ADVERTISEMENT

ಕಮಲನಗರ: ಕಳಗಾಪುರ ರಸ್ತೆಯಲ್ಲಿ ಸಂಚಾರ ಸಂಕಟ

ರಸ್ತೆಯ ಉದ್ದಕ್ಕೂ ಭಾರಿ ಹೊಂಡಗಳು ನಿರ್ಮಾಣ: ಅಪಘಾತದ ಭೀತಿ

ಮನೋಜ ಕುಮಾರ್ ಗುದ್ದಿ
Published 23 ಜುಲೈ 2021, 6:14 IST
Last Updated 23 ಜುಲೈ 2021, 6:14 IST
ಕಮಲನಗರ ತಾಲ್ಲೂಕಿನ ಕಳಗಾಪುರ ಗ್ರಾಮದ ರಸ್ತೆಯ ದುಸ್ಥಿತಿ
ಕಮಲನಗರ ತಾಲ್ಲೂಕಿನ ಕಳಗಾಪುರ ಗ್ರಾಮದ ರಸ್ತೆಯ ದುಸ್ಥಿತಿ   

ಕಮಲನಗರ: ರಸ್ತೆಯ ಉದ್ದಕ್ಕೂ ಹೊಂಡಗಳು, ರಸ್ತೆಯ ಸಮತಟ್ಟಾಗಿ ನಿಂತ ಮಳೆ ನೀರು, ಜಲ್ಲಿಕಲ್ಲುಗಳಿಂದ ವಾಹನ ಸಂಚಾರಕ್ಕೆ ಸಂಕಟ, ಹೊಂಡ ಗಳಲ್ಲಿ ಜಾರಿ ಬೀಳುತ್ತಿರುವ ಜನ...

–ಇದು ಕಳಗಾಪುರ ಗ್ರಾಮದಿಂದ ಚಂದನವಾಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ದುಸ್ಥಿತಿ.

ಕಳಗಾಪುರ ಗ್ರಾಮದಿಂದ ಚಂದನವಾಡಿ ವಾಯಾ ಸೋನಾಳ, ಕಮಲನಗರ, ಲಖಣಗಾಂವ್, ಹುಲಸೂರು, ಉದಗೀರ ಸೇರಿ ವಿವಿಧ ಗ್ರಾಮಕ್ಕೆ ತೆರಳುವ ಪ್ರಯಾಣಿಕರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮೇಲೆ ವಾಹನ ಸಂಚಾರವಲ್ಲ ನಡೆದೂ ಹೋಗಲು ಆಗದಂತಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದು ಗುಂಡಿ ಯಾವುದು, ರಸ್ತೆ ಯಾವುದು ಎಂಬುದು ತಿಳಿಯದಂತಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾದ ಘಟನೆಗಳು ಸಂಭವಿಸಿವೆ.

ADVERTISEMENT

‘ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ರಸ್ತೆ ಸಮಸ್ಯೆ ತೀವ್ರವಾಗಿದೆ. ಕಳಗಾಪುರ ಗ್ರಾಮದಿಂದ ರೈಲ್ವೆ ಗೇಟ್‌ವರೆಗೆ ವಾಯಾ ಚಂದನವಾಡಿ ಹಾಗೂ ಸೋನಾಳ ಕ್ರಾಸ್ ಮೂಲಕ ಹಾದು ಕಮಲನಗರಕ್ಕೆ ತಹಶೀಲ್ದಾರ್ ಕಚೇರಿ ಕೆಲಸ ಸೇರಿದಂತೆ ಮತ್ತಿತರ ಕೆಲಸಕ್ಕೆ ತೆರಳುವ ಜನ ಹೈರಾಣಾಗುತ್ತಿದ್ದಾರೆ’ ಎಂದು ಕಳಗಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಗಾಪುರ ಗ್ರಾಮದಿಂದ 12 ಕಿ.ಮೀ ದೂರದ ರಸ್ತೆ ಸ್ಥಿತಿ ಹೇಳತೀರದಾಗಿದೆ. ಈ ಕುರಿತು ಎಇಇ ರಾಠೋಡ್ ಅವರನ್ನು ಸಂಪರ್ಕಿಸಿದಾಗ 2 ಕಿ.ಮೀ ಉದ್ದದ ರಸ್ತೆ ಟೆಂಡರ್‌ ಪ್ರಕ್ರಿಯೆಯಲ್ಲಿ ಇದೆ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆ ತಗ್ಗು ಗುಂಡಿಗಳು ಮತ್ತು ಹೊರಂಡಿ ಕ್ರಾಸ್‌ವರೆಗಿನ ತಗ್ಗು ಮುಚ್ಚಿ ಕೈತೊಳೆದುಕೊಂಡಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಈಚೆಗೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಂಡಗಳು ಬಿದ್ದಿವೆ. ರಸ್ತೆಯ ಸಮವಾಗಿ ನೀರು ನಿಂತಿರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಹಲವು ವರ್ಷಗಳಿಂದ ಡಾಂಬರೀಕರಣ ಮಾಡದೇ ಇರುವುದರಿಂದ ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಎದುರಾಗುತ್ತದೆ. ಆದರೆ ನಮ್ಮ ಸಮಸ್ಯೆ ಯಾರೂ ಆಲಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಕಳಗಾಪುರ ಗ್ರಾಮದ ಶತ್ರುಘ್ನ ಸಂಬಾಜಿರಾವ ಬಿರಾದಾರ, ದಿನೇಶ ಮೋರೆ, ಸತೀಷ ಧವಲಜಿ, ಬಾಲಾಜಿ ಹರೀಬಾ, ಸತೀಷ ರಾಮಜಿ, ಲೋಕೇಶ ಪಾಟೀಲ, ಓಂಕಾರ ದೇವಾಜಿ, ಸಂದೀಪ ರೋಡೆ, ಶರದ ದೇವಾಜಿ, ಆತ್ಮರಾಮ ಪಾಟೀಲ, ಸಂತೋಷ ರಾಮಜಿ, ವಿಷ್ಣು, ಸಂಜೀವ ಕರಕರೆ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.