ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಅಂಗನವಾಡಿ ಕಾರ್ಯಕರ್ತೆಯರ ಅಮಾನತಿನಲ್ಲಿ ತಾರತಮ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 14:59 IST
Last Updated 7 ಮಾರ್ಚ್ 2021, 14:59 IST

ಬೀದರ್: ‘ಕ್ರಿಮಿನಲ್ ಪ್ರಕರಣ ದಾಖಲಾದ ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತು ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

‘ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾದ ಪ್ರಯುಕ್ತ ಸಿಂದೋಲ್ ತಾಂಡಾದ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ. ಆದರೆ, ನಾವದಗೇರಿ ಹಾಗೂ ಅಬ್ದುಲ್ ಫೈಜ್ ದರ್ಗಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರನ್ನು ರಕ್ಷಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಕ್ರಿಮಿನಲ್ ಪ್ರಕರಣ ದಾಖಲಾದ ಎಲ್ಲ ಕಾರ್ಯಕರ್ತೆಯರನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಒಂದು ಕಣ್ಣಿಗೆ ಬೆಣ್ಣೆ ಹಾಗೂ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜನವರಿಯಲ್ಲಿ ಐವರು ಸಹಾಯಕಿಯರಿಗೆ ಕಾರ್ಯಕರ್ತೆ ಹುದ್ದೆಗೆ ಬಡ್ತಿ ನೀಡಿದ್ದಾರೆ. ಇನ್ನೂ ಅನೇಕರು ಅರ್ಹರಿದ್ದರೂ ಅವರಿಗೆ ಬಡ್ತಿ ಕೊಡದೆ, ಆ ಸ್ಥಳಗಳಿಗೆ ಹೊಸದಾಗಿ ಅರ್ಜಿ ಕರೆದಿದ್ದಾರೆ. ಇದಕ್ಕೆ ಏನು ಕಾರಣ’ ಎಂದು ಪ್ರಶ್ನಿಸಿದ್ದಾರೆ.

‘ನಗರದಲ್ಲಿಯೇ ಅನೇಕ ಅರ್ಹ ಸಹಾಯಕಿಯರಿದ್ದರೂ ಮೈಲೂರು ಅಂಗನವಾಡಿ ಕೇಂದ್ರಕ್ಕೆ ಅಲಿಯಾಬಾದ್ ಗ್ರಾಮದ ಸಹಾಯಕಿಯನ್ನು ಕಾರ್ಯಕರ್ತೆಯಾಗಿ ನೇಮಿಸಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೊಸ ಕಾರ್ಯಕರ್ತೆಯರ ನೇಮಕಾತಿ ನಿಯಮಗಳನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲ. ಹೀಗಾಗಿ ಪಾರದರ್ಶಕ ಆಯ್ಕೆ ಹೇಗೆ ನಡೆಯುತ್ತದೆ ಎನ್ನುವ ಕುರಿತು ಜನರಲ್ಲಿ ಸಂಶಯ ಉಂಟಾಗಿದೆ’ ಎಂದು ತಿಳಿಸಿದ್ದಾರೆ.

‘ಇಲಾಖೆಯಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.