ADVERTISEMENT

ಆತ್ಮಬಲ ಗಟ್ಟಿಯಿದ್ದರೆ ತುಳಿತ ಅಸಾಧ್ಯ: ಪ್ರವಚನಕಾರ ಮುಹಮ್ಮದ್ ಕುಂಞ

ಎರಡನೇ ದಿನದ ಕುರ್‌ಆನ್‌ ಕನ್ನಡ ಪ್ರವಚನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:16 IST
Last Updated 15 ಡಿಸೆಂಬರ್ 2025, 6:16 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಕುರ್‌ಆನ್ ಕನ್ನಡ ಪ್ರವಚನ ಕಾರ್ಯಕ್ರಮದಲ್ಲಿ ಮುಹಮ್ಮದ್ ಕುಂಞ ಪ್ರವಚನ ಹೇಳಿದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಕುರ್‌ಆನ್ ಕನ್ನಡ ಪ್ರವಚನ ಕಾರ್ಯಕ್ರಮದಲ್ಲಿ ಮುಹಮ್ಮದ್ ಕುಂಞ ಪ್ರವಚನ ಹೇಳಿದರು   

ಬಸವಕಲ್ಯಾಣ: ‘ಮಾನವೀಯ ಮೌಲ್ಯಗಳ ಪರಿಪಾಲಕರಾಗಿ, ಆತ್ಮಬಲ ಗಟ್ಟಿ ಇಟ್ಟುಕೊಂಡರೆ ಫುಟ್‌ಬಾಲ್ ನಂತೆ ಒದೆ ತಿನ್ನುವ ಸಂದರ್ಭ ಬರುವುದಿಲ್ಲ. ಹೆದರಿಸುವ ಮತ್ತು ದೌರ್ಜನ್ಯ ಎಸಗುವ ಧೈರ್ಯ ಯಾರೂ ತೋರುವುದಿಲ್ಲ’ ಎಂದು ಮಂಗಳೂರಿನ ಪ್ರಸಿದ್ಧ ಪ್ರವಚನಕಾರ ಮುಹಮ್ಮದ್ ಕುಂಞ ಹೇಳಿದರು.

ನಗರದ ತೇರು ಮೈದಾನದಲ್ಲಿನ ಸಭಾ ಭವನದಲ್ಲಿ ಭಾನುವಾರ ನಡೆದ ಕುರ್‌ಆನ್‌ ಕನ್ನಡ ಪ್ರವಚನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸತ್ಯದ ಮಾರ್ಗ ಅನುಸರಿಸಬೇಕು. ಸರಳ ಜೀವನ ಸಾಗಿಸಬೇಕು. ಆಗ ಸಂತೃಪ್ತಿ ದೊರಕುತ್ತದೆ. ಬದುಕಿನಲ್ಲಿ ಸಂತಸ, ಆನಂದ ಮನೆ ಮಾಡುತ್ತದೆ. ಅತಿ ಆಸೆ ದುಃಖಕ್ಕೆ ಕಾರಣ ಆಗುತ್ತದೆ. ನೆರೆ ಮನೆಯವರನ್ನು ನೋಡಿ ಆಡಂಬರದ ಬದುಕಿಗಾಗಿ ಸಾಲ ಮಾಡಿದರೆ ಸ್ವಾರ್ಥಿ ಎನಿಸಿಕೊಳ್ಳಬೇಕಾಗುತ್ತದೆ. ನೌಕರರು ಲಂಚಕ್ಕೆ ಕೈಯೊಡ್ಡಬೇಕಾಗುತ್ತದೆ. ಕೊನೆಗೆ ಮಾನಸಿಕ ನೆಮ್ಮದಿ ಕಳೆದುಕೊಂಡು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಲ್ಲಿ 100 ಕೋಟಿ ಮಾನಸಿಕ ರೋಗಿಗಳಿದ್ದಾರೆ’ ಎಂದರು.

ADVERTISEMENT

‘ಜಾತಿ, ಧರ್ಮದ ಆಧಾರದಲ್ಲಿ ಸಂಬಂಧ ಬೆಸೆಯುವುದು ಸರಿಯಲ್ಲ. ಅಗತ್ಯವಿದ್ದವರಿಗೆ ಸಹಾಯ–ಸಹಕಾರ ನೀಡಬೇಕು. ಉಪಕಾರ ಮಾಡಿದರೆ ಸಿಗುವ ಆನಂದ ಬೇರೆ ಕೆಲಸದಿಂದ ಲಭ್ಯ ಆಗಲಾರದು. ದೇವರ ಮೇಲೆ ನಂಬಿಕೆ ಇಟ್ಟರೆ ಸುಖ–ಶಾಂತಿ ಸಾಧ್ಯ’ ಎಂದು ಹೇಳಿದರು.

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಹೊರಗಣ ಸಿಂಗಾರಕ್ಕಿಂತ ಅಂತರಂಗ ಶುದ್ಧವಿರುವುದು ಅತ್ಯಗತ್ಯ. ದ್ವೇಷ, ಮತ್ಸರ ಬಿಟ್ಟು ಸ್ನೇಹ, ಸೌಹಾರ್ದದಿಂದ ಜೀವಿಸಬೇಕು. ಶಾಂತಿ, ನೆಮ್ಮದಿಗಿಂತ ದೊಡ್ಡ ಆಸ್ತಿ ಯಾವುದೂ ಇಲ್ಲ. ಈ ಪುಣ್ಯ ನೆಲದಲ್ಲಿ ಕಾರ್ಯಗೈದ ಬಸವಾದಿ ಶರಣರು ಸಹ ಈ ತತ್ವವನ್ನೇ ಸಾರಿದ್ದಾರೆ’ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಸರಸ್ವತಿ ಮಾತನಾಡಿ,‘ಶಾಂತಿಗಾಗಿಯೇ ಸಾಧನೆ ಮಾಡುತ್ತೇವೆ. ಸಾಕಷ್ಟು ಸಾಧನಗಳನ್ನು ಖರೀದಿಸುತ್ತೇವೆ. ಆದರೆ, ತಮ್ಮನ್ನು ತಾವು ಮತ್ತು ದೇವರನ್ನು ಅರಿತುಕೊಳ್ಳದ ಕಾರಣ ಸಂಕಟ ಅನುಭವಿಸುತ್ತೇವೆ’ ಎಂದು ಹೇಳಿದರು.

ಸೈಯದ್ ಹೈದರ್ ವಲಿಯುಲ್ಲಾ ಖಾದ್ರಿ ನಿಲಂಗಾ, ರಾಜೇಶ್ರೀ ವರ್ಧನ, ಅಸೀಫೊದ್ದೀನ್ ಬೀದರ್ ಮಾತನಾಡಿದರು.

ತಹಶೀಲ್ದಾರ್ ಶಿವಾನಂದ ಮೇತ್ರೆ, ಸಾವಿತ್ರಿ ಸಲಗರ, ಡಾ.ಜಿ.ಎಸ್.ಭುರಳೆ, ಗುರುನಾಥ ಗಡ್ಡೆ, ರವೀಂದ್ರ ಗಾಯಕವಾಡ, ಅರ್ಜುನ ಕನಕ, ಮುಜಾಹಿದ್ ಪಾಷಾ ಖುರೇಷಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.