ADVERTISEMENT

ಬೀದರ್ | ಜಯದೇವಿತಾಯಿ ಸಮಾಧಿ ಸ್ಥಳ ‘ಸಿದ್ಧಶೈಲ್’

ಕನ್ನಡ-–ಮರಾಠಿ ಭಾಷೆಗಳ ನಡುವೆ ಉತ್ತಮ ಬಾಂಧವ್ಯ ಬೆಸೆದ ಕವಯತ್ರಿ

ಮಾಣಿಕ ಆರ್ ಭುರೆ
Published 26 ಜೂನ್ 2022, 6:25 IST
Last Updated 26 ಜೂನ್ 2022, 6:25 IST
ಜಯದೇವಿತಾಯಿ ಲಿಗಾಡೆ
ಜಯದೇವಿತಾಯಿ ಲಿಗಾಡೆ   

ಬಸವಕಲ್ಯಾಣ: ನಗರದ ತ್ರಿಪುರಾಂತ ಕೆರೆ ದಡದಲ್ಲಿರುವ ಜಯದೇವಿತಾಯಿ ಲಿಗಾಡೆ ಅವರ ಸಮಾಧಿ ಸ್ಥಳ ‘ಸಿದ್ಧಶೈಲ್’ ಅಪರೂಪದ ತಾಣ. ಮಂಡ್ಯದಲ್ಲಿ ನಡೆದ 48 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಕವಯತ್ರಿಯು ಕೊನೆ ದಿನಗಳಲ್ಲಿ ವಾಸಿಸಿದ್ದ ಮನೆಯ ಹಿಂದುಗಡೆಯೇ ಈ ಸ್ಮಾರಕವಿದೆ.

ಜಯದೇವಿತಾಯಿ ಲಿಗಾಡೆ ಅವರು ಜೂನ್ 23 ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿನ ಶ್ರೀಮಂತ ಮನೆತನದಲ್ಲಿ ಜನಿಸಿದ್ದರೂ ಕೊನೆಗಾಲದಲ್ಲಿ ಅವರು ಶರಣರ ನಾಡು ಕಲ್ಯಾಣಕ್ಕೆ ಬಂದು ಸರಳವಾಗಿ ಜೀವಿಸಿದರು. ಕನ್ನಡ ನಾಡು, ನುಡಿ, ಸಾಹಿತ್ಯ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದರು.

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ತ್ರಿಪದಿಯಲ್ಲಿ ಮಹಾಕಾವ್ಯ ರಚಿಸಿದರು. ಕನ್ನಡ ಮತ್ತು ಮರಾಠಿಯಲ್ಲಿ ಸಾಹಿತ್ಯ ರಚಿಸಿ ವಚನಗಳನ್ನು ಹಾಗೂ ಶರಣಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು.ನುಡಿದಂತೆ ನಡೆದು ತೋರಿದರು. ಅವರು 5ನೇ ನವೆಂಬರ್ 1980 ರಲ್ಲಿ ಬಸವಕಲ್ಯಾಣಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಿದರು. ತ್ರಿಪುರಾಂತ ಕೆರೆಯ ಪೂರ್ವದ ದಡ ದಲ್ಲಿ ಭಕ್ತಿಭವನ ಎಂಬ ಮನೆ ನಿರ್ಮಿಸಿ ವಾಸಿಸಿದರು. 25 ನೇ ಜುಲೈ 1986 ರಲ್ಲಿ ನಿಧನರಾದರು.

ADVERTISEMENT

ಮನೆಯ ಹಿಂದುಗಡೆಯೇ ಅಂತ್ಯಕ್ರಿಯೆ ನಡೆಸಿ ಸಮಾಧಿ ಕಟ್ಟಲಾಗಿದೆ. ಸೊಲ್ಲಾಪುರದ ಸಿದ್ಧರಾಮ ಶರಣರ ಮೇಲೆ ಅವರಿಗೆ ಅಪಾರ ಭಕ್ತಿ ಇದ್ದುದರಿಂದ ಈ ಸ್ಥಳಕ್ಕೆ ಸಿದ್ಧಶೈಲ್ ಎಂದು ಹೆಸರಿಡಲಾಗಿದೆ. ಚಿಕ್ಕ ಸ್ಮಾರಕವಿದ್ದರೂ ವಿಶಿಷ್ಟವಾದ ಮಾದರಿಯಿಂದ ಗಮನ ಸೆಳೆಯುತ್ತದೆ. ಜಮೀನನ್ನು ಗುಹೆಯಂತೆ ಕೊರೆದು ಒಳಗೆ ಸಮಾಧಿ ಕಟ್ಟಲಾಗಿದೆ. ಒಳಗೆ ಪ್ರವೇಶಿಸಲು ಹಳೆ ವಾಡೆ ಬಾಗಿಲಿನಂಥ ಕಲ್ಲಿನ ದ್ವಾರವಿದೆ. ಸಮಾಧಿ ಮೇಲ್ಭಾಗದಲ್ಲಿ ನಕ್ಷತ್ರಾಕಾರದ (ಷಟ್ಕೋನ) ಚಾವಣಿ ಇದೆ. ಸುತ್ತಲಿನ ಪರಿಸರ ಹಸಿರಿನಿಂದ ಕೂಡಿದೆ. ಈ ಸ್ಮಾರಕದ ಸಮೀಪವೇ ಈಚೆಗೆ ₹612 ಕೋಟಿ ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ.

‘ಸಮಾಧಿ ಸ್ಥಳದಲ್ಲಿ ದೊಡ್ಡ ಸ್ಮಾರಕ ನಿರ್ಮಾಣಕ್ಕೆ ಶಾಸಕ ಶರಣು ಸಲಗರ ಈಚೆಗೆ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಆದರೂ ಯೋಜನೆಗೆ ಮಂಜೂರಾತಿ ದೊರೆತಿಲ್ಲ ಎಂಬ ಮಾಹಿತಿ ಇದೆ. ಸರ್ಕಾರ ಕಾಳಜಿ ವಹಿಸಬೇಕು’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುನಾಥ ಗಡ್ಡೆ ಆಗ್ರಹಿಸಿದ್ದಾರೆ.

‘ಸ್ಮಾರಕದ ಅಭಿವೃದ್ಧಿ ಕೈಗೊಳ್ಳಬೇಕು. ಜಯದೇವಿತಾಯಿ ಅವರ ಸಾಹಿತ್ಯದ ಪುನರ್ ಮುದ್ರಣ ಆಗಬೇಕು ಎಂದು ಆಗ್ರಹಿಸಿ ನಾಲ್ಕು ಸಲ ಧರಣಿ, ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಇನ್ನುವರೆಗೂ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಕನ್ನಡ ಹೋರಾಟಗಾರ ವಿಜಯಕುಮಾರ ಭೆಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.