ADVERTISEMENT

ಬೀದರ್‌: ಫೆ.8ರಿಂದ ಕಲ್ಯಾಣ ಕರ್ನಾಟಕ ‘ಜಾಂಬೊರೇಟ್‌’

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 16:27 IST
Last Updated 27 ಜನವರಿ 2024, 16:27 IST
ಜಾಂಬೊರೇಟ್‌ ಮುಖ್ಯಸ್ಥ ಅಬ್ದುಲ್‌ ಖದೀರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಜಾಂಬೊರೇಟ್‌ ಮುಖ್ಯಸ್ಥ ಅಬ್ದುಲ್‌ ಖದೀರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಬೀದರ್‌: ‘ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ಶಾಖೆಯಿಂದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ‘ಜಾಂಬೊರೇಟ್‌’ ಫೆಬ್ರುವರಿ 8ರಿಂದ 12ರ ವರೆಗೆ ನಗರದ ಶಾಹೀನ್‌ ಪದವಿಪೂರ್ವ ವಿಜ್ಞಾನ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ‘ಜಾಂಬೊರೇಟ್‌’ ಮುಖ್ಯಸ್ಥ ಅಬ್ದುಲ್‌ ಖದೀರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ನಾನು ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಇದು ಜಗತ್ತಿನ ಅತಿದೊಡ್ಡ ಜಾತ್ಯತೀತ ಸಂಘಟನೆ. ಇದು ಸೌಹಾರ್ದತೆ, ಬದುಕುವ ಕಲೆ, ಸಮಾಜ ಸೇವೆ, ಶಿಸ್ತು, ನಿಷ್ಠೆ ಕಲಿಸುತ್ತದೆ. ಅನೇಕರು ಇದರ ಮೂಲಕ ರಾಷ್ಟ್ರಪತಿ, ರಾಜ್ಯಪಾಲರಿಂದ ಪದಕವೂ ಪಡೆದಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯವೂ ಇದೆ. ನಮ್ಮ ಭಾಗದ ಮಕ್ಕಳಿಗೆ ಹೆಚ್ಚಿನ ಪ್ರಯೋಜನ ಸಿಗಲಿ ಎಂಬ ಉದ್ದೇಶದಿಂದ ಈ ಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಡಾ.ಸಿದ್ದಾರೆಡ್ಡಿ ಅವರು 1995ರಲ್ಲಿ ರಾಜ್ಯಮಟ್ಟದ ಜಾಂಬೊರೇಟ್‌ ಬೀದರ್‌ನಲ್ಲಿ ಹಮ್ಮಿಕೊಂಡಿದ್ದರು. ಅದಾದ ಬಳಿಕ ನಡೆದಿರಲಿಲ್ಲ. ಸದಾ ನೆನಪಿನಲ್ಲಿ ಉಳಿಯುವಂತೆ ಈ ಸಲದ ಜಾಂಬೊರೇಟ್‌ ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ADVERTISEMENT

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಯಾಣ ಕರ್ನಾಟಕ ವಿಭಾಗದ ಸಂಯೋಜಕಿ ಮಲ್ಲೇಶ್ವರಿ ಜುಬಾರೆ ಮಾತನಾಡಿ, ಐದು ದಿನಗಳು ನಡೆಯಲಿರುವ ಜಾಂಬೊರೇಟ್‌ನಲ್ಲಿ ರಂಗೋಲಿ, ಪೇಪರ್ ಕಟ್ಟಿಂಗ್, ಕ್ಲೇ ಮಾಡಲಿಂಗ್‌, ನಾಯಕತ್ವದ ಗುಣ, ಬೆಂಕಿ ಇಲ್ಲದೆ ಅಡುಗೆ ತಯಾರಿಸುವುದು, ರಸಪ್ರಶ್ನೆ ಸ್ಪರ್ಧೆ, ಸೋಲಾರ್ ತಂತ್ರಜ್ಞಾನ, ಅಗ್ನಿ ಸುರಕ್ಷತಾ ಕ್ರಮಗಳ ಮಾಹಿತಿ, ಸುಸ್ಥಿರ ಅಭಿವೃದ್ಧಿ ತರಬೇತಿ, ಜಾನಪದ ನೃತ್ಯ, ದೇಶಭಕ್ತಿ ನೃತ್ಯ, ಎರೋಬಿಕ್ ಡಾನ್ಸ್‌, ಸರ್ವಧರ್ಮ ಪ್ರಾರ್ಥನೆಗಳು ನಡೆಯಲಿವೆ ಎಂದು ಹೇಳಿದರು.

ಜಾಂಬೊರೇಟ್‌ನಲ್ಲಿ ಬೀದರ್‌ ಜಿಲ್ಲೆಯಿಂದ 800 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಳ್ಳುವರು. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಒಟ್ಟು ಮೂರು ಸಾವಿರ ವಿದ್ಯಾರ್ಥಿಗಳ ಭಾಗವಹಿಸುವರು. ಎಲ್ಲರಿಗೂ ಊಟ, ಕುಡಿಯುವ ನೀರು, ಟೀ ಶರ್ಟ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಶಾಹೀನ್‌ ಶಿಕ್ಷಣ ಸಂಸ್ಥೆ ಪೂರೈಸುತ್ತಿದೆ. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಇತರೆ ಸಂಘಟನೆಗಳು ನೆರವು ನೀಡುತ್ತಿವೆ ಎಂದು ತಿಳಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ಇದುವರೆಗೆ ಒಂದು ಅಂತರರಾಷ್ಟ್ರೀಯ, ಮೂರು ರಾಷ್ಟ್ರೀಯ ಮಟ್ಟದಲ್ಲಿ ಹಾಗೂ 28 ಜಾಂಬೊರೇಟ್‌ಗಳನ್ನು ಸಂಘಟಿಸಲಾಗಿದೆ. ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಡಾ. ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಜಾಂಬೊರೇಟ್ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ ಕರ್ನಾಟಕ ರಾಜ್ಯದ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ನೆತೃತ್ವದಲ್ಲಿ ನಡೆಯಲಿದೆ. ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಉದ್ಘಾಟಿಸುವರು ಎಂದು ತಿಳಿಸಿದರು.

ಜಾಂಬೊರೇಟ್ ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಕ್ಯಾಂಪ್ ನಾಯಕ ರಮೇಶ ತಿಬಶೆಟ್ಟಿ, ಕ್ಯಾಂಪ್ ನಾಯಕಿ ಜೈಶೀಲಾ ಸುದರ್ಶನ್‌, ಜಿಲ್ಲಾ ಸಂಘಟಕಿ ನಾಗರತ್ನ ಪಾಟೀಲ ಹಾಜರಿದ್ದರು.

ಜಾಂಬೊರೇಟ್‌ ವಿಶೇಷ ಪ್ರಶಸ್ತಿ
ಚಿಪ್‌ ಮೂಲಕ ವಿಶೇಷ ನಿಗಾ ‘ಜಾಂಬೊರೇಟ್‌ನಲ್ಲಿ ಹತ್ತು ಹಲವು ಚಟುವಟಿಕೆಗಳು ನಡೆಯಲಿವೆ. ಎಲ್ಲದರಲ್ಲಿ ಉತ್ತಮ ಸಾಧನೆ ತೋರುವವರಿಗೆ ‘ಜಾಂಬೊರೇಟ್‌’ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಅವರ ಐ.ಡಿ. ಕಾರ್ಡ್‌ನಲ್ಲಿ ಚಿಪ್‌ ಅಳವಡಿಸಲಾಗಿದೆ. ಅವರು ಯಾವ್ಯಾವ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎನ್ನುವುದು ಅದರಿಂದ ಗೊತ್ತಾಗಲಿದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಯಾಣ ಕರ್ನಾಟಕ ವಿಭಾಗದ ಸಂಯೋಜಕಿ ಮಲ್ಲೇಶ್ವರಿ ಜುಬಾರೆ ತಿಳಿಸಿದರು. ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 8ರ ವರೆಗೆ ಸಾಹಸಮಯ ಸಾಂಸ್ಕೃತಿಕ ಚಟುವಟಿಕೆಗಳು ಯೋಗ ಧ್ಯಾನ ಜಾಥಾ ಪಥ ಸಂಚಲನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಜಿಲ್ಲೆಯ ಜಾತ್ರೆಗಳ ಸನ್ನಿವೇಶ ಪ್ರದರ್ಶನ ಜಿಲ್ಲಾ ವೈಭವ ದೈಹಿಕ ಶಿಕ್ಷಣ ‘ಲೋಕಲ್ ಟ್ಯಾಲೆಂಟ್ ಶೋ’ ಸೇರಿದಂತೆ ಹಲವಾರು ಚಟುವಟಿಕೆಗಳು ನಡೆಯಲಿವೆ ಎಂದು ವಿವರಿಸಿದರು.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.