ADVERTISEMENT

21 ಅಡಿ ಎತ್ತರದ ಚನ್ನಮ್ಮ ಅವರ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧಾರ

ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ರೇವಣಸಿದ್ದಪ್ಪ ಜಲಾದೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 14:36 IST
Last Updated 3 ನವೆಂಬರ್ 2023, 14:36 IST
ಬೀದರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಜಯಂತ್ಯುತ್ಸವ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು
ಬೀದರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಜಯಂತ್ಯುತ್ಸವ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು   

ಬೀದರ್: ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬರುವ ದಿನಗಳಲ್ಲಿ 21 ಅಡಿ ಎತ್ತರದ ಚನ್ನಮ್ಮ ಅವರ ಕಂಚಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಹೇಳಿದರು.

ಇಲ್ಲಿಯ ಬಿ.ವಿ. ಭೂಮರಡ್ಡಿ ಕಾಲೇಜು ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಸವನಗರ ವಿಕಾಸ ಸಮಿತಿ, ವಿದ್ಯಾನಗರ ವಿಕಾಸ ಸಮಿತಿ ಹಾಗೂ ಹಾರೂರಗೇರಿ ಬಸವ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿ, ಬೆಳಗಾವಿ ನಂತರ ಬೀದರ್‌ನಲ್ಲಿ ದೊಡ್ಡ ಪ್ರತಿಮೆ ಸ್ಥಾಪನೆಯಾಗಲಿದೆ. ವೃತ್ತದ ಪರಿಸರದಲ್ಲಿ ಸುಂದರ ಉದ್ಯಾನ ಹಾಗೂ ವಸ್ತು ಸಂಗ್ರಹಾಲಯವನ್ನೂ ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದರು.

ADVERTISEMENT

ಎಚ್.ಆರ್. ಮಹಾದೇವ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಬೊಮ್ಮಗೊಂಡೇಶ್ವರ ವೃತ್ತದಿಂದ ಬಿ.ವಿ.ಭೂಮರಡ್ಡಿ ಕಾಲೇಜು ಸಮೀಪದ ಕ್ರಾಸ್ ವರೆಗಿನ ರಸ್ತೆಯನ್ನು ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಎಂದು ಜಿಲ್ಲಾ ಆಡಳಿತದ ದಾಖಲೆಯಲ್ಲಿ ನಮೂದಿಸಲಾಗಿದೆ. ವೃತ್ತ ಸಮೀಪದ ವಿದ್ಯಾನಗರದ ಭಾಗಕ್ಕೆ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶಿವಲೀಲಾ ಮಠಪತಿ ಅವರು, ಮಹಿಳೆಯರು ರಾಣಿ ಚನ್ನಮ್ಮ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ತಮ್ಮ ರಕ್ಷಣೆಗೆ ತಾವೇ ಮುಂದಾಗಬೇಕು ಎಂದು ನುಡಿದರು.

ಚನ್ನಮ್ಮ ಅವರು ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ನಂತರದ ಸಾಲಿನಲ್ಲಿ ನಿಲ್ಲುವ ವೀರ ರಾಣಿ. ದೇಶಕ್ಕಾಗಿ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.

ಚಿಂತಕಿ ಸುವರ್ಣಾ ಚಿಮಕೋಡೆ ಹಾಗೂ ಗಾಯಕಿ ಶಿವಾನಿ ಸ್ವಾಮಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ನಗರಸಭೆ ಸದಸ್ಯರಾದ ಸಂತೋಷಿ ಅರುಣಕುಮಾರ, ಶಶಿಧರ ಹೊಸಳ್ಳಿ, ಹಾರೂರಗೇರಿ ಬಸವ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ವಿದ್ಯಾನಗರದ ಬಸವಣಪ್ಪ ನೇಳಗೆ, ಕಿತ್ತೂರು ರಾಣಿ ಚೆನ್ಮಮ್ಮ ಬಡಾವಣೆ ಅಧ್ಯಕ್ಷ ಚಂದ್ರಶೇಖರ ತಾಂಡೂರ ಶರಣಯ್ಯ ಸ್ವಾಮಿ, ಪ್ರೊ. ರೇಣುಕಾ ಮಳ್ಳಿ, ವೀಣಾ ಜಲಾದೆ ಇದ್ದರು.
ಇದಕ್ಕೂ ಮುನ್ನ ಬಸವನಗರದ ಬಸವೇಶ್ವರ ದೇವಸ್ಥಾನದಿಂದ ಕಾಳಿದಾಸನಗರ, ರಾಮಚೌಕ್ ಮಾರ್ಗವಾಗಿ ಬಿ.ವಿ. ಭೂಮರಡ್ಡಿ ಕಾಲೇಜು ಸಮೀಪದ ಚೆನ್ನಮ್ಮ ವೃತ್ತದವರೆಗೆ ಅಲಂಕೃತ ವಾಹನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಸಂಭ್ರಮದ ಮೆರವಣಿಗೆ ನಡೆಯಿತು.

ಸಾಹಿತಿ ಭಾರತಿ ವಸ್ತ್ರದ್ ಹಾಗೂ ರತ್ನಾ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು.

ಬೀದರ್‌ನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಅಂಗವಾಗಿ ಚೆನ್ನಮ್ಮ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು

Highlights - ಅಲಂಕೃತ ವಾಹನದಲ್ಲಿ ಚನ್ನಮ್ಮ ಭಾವಚಿತ್ರದ ಮೆರವಣಿಗೆ ಗಮನ ಸೆಳೆದ ವೇಷಧಾರಿ ಮಕ್ಕಳು ಇಬ್ಬರಿಗೆ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.