬಂದಿತ್ತು. ಡೆಂಗಿ ಪ್ರಕರಣಗಳ ಸಂಖ್ಯೆ 125ಕ್ಕೆ ಇಳಿದಿತ್ತು. ಆದರೆ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಡೆಂಗಿ ಹಾಗೂ ಚಿಕೂನ್‌ಗುನ್ಯ  ಮತ್ತೆ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ.

ಎರಡು ತಿಂಗಳ ಅವಧಿಯಲ್ಲಿ 851 ಜನರ ರಕ್ತ ಪರೀಕ್ಷೆ ನಡೆಸಿದಾಗ 67 ರೋಗಿಗಳಲ್ಲಿ ಡೆಂಗಿ ಪತ್ತೆಯಾಗಿದೆ. ಆಶ್ಚರ್ಯ ಅಂದರೆ ಬೀದರ್‌ ಹಾಗೂ ಬಸವಕಲ್ಯಾಣ ನಗರಗಳಲ್ಲೇ ಡೆಂಗಿ ಹೆಚ್ಚು ಕಾಣಿಸಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೊದಲ ಸಭೆಯಲ್ಲೇ ಸಾಂಕ್ರಾಮಿಕ ರೋಗಗಳ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ನಿರೀ ಕ್ಷಿತ ಸುಧಾರಣೆ ಕಂಡು ಬಂದಿಲ್ಲ.

ADVERTISEMENT

ಬೀದರ್‌ ನಗರದಲ್ಲಿ ಮನೆ ಮನೆಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದೇ ಕಾರಣ ಜನರು ಶೌಚಾಲಯದ ಪಕ್ಕ ಹಾಗೂ ಮನೆಯಂಗಳದ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಇಂತಹ ನೀರಿನ ಟ್ಯಾಂಕ್‌ಗಳಲ್ಲಿ ಲಾರ್ವಾ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇವುಗಳಿಂದಲೇ ಡೆಂಗಿ ಹರಡುತ್ತಿದೆ.

2017ರಲ್ಲಿ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಒಟ್ಟು 12 ನಗರ ಆರೋಗ್ಯ ಸ್ವಯಂ ಸೇವಕರನ್ನು ನೇಮಕ ಮಾಡಿ ಡೆಂಗಿ ಜಾಗೃತಿ ಮೂಡಿಸಲಾಗಿತ್ತು. ಬೀದರ್‌ನಲ್ಲಿ 9 ಹಾಗೂ ಬಸವಕಲ್ಯಾಣದಲ್ಲಿ 3 ಜನ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದರು. ನಗರಸಭೆಯ ಹಿಂದಿನ ಆಯುಕ್ತರೂ ಇದಕ್ಕೆ ಪೂರಕವಾಗಿ ಕೆಲಸ ಮಾಡಿದ್ದರು. ನಂತರ ಡೆಂಗಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಎರಡು ತಿಂಗಳ ಅವಧಿಯಲ್ಲಿ ನಗರದಲ್ಲಿ ಮತ್ತೆ ವ್ಯವಸ್ಥೆ ಹಾಳಾಗಿದೆ.

‘ಖಾಸಗಿ ಆಸ್ಪತ್ರೆಗಳಲ್ಲಿ ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ಲೇಟ್‌ಲೆಟ್‌ನಲ್ಲಿ ಕುಸಿತ ಕಂಡು ಬಂದಾಗ ಪ್ರತಿ ಬಾರಿ ರಕ್ತ ತಪಾಸಣೆಗೆ ₹ 1 ಸಾವಿರ ಖರ್ಚಾಗುತ್ತಿದೆ. ಕೆಲ ವೈದ್ಯರು ರೋಗಿಗಳಲ್ಲಿ ಭಯ ಮೂಡಿಸಿ ಹೈದರಾಬಾದ್‌ನ ಆಸ್ಪತ್ರೆಗಳಿಗೆ ಕಳಿಸಿಕೊಡುತ್ತಿದ್ದಾರೆ. ಕೆಲವರು ಇದನ್ನೇ ಕಮಿಷನ್‌ ದಂದೆಯಾಗಿ ಮಾಡಿಕೊಂಡಿದ್ದಾರೆ. ಜಿಲ್ಲಾ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ನಗರಸಭೆ ಮಾಜಿ ಸದಸ್ಯ ನಬಿ ಖರೇಶಿ ಹೇಳುತ್ತಾರೆ.

‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆವರಣದಲ್ಲಿರುವ ಪ್ರಯೋಗಾಲಯದಲ್ಲಿ ಉಚಿತ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಖಾಸಗಿ ವೈದ್ಯರು ಸಹಿತ ಶಂಕಿತ ರೋಗಿಯ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಅನಿಲ ಚಿಂತಾಮಣಿ ತಿಳಿಸಿದ್ದಾರೆ.

ಡೆಂಗಿ ಪ್ರಕರಣ ಪತ್ತೆಯಾಗಿರುವ ಗ್ರಾಮಗಳಿಗೆ ತಜ್ಞ ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಹಾಗೂ ಬೀದರ್‌ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.