ADVERTISEMENT

ಬೀದರ್‌: ಚಳಿಯಲ್ಲೇ ಬಿಸಿಯೇರಿಸಿದ ತರಕಾರಿ, ಹೆಚ್ಚಿದ ಖಾರ, ಏರಿದ ನುಗ್ಗೆಕಾಯಿ

ಚಂದ್ರಕಾಂತ ಮಸಾನಿ
Published 4 ನವೆಂಬರ್ 2022, 19:30 IST
Last Updated 4 ನವೆಂಬರ್ 2022, 19:30 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಚಳಿಗಾಲದ ಮಹಿಮೆ ಬಲ್ಲವರಿಗೆ ಗೊತ್ತು. ನುಗ್ಗೆಕಾಯಿ ಮಾಗಿಯ ಚಳಿಯಲ್ಲೇ ಬಿಸಿಯೇರಿಸಿದೆ. ತರಕಾರಿ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ದ್ವಿಶತಕ ಬಾರಿಸಿದರೂ ನುಗ್ಗೆ ಪ್ರೇಮಿಗಳು ಖರೀದಿಗೆ ಹಿಂಜರಿದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಆಕಾರದಲ್ಲಿ ಚಿಕ್ಕದಾದರೂ ಮೆಣಸಿನಕಾಯಿ ಖಾರ ಹೆಚ್ಚಿಸಿಕೊಂಡಿದೆ.

ಪ್ರತಿ ಕ್ವಿಂಟಲ್‌ಗೆ ಮೆಣಸಿನಕಾಯಿ ಬೆಲೆ ₹ 2 ಸಾವಿರ, ನುಗ್ಗೆಕಾಯಿ ₹ 1 ಸಾವಿರ ಏರಿಕೆಯಾಗಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿವೆ. ಪ್ರತಿ ಕ್ವಿಂಟಲ್‌ಗೆ ಕೊತಂಬರಿ ಬೆಲೆ ₹ 6 ಸಾವಿರ, ಸಬ್ಬಸಗಿ ₹ 4 ಸಾವಿರ, ಟೊಮೆಟೊ, ಕರಿಬೇವು, ಪಾಲಕ್ ₹ 2 ಸಾವಿರ ಕಡಿಮೆಯಾಗಿದೆ.

ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಬೀನ್ಸ್, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಡೊಣಮೆಣಸಿನ ಕಾಯಿ, ಚವಳೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಮೆಂತೆ ಬೆಲೆ ಸ್ಥಿರವಾಗಿದೆ.

ADVERTISEMENT

ಗ್ರಾಹಕರ ಅಚ್ಚುಮೆಚ್ಚಿನ ಬೀನ್ಸ್, ಬದನೆಕಾಯಿ ಹಾಗೂ ಮೆಂತೆ ಸೊಪ್ಪು ಪ್ರತಿ ಕೆಜಿಗೆ ₹ 120 ರಂತೆ ಮಾರಾಟವಾಗುತ್ತಿವೆ. ಬೆಲೆ ಹೆಚ್ಚಳವಾದರೂ ಈ ತರಕಾರಿ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿಲ್ಲ.

‘ದೀಪಾವಳಿ ಹಬ್ಬ ಮುಗಿದರೂ ಪ್ರಮುಖ ತರಕಾರಿ ಬೆಲೆ ಇಳಿದಿಲ್ಲ. ಬಹುತೇಕ ತರಕಾರಿ ಬೆಲೆ ಸ್ಥಿರವಾಗಿದೆ. ಮುಂದಿನ ವಾರವೂ ತರಕಾರಿ ಬೆಲೆ ಸ್ಥಿರವಾಗಿರುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ನುಗ್ಗೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.