ADVERTISEMENT

ವೀರಶೈವ ಲಿಂಗಾಯತರು ಬಹುಸಂಖ್ಯಾತರು ಎಂಬುದು ಸಾಬೀತುಪಡಿಸಿ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 16:57 IST
Last Updated 28 ಸೆಪ್ಟೆಂಬರ್ 2025, 16:57 IST
<div class="paragraphs"><p>ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ</p></div>

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

   

ಬಸವಕಲ್ಯಾಣ: `ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಒಂದೇ ಜಾತಿ ನಮೂದಿಸಿ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಬಹುಸಂಖ್ಯಾತರು ಎಂಬುದನ್ನು ಸಾಬೀತುಪಡಿಸಬೇಕು' ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.

ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

`ರಾಜ್ಯ ಸರ್ಕಾರ ಯಾವುದೋ ಹೆಸರಲ್ಲಿ ಜಾತಿ ಗಣತಿ ಕೈಗೊಂಡಿದೆ. ಒಂದುವೇಳೆ ಸಮೀಕ್ಷೆಯಲ್ಲಿ ಏನಾದರೂ ಅನ್ಯಾಯವಾದರೆ ಈ ಸಮಾಜದ ಶಾಪ ತಟ್ಟುವುದು ನಿಶ್ಚಿತ. ಈ ಗಣತಿಯಲ್ಲಿ ಯಡವಟ್ಟು ಮಾಡಿದ್ದೇಯಾದರೆ ಮುಂದೆ ಕೇಂದ್ರ ಸರ್ಕಾರ ನಡೆಸುವ ಗಣತಿಯ ಸಮಯದಲ್ಲಿ ಎಲ್ಲವೂ ಬಯಲಾಗುತ್ತದೆ ಎಂಬುದು ಗಮನದಲ್ಲಿರಲಿ' ಎಂದರು.

`ವೀರಶೈವ ಲಿಂಗಾಯತ ಧರ್ಮಕ್ಕೆ ಇತಿಹಾಸವಿದೆ. ಸಂಹಿತೆ, ಸಂಸ್ಕೃತಿ, ಸಿದ್ಧಾಂತವಿದೆ. ಆದರೆ, ಅನುಷ್ಠಾನದ ಕೊರತೆಯಿದೆ. ಸಂಘಟನೆ ಬಲಗೊಂಡಿಲ್ಲ. ಆದ್ದರಿಂದ ಒಳಪಂಗಡಗಳನ್ನು ಬಿಟ್ಟು ಐಕ್ಯತೆ ತೋರ್ಪಡಿಸಬೆಕಾಗಿದೆ. ರಂಭಾಪುರಿ ಶ್ರೀಯವರು ನಡೆಸುವ ಧರ್ಮ ಕಾರ್ಯಕ್ಕೆ ಮತ್ತು ಅವರ ದೂರದೃಷ್ಟಿಯ ಚಿಂತನೆಗೆ ಎಲ್ಲರೂ ಬೆಂಬಲಿಸಬೇಕು' ಎಂದರು.

`ಬಸವಾದಿ ಶರಣರ ನಾಡಾಗಿರುವ ಇಲ್ಲಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಆದ್ದರಿಂದ ಸಮೀಕ್ಷೆ ಕೈಗೊಂಡು ಡಿಪಿಆರ್ ಮಾಡಲಾಗುವುದು. ಮಳೆ ಹಾನಿ ಬಗ್ಗೆ ಪಕ್ಕದ ಮಹಾರಾಷ್ಟ್ರದ ಮುಖ್ಯಮಂತ್ರಿ ಸಮೀಕ್ಷೆ ಕೈಗೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೂ ಜನರ ಬಳಿಗೆ ಬಂದು ವೀಕ್ಷಿಸಿ ಪರಿಹಾರ ಒದಗಿಸಬೇಕು' ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, `ಗುರುವಿನ ಮಾರ್ಗದರ್ಶನವಿಲ್ಲದೆ ಯಶಸ್ಸು ಸಿಗದು. ರಂಭಾಪುರಿ ಶ್ರೀಯವರ ಮಾನವಕಲ್ಯಾಣದ ಧ್ಯೇಯದಿಂದ ಕೈಗೊಂಡಿರುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು. ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹರಿಸಬೇಕಾಗಿದೆ. ಅಂದರೆ ಉತ್ತಮ ವಿಚಾರಗಳಿಗೆ ಬೆಲೆ ಬರುವಂತೆ ಮಾಡಬೇಕಾಗಿದೆ' ಎಂದರು.

ಶಾಸಕ ಶರಣು ಸಲಗರ ಮಾತನಾಡಿ, `ಅಪಾರ ಮಳೆಯಿಂದ ಹೊಲಗಳು ಕೆರೆಯಂತಾಗಿವೆ. ರೈತರ ಸ್ಥಿತಿ ಕರುಣಾಜನಕವಾಗಿದೆ. ಇಲ್ಲಿಗೆ ಬಂದಿರುವ ಸಚಿವರುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ದೊರಕುವಂತೆ ಕ್ರಮ ತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಯಸಿದ್ದೇಶ್ವರ ಶಿವಾಚಾರ್ಯರು, ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಡಾ.ಎ.ಸಿ.ವಾಲಿ, ವೀರಣ್ಣ ಶೀಲವಂತ, ರಮೇಶ ರಾಜೋಳೆ ಮಾತನಾಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಶಾಸಕರಾದ ಡಾ.ಸಿದ್ಧಲಿಂಗಪ್ಪ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ್, ಮಾಜಿ ಸಂಸದ ಉಮೇಶ ಜಾಧವ, ಪ್ರಕಾಶ ಖಂಡ್ರೆ, ಗುರುನಾಥ ಕೊಳ್ಳೂರ್, ಸುನಿಲ ಪಾಟೀಲ, ಸುರೇಶ ಸ್ವಾಮಿ ಉಪಸ್ಥಿತರಿದ್ದರು. ಕೆ.ಆರ್.ಭೂಮಿಕಾ ಭರತನಾಟ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.