
ಬೀದರ್: ಹೊಸ ಒಳ ಮೀಸಲು ಪದ್ಧತಿ ಜಾರಿಗೆ ತರಬಾರದು. ಹಳೆಯ ಮೀಸಲಾತಿ ಪದ್ಧತಿಯನ್ನೇ ಮುಂದುವರೆಸಬೇಕೆಂದು ಬಲಗೈ ಒಳ ಮೀಸಲಾತಿ ಹೋರಾಟ ಸಮಿತಿ ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಾಜಕುಮಾರ್ ಶಿಂಧೆ ಆಗ್ರಹಿಸಿದರು.
ಎ, ಬಿ, ಸಿ ಎಂದು ವರ್ಗೀಕರಿಸಿ, ಒಳಮೀಸಲಾತಿ ಮಾಡಿ, ಸಹೋದರರಂತಿದ್ದ ಪರಿಶಿಷ್ಟರ ನಡುವೆ ಜಗಳ ಹಚ್ಚಲು ನಾಗಮೋಹನದಾಸ್ ವರದಿ ಜಾರಿಗೆ ತರಲು ಸರ್ಕರ ಹೊರಟಿದೆ. ಇದು ಸರಿಯಲ್ಲ. ಇದರ ವಿರುದ್ಧ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖ್ಖೆಳ್ಳಿ ಪಟ್ಟಣವನ್ನು ಬಂದ್ ಮಾಡಿ, ಪಾದಯಾತ್ರೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಳ ಮೀಸಲಾತಿ ಬಗ್ಗೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ವರೆಗೆ ಹಳೆಯ ಮೀಸಲು ಪದ್ಧತಿ ಮುಂದುವರೆಸಬೇಕು. ಈಗಿನ ಒಳಮೀಸಲಾತಿ ಬಲಗೈ ಸಮುದಾಯಗಳಿಗೆ ಮರಣ ಶಾಸನವಾಗಿದೆ. ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ಆಗ್ರಹಿಸಿದರು.
ಸಮಿತಿಯ ಗೌರವ ಅಧ್ಯಕ್ಷ ದಿಲೀಪ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕಾಶಿನಾಥ ಗುಜಗರೆ, ಸಹ ಕಾರ್ಯದರ್ಶಿ ರಾಹುಲ್ ಭಂಗೂರೆ, ಖಜಾಂಚಿ ಶಿವಕುಮಾರ್ ಮುತ್ತಂಗಿ, ಸಂಘಟನಾ ಕಾರ್ಯದರ್ಶಿ ಸಂದೀಪ್ ಕಟ್ಟಿಮನಿ, ಪ್ರಚಾರ ಸಮಿತಿ ಅಧ್ಯಕ್ಷ ಗೌತಮ್ ಬಗದಲಕರ್, ಉಪಾಧ್ಯಕ್ಷ ಶಿವಕಾಂತ್ ಹಾರೂರಗೇರಿ, ಕಾರ್ಯದರ್ಶಿ ಶ್ರೀಕಾಂತ್ ಹೊಸಮನಿ, ಜಂಟಿ ಕಾರ್ಯದರ್ಶಿ ಶಾಂತಕುಮಾರ್ ಪಟ್ನೆ, ಸದಸ್ಯ ಉತ್ತಮ ಕೆಂಪೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.