
ಔರಾದ್: ‘ಕನ್ನಡ ನಾಡು ನುಡಿಗೆ ಈ ಭಾಗದ ಸಾಹಿತಿಗಳು, ಚಿಂತಕರು, ಹೋರಾಟಗಾರರ ಕೊಡುಗೆ ಅಪಾರವಾಗಿದೆ’ ಎಂದು ತಹಶೀಲ್ದಾರ್ ಮಹೇಶ ಪಾಟೀಲ ಹೇಳಿದರು.
ಪಟ್ಟಣದ ಅಮರೇಶ್ವರ ಕಾಲೇಜಿನಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಾಲ್ಲೂಕು ಆಡಳಿತ ಆಯೋಜಿಸಿದ ಕರುನಾಡು ಸಾಂಸ್ಕೃತಿಕ ಉತ್ಸವ ನಾಡು-ನುಡಿ ಚಿಂತನೆ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಕನ್ನಡ ರಕ್ಷಣೆ ವಿಷಯ ಬಂದಾಗ ಎಲ್ಲರೂ ಜಾತಿ ಬೇಧ ಮರೆತು ಕನ್ನಡ ರಕ್ಷಣೆ ಮಾಡಿದ್ದಾರೆ. ಶರಣರು ರಚಿಸಿದ ವಚನ ಸಾಹಿತ್ಯ ಜಗತ್ತಿಗೆ ಉತ್ತಮ ಸಂದೇಶ ನೀಡಿದೆ. ಈ ಭಾಗದ ಕವಿಗಳು, ಸಾಹಿತಿಗಳು, ಬರಹಗಾರರ ಕನ್ನಡದ ಶ್ರೀಮಂತಿಕೆ ಎತ್ತಿ ತೋರಿಸಿದ್ದಾರೆ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, ‘ಕನ್ನಡವೆಂದರೆ ಒಂದು ಭಾಷೆಯಲ್ಲ, ಅದು ಸಮಗ್ರ ಜೀವನ ಮೌಲ್ಯಗಳ ಸಂಗಮವಾಗಿದೆ. ಕನ್ನಡಪರ ಕಾಳಜಿ ಇಟ್ಟುಕೊಂಡು ಗಡಿಯಲ್ಲಿ ಕನ್ನಡದ ಬೆಳವಣಿಗೆಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ತಾಲ್ಲೂಕು ಆಡಳಿತದ ಕಾರ್ಯ ಶ್ಲಾಘನೀಯ’ ಎಂದರು.
ಪ್ರಾಂಶುಪಾಲೆ ಪ್ರೇಮಾ ಹೂಗಾರ, ಆರ್.ಪಿ ಮಠ ಮಾತನಾಡಿದರು. ಪತ್ರಕರ್ತ ಅಮರಸ್ವಾಮಿ, ಅಶೋಕ ಶೆಂಬೆಳ್ಳೆ, ಉತ್ತಮ ಜಾಧವ್, ಶಿವರಾಮ ರಾಠೋಡ್, ಉತ್ತಮ ದಂಡೆ, ಸಿಕಂದರ್ ಚವಾಣ್, ಶೇಖ್ ಮುಜೀಬ್, ಪ್ರೀಯಾ ಮಿಲಿಂದ್ ಇದ್ದರು. ಕಾರ್ಯಕ್ರಮದ ನಂತರ ತಹಶೀಲ್ದಾರ್ ಮಹೇಶ ಪಾಟೀಲ ವಿದ್ಯಾರ್ಥಿಗಳ ಜತೆ ಕನ್ನಡ ನಾಡು ನುಡಿ ವಿಚಾರವಾಗಿ ಸಂವಾದ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.