ADVERTISEMENT

ಕಮಲನಗರ | ನೀರಿಗಾಗಿ ವಾಗನಗೇರಾ ಗ್ರಾಮಸ್ಥರ ಪರದಾಟ

ಬೇಸಿಗೆಗೂ ಮುನ್ನವೇ ಹಾಹಾಕಾರ; 2 ಕಿ.ಮೀ ದೂರದಿಂದ ನೀರು ತರಬೇಕಾದ ‍ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:44 IST
Last Updated 9 ಫೆಬ್ರುವರಿ 2026, 7:44 IST
ಕಮಲನಗರ ತಾಲ್ಲೂಕಿನ ವಾಗನಗೇರಾ ಗ್ರಾಮದ ಜಾಮಾ ಮಸೀದಿ ಮುಂಭಾಗದಲ್ಲಿಯ ನೆಲಮಟ್ಟದ ಕುಡಿಯುವ ನೀರು ಸಂಗ್ರಹಗಾರ ನೆಲಸಮ ಮಾಡಿದ ಸ್ಥಳದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು
ಕಮಲನಗರ ತಾಲ್ಲೂಕಿನ ವಾಗನಗೇರಾ ಗ್ರಾಮದ ಜಾಮಾ ಮಸೀದಿ ಮುಂಭಾಗದಲ್ಲಿಯ ನೆಲಮಟ್ಟದ ಕುಡಿಯುವ ನೀರು ಸಂಗ್ರಹಗಾರ ನೆಲಸಮ ಮಾಡಿದ ಸ್ಥಳದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು   

ಕಮಲನಗರ : ತಾಲ್ಲೂಕಿನ ಮುರ್ಕಿ ಗ್ರಾ.ಪಂ. ವ್ಯಾಪ್ತಿಯ ವಾಗನಗೇರಾ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ತಾಲ್ಲೂಕು ಕೇಂದ್ರದಿಂದ 18 ಕಿ.ಮೀ.ದೂರದಲ್ಲಿರುವ ವಾಗನಗೇರಾ ಗ್ರಾಮದಲ್ಲಿ 1600 ಜನಸಂಖ್ಯೆ ಇದೆ. ಎತ್ತರದ ದಿನ್ನೆ ಮೇಲಿರುವ ಗ್ರಾಮದ ಪಕ್ಕದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ ಇದ್ದರೂ ಬೇಸಿಗೆ ಮುನ್ನವೇ ನೀರಿನ ಸಮಸ್ಯೆಯಾಗಿದೆ. 

ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಆರಂಭಗೊಂಡಿದೆ. ಈಗಾಗಲೇ ಪೈಪ್‍ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಎರಡು ಕೊಳವೆ ಬಾವಿ ಪೈಕಿ ಒಂದಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ಗ್ರಾಮದ ಅರ್ಧ ಜನರ ಮನೆಗಳ ನಲ್ಲಿಗಳಿಗೆ ಅಲ್ಪ ಸ್ವಲ್ಪ ನೀರು ಮಾತ್ರ ಸರಬರಾಜಾಗುತ್ತಿದೆ. ಉಳಿದ ಕಡೆ ಹನಿ ನೀರು ಬಾರದೆ ಇರುವುದರಿಂದ ಜನರು 2 ಕಿ.ಮೀದೂರದ ಕೊಳವೆ ಬಾವಿ ಇಲ್ಲವೇ ಕೆರೆ ಪಕ್ಕದ ಖಾಸಗಿ ಕೊಳವೆ ಬಾವಿಗೆ ತೆರಳಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ADVERTISEMENT

ಎರಡು ದಶಕದ ಹಿಂದೆ ನಿರ್ಮಿಸಲಾದ ನೆಲಮಟ್ಟದ ಕುಡಿಯುವ (ಜಿಎಸ್‌ಎಲ್‌ಆರ್)ನೀರು ಸಂಗ್ರಹಗಾರ ನೆಲಸಮಗೊಳಿಸಲಾಗಿದೆ. ಅದೇ ಸ್ಥಳದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಆದರೆ ಕ್ರಿಯಾ ಯೋಜನೆಯಲ್ಲಿ ಓವರ್‌ ಹೆಡ್‌ ಟ್ಯಾಂಕ್ ಕಾಮಗಾರಿ ಕೈಗೊಳ್ಳಲು ಪ್ರಸ್ತಾವ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಹಳೆ ಕುಡಿಯುವ ನೀರಿನ ಟ್ಯಾಂಕ್ ನೆಲಸಮಗೊಳಿಸಿದ್ದೇಕೆ ಎಂದು ಗ್ರಾಮದ ಭರತ ಶಿವಾಜಿ ಕಾಳೆ, ದಿಗಂಬರ ಕಾಳೆ, ಸಮದ್ ಸೈಯದ್, ತೇಜುಬಾಯಿ ಗುಂಡೇರಾವ, ಜ್ಞಾನೋಬಾ ಕಾಳೆ, ಪ್ರತೀಕ್ಷಾ ಮಚ್ಛೇಂದ್ರ, ನಂದಿನಿ ಆನಂದರಾವ, ಛೂಟಿಬೀ ಅಮೀರಸಾಬ್ ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಗ್ರಾ.ಪಂ ಅಧಿಕಾರಿಗೆ ದೂರು ನೀಡಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನ ಹರಿಸಿ ಗ್ರಾಮದಲ್ಲಿಯ ನಲ್ಲಿಗಳಿಗೆ ಸಮರ್ಪಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಫೋಟೋ ಕ್ಯಾಪ್ಷನ್ : 8ಕೆಎಂಎಲ್01-ಎ : ಕಮಲನಗರ ತಾಲ್ಲೂಕಿನ ವಾಗನಗೇರಾ ಗ್ರಾಮದಲ್ಲಿಯ ಜೆಜೆಎಂ ನಲ್ಲಿಗೆ ಅಲ್ಪ ಸ್ವಲ್ಪ ನೀರು ಬರುತ್ತಿರುವುದು.
ಹಗಲು ರಾತ್ರಿ ಎನ್ನದೇ ಕಿ.ಮೀಗಟ್ಟಲೇ ನಡೆದುಕೊಂಡು ಹೋಗಿ ನೀರು ಸಂಗ್ರಹಿಸಬೇಕಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಟ್ಯಾಂಕರ್ ಮೂಲಕ ಅಥವಾ ಮನೆಗಳ ನಲ್ಲಿಗಳಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು.
ಶೇಷಾಬಾಯಿ ನರಸಿಂಗ ಗ್ರಾಮದ ಮಹಿಳೆ 
ನೆಲಮಟ್ಟದ ನೀರು ಸಂಗ್ರಹಗಾರ ಕ್ರಿಯಾ ಯೋಜನೆಯಲ್ಲಿದೆ. ಆದರೆ ಗ್ರಾಮಸ್ಥರು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಹೀಗಾಗಿ ಕಾಮಗಾರಿ ಅಪೂರ್ಣವಾಗಿದೆ. ಎರಡ್ಮೂರು ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಲಾಗುವುದು 
ಮಾರುತಿ ರಾಠೋಡ ಎಇಇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.