ADVERTISEMENT

ಕಮಲನಗರ: ಮಂಗಗಳ ಕಾಟಕ್ಕೆ ಬೇಸತ್ತ ಜನ

ನಾಲ್ಕೈದು ಜನರನ್ನು ಗಾಯಗೊಳಿಸಿದ ಮಂಗ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:28 IST
Last Updated 17 ಜನವರಿ 2026, 6:28 IST
ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದಲ್ಲಿ ಮನೆಯ ಮೇಲೆ ಕುಳಿತಿರುವ ಮಂಗಗಳು
ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದಲ್ಲಿ ಮನೆಯ ಮೇಲೆ ಕುಳಿತಿರುವ ಮಂಗಗಳು   

ಕಮಲನಗರ: ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ.


ಮನೆ ಅಂಗಳದಲ್ಲಿ, ಮಾಳಿಗೆ ಮೇಲೆ ತಂಡೋಪ ತಂಡವಾಗಿ ಬರುವ ಮಂಗಗಳು ಮನೆಯ ಚಾವಣಿ, ಕಬ್ಬಿಣದ ಶೀಟ್‍ಗಳ ಮೇಲೆ ತಮ್ಮ ಉಪಟಳ ಆರಂಭಿಸುತ್ತಿವೆ. ಮನೆ ಒಳಗಡೆಯೂ ನುಗ್ಗಿ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುವ ಸಂದರ್ಭದಲ್ಲಿ ಅಡ್ಡಗಟ್ಟಲು ಮುಂದಾದರೆ ಮೈಮೇಲೆ ಎರಗುತ್ತಿವೆ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಮಂಗವೊಂದರ ಉಪಟಳ ಹೆಚ್ಚಾಗಿದ್ದು, ಈಗಾಗಲೇ ನಾಲ್ಕೈದು ಜನರ ಮೇಲೆ ಮಂಗ ದಾಳಿ ನಡೆಸಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರ ಮೇಲೆ ಮಂಗವೊಂದು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗುರುವಾರ ಕೂಡಾ ಏಕಾಏಕಿ ರಾಮಕಿಶನ್‌ ಠಾಕೂರ ಎನ್ನುವವರ ಮೇಲೆ ದಾಳಿ ನಡೆಸಿದ ಮಂಗ, ಅವರ ಕಾಲಿಗೆ ಕಚ್ಚಿದ್ದರಿಂದ ವೃದ್ಧರ ಕಾಲಿನಿಂದ ತೀವ್ರ ರಕ್ತಸ್ರಾವವಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ADVERTISEMENT

ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಮಂಗವನ್ನ ಹಿಡಿದು ಕಾಡಿಗೆ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಕಮಲನಗರ ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ವೃದ್ಧ ರಾಮಕಿಶನ್‌ ಠಾಕೂರ ಮೇಲೆ ಗುರುವಾರ ಮಂಗವೊಂದು ದಾಳಿ ನಡೆಸಿದ್ದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು 
ಚ್ಯಾಂಡೇಶ್ವರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮಂಗವೊಂದು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದೆ. ಕೂಡಲೇ ಅರಣ್ಯ ಇಲಾಖೆ ಮಂಗವನ್ನ ಸೆರೆ ಹಿಡಿದು ಸ್ಥಳಾಂತರಿಸುವ ಕಾರ್ಯ ಮಾಡಬೇಕು
- ಶ್ರೀಪಾದ ಪಾಟೀಲ್, ಗ್ರಾಮಸ್ಥ
‘ಚ್ಯಾಂಡೇಶ್ವರ ಗ್ರಾಮದಲ್ಲಿ ಮಂಗಗಳ ಹಾವಳಿ ಕುರಿತು ಗಮನಕ್ಕೆ ಬಂದಿದ್ದು ಈ ಕುರಿತು ಗ್ರಾಮ ಪಂಚಾಯತಿಯವರಿಗೆ ಮಂಗನ ಸೆರೆ ಹಿಡಿಯಲು ಹಾಗೂ ಮಂಗಗಳನ್ನು ಓಡಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ತಿಳಿಸಲಾಗಿದೆ.
-ಸುಧಾಕರ ಬಿರಾದಾರ, ಉಪ ವಲಯ ಅರಣ್ಯ ಅಧಿಕಾರಿ ಕಮಲನಗರ
ಮಂಗವನ್ನು ಸೆರೆ ಹಿಡಿಯಲು ₹30 ಸಾವಿರದಿಂದ ₹40 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಆದರೆ ನಮ್ಮ ಪಂಚಾಯತಿ ಚಿಕ್ಕದು ಇರುವುದರಿಂದ ಇಷ್ಟೊಂದು ಹಣ ಭರಿಸಲು ಸಾಧ್ಯವಿಲ್ಲ
–ವೆಂಕಟೇಶ ದೇಶಪಾಂಡೆ, ಪಿಡಿಒ ಡಿಗ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.