ವಾರಸುದಾರರಿಗೆ ಚಿನ್ನಾಭರಣ ಒಪ್ಪಿಸಿದ ಎಸ್ಪಿ ಪ್ರದೀಪ್ ಗುಂಟಿ
ಬೀದರ್: ನಗರದ ನ್ಯೂ ಆದರ್ಶ ಕಾಲೊನಿಯ ಎರಡು ಮಳಿಗೆಗಳಲ್ಲಿ ಭಾನುವಾರ (ಆ.10) ನಡೆದ ಕಳ್ಳತನ ಪ್ರಕರಣವನ್ನು ಇಲ್ಲಿನ ಗಾಂಧಿ ಗಂಜ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಘಟನೆ ಸಂಬಂಧ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಬಂಧಿಸಿ, ಬಾಲ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಬಾಲಕನಿಂದ ₹4.65 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಒಂದು ಐಫೋನ್, ಎರಡು ಕೆನಾನ್ ಕಂಪನಿಯ ಕ್ಯಾಮೆರಾಗಳು, ಒಂದು ಹಾರ್ಡ್ ಡಿಸ್ಕ್, ಒಂದು ಲ್ಯಾಪ್‌ಟಾಪ್, ಮೊಬೈಲ್ ಬಿಡಿಭಾಗಗಳು, 11 ಹಳೆಯ ಮೊಬೈಲ್‌ಗಳು, ಒಂದು ಟ್ಯಾಬ್, ಕೃತ್ಯಕ್ಕೆ ಬಳಸಿದ ಸ್ಪ್ಲೆಂಡರ್ ಬೈಕ್ ಸೇರಿದೆ.
‘ನಗರದ ನ್ಯೂ ಆದರ್ಶ ಕಾಲೊನಿಯ ಎರಡು ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿತ್ತು. ಬಳಿಕ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿತ್ತು. ಮಳಿಗೆಯ ಸಮೀಪದ ಮನೆಯೊಂದರ ಬಾಲಕ ಈ ಕೃತ್ಯ ಎಸಗಿದ್ದಾನೆ. ಮನೆಯಲ್ಲಿ ಪೋಷಕರಿಗೆ ಹಣ ಕೇಳಿದ್ದಾನೆ. ಅವರು ಕೊಡಲು ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ. ಕಳ್ಳತನ ಹಾಗೂ ಬೆಂಕಿ ಹಚ್ಚಿರುವುದಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ, ಬಾಲ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಡಿವೈಎಸ್ಪಿ ಶಿವನಗೌಡ ಪಾಟೀಲ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆನಂದರಾವ್ ಎಸ್.ಎನ್., ಪಿಎಸ್‌ಐ ವಿದ್ಯವಾನ್, ಸಿಬ್ಬಂದಿ ಅನಿಲ್, ಮನೋಜ್, ಇರ್ಫಾನ್, ಗಂಗಾಧರ, ಸುಧಾಕರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. 48 ಗಂಟೆಗಳಲ್ಲಿ ಈ ತಂಡ ಪ್ರಕರಣ ಭೇದಿಸಿ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವಾನಂದ ಪವಾಡಶೆಟ್ಟಿ, ಶಿವನಗೌಡ ಪಾಟೀಲ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.