ADVERTISEMENT

ಔರಾದ್: ನ್ಯಾಯಾಲಯ ಕಟ್ಟಡ ಕಾಮಗಾರಿ ವೀಕ್ಷಿಸಿದ ನ್ಯಾಯಮೂರ್ತಿ ಸಂಜೀವಕುಮಾರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:00 IST
Last Updated 23 ನವೆಂಬರ್ 2025, 7:00 IST
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಅವರು ಔರಾದ್ ಪಟ್ಟಣದಲ್ಲಿ ನಡೆಯುತ್ತಿರುವ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಅವರು ಔರಾದ್ ಪಟ್ಟಣದಲ್ಲಿ ನಡೆಯುತ್ತಿರುವ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು   

ಔರಾದ್: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೀದರ್ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಅವರು ಶನಿವಾರ ಇಲ್ಲಿಯ ನ್ಯಾಯಾಲಯದ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ರಸ್ತೆಯಲ್ಲಿ ₹ 13 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕೋರ್ಟ್ ಕಟ್ಟಡ ಕಾಮಗಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ವೀಕ್ಷಣೆ ಮಾಡಿದರು. ಕೋರ್ಟ್ ಕಲಾಪ ಕೊಠಡಿ ಇನ್ನು ದೊಡ್ಡದಾಗಬೇಕಿತ್ತು. ಹಿಂದೆ ಸ್ಥಳಾವಕಾಶ ಇರುವುದರಿಂದ ಕಟ್ಟಡದ ಮುಂದಿನ ಭಾಗದಲ್ಲಿ ಜಾಗ ಬಿಟ್ಟಿದ್ದರೆ ಇಡೀ ಕಟ್ಟಡದ ಸೊಬಗು ಹೆಚ್ಚುತ್ತಿತ್ತು ಎಂದು ಹೇಳಿದರು. ಮೂರು ಅಂತಸ್ತಿನ ಇಡೀ ಕಟ್ಟಡವನ್ನು ಒಂದೊಂದಾಗಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೋರ್ಟ್‌ಗೆ ಬರುವ ಗಡಿ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ADVERTISEMENT

ನೂತನ ಕೋರ್ಟ್ ಕಟ್ಟಡದ ಹಿಂದಿನ ಭಾಗದಲ್ಲಿ ವಕೀಲರ ಸಂಘದ ಕಟ್ಟಡಕ್ಕೆ ಸೂಕ್ತ ಸ್ಥಳ ಇದೆ. ಹೀಗಾಗಿ ಈ ಜಾಗ ಬಳಸಿಕೊಳ್ಳುವಂತೆ ವಕೀಲರಿಗೆ ಸಲಹೆ ನೀಡಿದರು. ಸ್ಥಳೀಯ ಸಂಸ್ಥೆ ವತಿಯಿಂದ ಕೋರ್ಟ್‌ಗೆ ಬೇಕಾದ ನೀರಿನ ವ್ಯವಸ್ಥೆ ಮಾಡಿಕೊಡಲು ಸಂಬಂಧಿತರಿಗೆ ಸೂಚಿಸಿದರು.

ಕೋರ್ಟ್ ಕಟ್ಟಡದ ಬಹುತೇಕ ಕಾಮಗಾರಿ ಮುಗಿದಿದೆ. ತಮ್ಮ ಸಲಹೆ ಮೇರೆಗೆ ಅಗತ್ಯ ಮಾರ್ಪಾಡು ಮಾಡಿ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಇ ಶಿವಶಂಕರ ಕಾಮಶೆಟ್ಟಿ ಹೇಳಿದರು.

ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಎಸ್.ಬಿ. ರಹೆಮಾನ್, ನ್ಯಾಯಾಧೀಶ ಪ್ರಕಾಶ ಬನ್ಸೊಡೆ, ಹಾಜಿ ಹುಸೇನಸಾಬ್ ಯಾದವಾಡ್, ವಿನಾಯಕ ವಾನಖಂಡೆ, ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ಅಧಿಕಾರಿ ಬಸವರಾಜ, ವಕೀಲರ ಸಂಘದ ಅಧ್ಯಕ್ಷ ಬಾಲಾಜಿ ಕಂಬಾರ್, ಗುತ್ತೆದಾರ್ ನಿತಿನ್ ಅಲ್ಮಾಜೆ ಇದ್ದರು.

ಕಕ್ಷಿದಾರರಿಗೆ ಸುಲಭ ನ್ಯಾಯ: ಸ್ಪಂದನೆ

ಔರಾದ್ ಗಡಿ ಭಾಗ ಹಾಗೂ ದೊಡ್ಡ ತಾಲ್ಲೂಕು ಆಗಿರುವುದರಿಂದ ಇಲ್ಲಿಯ ಕಕ್ಷಿದಾರರಿಗೆ ಸುಲಭ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಇಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ಸೌಲಭ್ಯ ಸಿಗಬೇಕು ಎಂಬ ತಾಲ್ಲೂಕು ವಕೀಲರ ಸಂಘದ ಮನವಿಗೆ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಸ್ಪಂದಿಸಿದರು. ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿದ ನ್ಯಾಯಮೂರ್ತಿಗಳು 3-4 ತಿಂಗಳಲ್ಲಿ ತಮ್ಮ ಈ ಬೇಡಿಕೆ ಈಡೇರಲಿದೆ ಎಂದು ಹೇಳಿದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಮಾತನಾಡಿದ ನ್ಯಾಯಮೂರ್ತಿಗಳು ಎಲ್ಲವೂ ಹೈಕೋರ್ಟ್ ಮೇಲೆ ಅವಲಂಬನೆಯಾಗಬಾರದು. ಜಿಲ್ಲಾ ನ್ಯಾಯಾಲಯದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕುರಿತು ವಕೀಲರು ಜನರಿಗೆ ಮನವರಿಕೆ ಮಾಡಿಕೊಡಬೇಕು. ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ತಿಳಿಸಿದರು.ವಕೀಲ ಬುಟ್ಟೆ ಬಿ.ಸಿ. ಕರ್ಸೆ ಚಂದ್ರಪಾಲ ವಕೀಲ ಆರ್.ಪಿ. ಜಾಧವ್ ಪಿ. ಜೆ. ದೇಸಾಯಿ ಸಂತೋಷ ಉಪ್ಪೆ ಹಾಗೂ ನ್ಯಾಯಾಲಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.