ADVERTISEMENT

ಕೋವಿಡ್‌ ಜನಪ್ರತಿನಿಧಿಗಳ ಖಾಸಗಿ ಆಸ್ಪತ್ರೆ ಆಯ್ಕೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 15:09 IST
Last Updated 6 ಆಗಸ್ಟ್ 2020, 15:09 IST
–ವೀರಭದ್ರಪ್ಪ ಉಪ್ಪಿನ
–ವೀರಭದ್ರಪ್ಪ ಉಪ್ಪಿನ   

ಬೀದರ್‌: ಖಂಡಿತ ಸರಿ ಅಲ್ಲ. ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಅಲ್ಲಿರುವ ನ್ಯೂನ್ಯತೆ ಸರಿಪಡಿಸಿ, ಜನತೆಗೆ ಅನುಕೂಲ ಮಾಡಿಕೊಡಬಹುದು. ಇದರಿಂದ ಆಕಸ್ಮಿಕವಾಗಿ ಬಂದೊದಗಿದ ಕೋವಿಡ್ -19 ನಿಂದ ನಲುಗಿ ಹೋದ ಬಡ ಜನತೆಗೆ ತುಂಬ ಉಪಕಾರವಾಗುತ್ತದೆ. ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಒಳಗೊಂಡು ಅನೇಕ ಜನಪ್ರತಿನಿಧಿಗಳು ಖಾಸಗಿ ಹಾಗೂ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ, ಸರ್ಕಾರಿ ವೆಚ್ಚದಲ್ಲಿ (ಅದು ಜನರ ತೆರಿಗೆ ಹಣ) ಚಿಕಿತ್ಸೆ ಪಡೆಯುತ್ತಿರುವುದು ಎಂಥ ವಿಪರ್ಯಾಸ. ಇದು ಖಂಡನೀಯ.
–ವೀರಭದ್ರಪ್ಪ ಉಪ್ಪಿನ, ನಿವೃತ್ತ ಅಧಿಕಾರಿ, ಬಸವನಗರ ಕಾಲೊನಿ, ಬೀದರ್‌

* * *

ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಇಲ್ಲ
ಬೀದರ್‌:
ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗೆ ಹೋಗದಿದ್ದರೆ ಅವರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಇಲ್ಲ ಎಂದರ್ಥ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲವೆಂದು ಘೋಷಣೆ ಮಾಡಿದಂತೆ.

ADVERTISEMENT

ಮಹಾತ್ಮ ಗಾಂಧೀಜಿ ಅವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿರುವುದೇಕೆ? ಲಾಲ ಬಹಾದ್ದೂರ್‌ ಶಾಸ್ತ್ರಿ ಅವರು ತಾವು ಪ್ರಯಾಣಿಸುತ್ತಿದ್ದ ಬೋಗಿಯ ಹವಾ ನಿಯಂತ್ರಣ ಕೀಳಿಸಿದ್ದರು. ಸಾಮಾನ್ಯ ಜನರಿಗೆ ಸಿಗದಿರುವ ಸವಲತ್ತು ನನಗೇಕೆ ಬೇಕು ಎಂದು ಪ್ರಶ್ನಿಸಿದ್ದರು. ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.
-ಪ್ರೊ.ಎಸ್.ವಿ.ಕಲ್ಮಠ, ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ, ಬೀದರ್‌

* * *
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
ಬೀದರ್‌:
ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಿಗೆ ಸೇರುತ್ತಿರುವುದರಿಂದ ಶ್ರೀಮಂತರು, ಬಡವರು ಎಂಬ ಭಾವನೆ ತೋರಿಸಿದಂತಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಿಗೆ ಸೇರಿದರೆ ಸಾರ್ವಜನಿಕರಿಗೂ ನಮ್ಮ ಚುನಾಯಿತ ಪ್ರತಿನಿಧಿಗಳು ನಮ್ಮೊಂದಿಗೆ ಇದ್ದಾರೆ ಎನ್ನುವ ಸಂದೇಶ ನೀಡಿದಂತಾಗುತ್ತದೆ. ಬಡವರಿಗೂ ಧೈರ್ಯ ತುಂಬಿದಂತಾಗುತ್ತದೆ. ಜನಪ್ರತಿನಿಧಿಗಳಿಗಾಗಿಯೇ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಮಾಡಬಹುದು. ಆಗ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯ ಬಗ್ಗೆ ವಿಶ್ವಾಸ ಮೂಡುತ್ತದೆ. ಚಿಕಿತ್ಸೆಯ ಬಗ್ಗೆ ಇರುವ ಭಯವೂ ಹೊರಟು ಹೋಗುತ್ತದೆ. ಶಿಕ್ಷಣದಿಂದ ಆರೋಗ್ಯದ ವರೆಗೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಆಗಿದೆ.
–ಸಾಹಿತಿ ಎಸ್.ಎಸ್.ಹೋಡಮನಿ, ಹಳ್ಳಿಖೇಡ (ಬಿ), ತಾ. ಹುಮನಾಬಾದ್‌

* * *
ಲೋಪ ಸರಿಪಡಿಸಬಹುದು
ಬೀದರ್‌:
ಯಾವುದೇ ಪಕ್ಷ ಚುನಾವಣೆ ಹತ್ತಿರ ಬ೦ದಾಗ ತನ್ನ ಸಾಧನೆಯ ಪ್ರಚಾರವನ್ನು ಮಾಡುತ್ತದೆ. ಅಧಿಕಾರದಲ್ಲಿರುವ ಪಕ್ಷ ಒಂದು 'ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಕೋವಿಡ್ ಆಸ್ಪತ್ರೆಗಳು ಆರಂಭ ಎಂದು ಘೋಷಣೆಯನ್ನೂ ಮಾಡುತ್ತದೆ. ಆದರೆ, ಅಲ್ಲಿನ ಗುಣಮಟ್ಟದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲ. ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆದರೆ ಅಲ್ಲಿನ ಸ್ಥಿತಿಗತಿ ಅರಿತುಕೊಳ್ಳಲು ಅನುಕೂಲವಾಗುತ್ತದೆ. ಆಸ್ಪತ್ರೆಯಲ್ಲಿನ ಲೋಪವನ್ನು ಸರಿಪಡಿಸಲು ಸಾಧ್ಯವಾಗುತ್ತದೆ.
-ಅಕ್ಷಯ ಪ್ಯಾಗೆ, ಗಾಂಧಿನಗರ, ಬೀದರ್

**
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಖಂಡನೀಯ
ಬೀದರ್:
ಕೋವಿಡ್ 19 ಸೋಂಕು ದೃಢಪಟ್ಟ ಜನಪ್ರತಿನಿಧಿಗಳು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಖಂಡನೀಯ. ಇದು, ಸರ್ಕಾರಿ ಆಸ್ಪತ್ರೆಗಳಿಗೆ ಎಷ್ಟೇ ಸೌಕರ್ಯಗಳನ್ನು ಒದಗಿಸಿದರೂ ಜನಪ್ರತಿನಿಧಿಗಳಿಗೆ ಅವುಗಳ ಮೇಲೆ ನಂಬಿಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಇದರಿಂದ ಸರ್ಕಾರ ಒದಗಿಸುವ ಚಿಕಿತ್ಸಾ ಸಲಕರಣೆ ಹಾಗೂ ಔಷಧಿ ಕಳಪೆ ಗುಣಮಟ್ಟದಿಂದ ಕೂಡಿರಬಹುದು ಎನ್ನುವ ಅನುಮಾನ ಜನರಲ್ಲಿ ಮೂಡುತ್ತದೆ. ಪರಿಣಾಮವಾಗಿ, ಕೋವಿಡ್ 19 ಪಾಸಿಟಿವ್ ದೃಢಪಡುವ ಜನಸಾಮಾನ್ಯರು ಅತ್ತ ಖಾಸಗಿ ಆಸ್ಪತ್ರೆಗೆ ಹೋಗಲು ಹಣವಿಲ್ಲದೆ, ಇತ್ತ ಸರ್ಕಾರಿ ಆಸ್ಪತ್ರೆಗೂ ಹೋಗದೆ ಹೆದರಿ ಪ್ರಾಣ ಕಳೆದುಕೊಳ್ಳುವಂತಾಗುತ್ತಿದೆ.
- ರಮೇಶ ಚಿದ್ರಿ, ಗೌರವ ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಭಾಲ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.