
ಬೀದರ್: ‘ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಟೋಕರೆ ಕೋಳಿ ಕಬ್ಬಲಿಗ ಸಮಾಜದ ಸುಶೀಲಾಬಾಯಿ ಎಂಬ ಮಹಿಳೆಗೆ ಅದೇ ಗ್ರಾಮದ ಕೆಲವರು ಸಾರಾಯಿ ಕುಡಿಸಿ ಕೆರೆಯೊಳಗೆ ಎಸೆದು ಕೊಲೆಗೆ ಯತ್ನಿಸಿರುವುದಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು’ ಎಂದು ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷೆ ಜೈಶ್ರೀ ಕಟ್ಟಿಮನಿ ತಿಳಿಸಿದರು.
‘ಹಣದ ವ್ಯವಹಾರದ ವಿಷಯದಲ್ಲಿ ಮಹಿಳೆಗೆ ಅನ್ಯಾಯ ಮಾಡಲಾಗಿದೆ. ಜೊತೆಗೆ ಕೊಲೆಗೆ ಯತ್ನ ನಡೆದಿದೆ. ಈ ಎಲ್ಲಾ ವಿಷಯ ಧನ್ನೂರ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಗೊತ್ತಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿದ್ದಾಗ ಎಂಎಲ್‌ಸಿ ಕೂಡ ಅದೇ ದಿನ ರಾತ್ರಿ ಆಗಿದೆ. ಘಟನೆ ನಡೆದ 24 ಗಂಟೆಯೊಳಗೆ ಎಫ್‌ಐಆರ್ ಆಗಬೇಕು. ಆದರೆ, ಏಳು ದಿನಗಳು ಕಳೆದರೂ ಇಂದಿಗೂ ಎಫ್‌ಐಆರ್ ಆಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಸವಾದಿ ಶರಣರು, ಸೂಫಿ ಸಂತರ ನಾಡಿನಲ್ಲಿ ಒಬ್ಬ ಮಹಿಳೆಗೆ ಇಷ್ಟೆಲ್ಲಾ ಅನ್ಯಾಯ ಆದರೂ, ಕೊಲೆ ಯತ್ನ ನಡೆದರೂ ನ್ಯಾಯ ಸಿಗದೆ ಇರುವುದು ವಿಷಾದನೀಯ. ಕೂಡಲೇ ಆರೋಪಿಗಳ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಬೇಕು. ಆರೋಪಿಗಳ ಬಂಧನವಾಗಬೇಕು. ಇಲ್ಲದಿದ್ದರೆ ಕಲಬುರಗಿ ಐಜಿ, ಎಸ್‌ಪಿಯವರು ಹಾಗೂ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹಲ್ಲೆಗೊಳಗಾದ ಟೋಕರೆ ಕೋಲಿ ಕಬ್ಬಲಿಗ ಸಮಾಜದ ಮಹಿಳೆ ಸುಶೀಲಾಬಾಯಿ ಮಾತನಾಡಿ, ‘ಕೆರೆ ಕಡೆಗೆ ಬಹಿರ್ದೆಸೆಗೆ ಒಬ್ಬಳೇ ಹೋದಾಗ ನನ್ನ ಬಾಯಿ ಮುಚ್ಚಿ, ಪೊದೆಯೊಳಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಬಾಯೊಳಗೆ ಸಾರಾಯಿ ಹಾಕಿ, ಮೂರು ಜನ ಕೆರೆಯೊಳಗೆ ಎಸೆದರು. ಅಂದು ಕೆಲವು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಬಂದು ನನಗೆ ಕಾಪಾಡದಿದ್ದರೆ ನಾನು ಸಾಯುತಿದ್ದೆ. ಇಷ್ಟೆಲ್ಲಾ ಘಟನೆಗಳ ಬಗ್ಗೆ ಧನ್ನೂರ ಪೊಲೀಸರಿಗೆ ಮಾಹಿತಿ ಇದ್ದರೂ, ಅವರ ಮೇಲೆ ಇಂದಿಗೂ ಕೇಸ್ ದಾಖಲಿಸಲಿಲ್ಲ. ನನಗೆ ಅನ್ಯಾಯವಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಧನ್ನೂರ ಪೊಲೀಸ್ ಠಾಣೆ ಮುಂದೆ ನಾನು ಹಾಗೂ ನನ್ನ ಕುಟುಂಬಸ್ಥರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಕಣ್ಣೀರಿಟ್ಟರು.
ಸಂತ್ರಸ್ತ ಮಹಿಳೆಯ ಮಗ ಹಣಮಂತ ಬಸವರಾಜ ಮಾತನಾಡಿ, ‘ಈ ಕುರಿತು ಧನ್ನೂರ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಕೇಳಿದಾಗ ನೀನೇನು ನನಗೆ ಹಣ ಕೊಟ್ಟಿದ್ದಿಯಾ? ನೀನು ಹೇಳಿದ ಹಾಗೆ ಕೇಳಲು ನಾವೇನು ನಿಮ್ಮ ಆಳುಗಳಾ? ನಿನ್ನ ಮೇಲೆ ಹಳೆಯ ಕೇಸ್ ಇದೆ. ಆ ಫೈಲ್ ತೆಗೆದು ನಿನಗೆ ಒಳಗೆ ಹಾಕ್ತಿನಿ ಎಂದು ಧಮ್ಕಿ ಹಾಕುತ್ತಿದ್ದಾರೆ. ನಮ್ಮ ತಾಯಿಗೆ ನ್ಯಾಯ ಒದಗಿಸಿಕೊಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದರು.
ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ಬೀದರ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಇಂದುಬಾಯಿ ರವೀಂದ್ರ, ಸಂತ್ರಸ್ತೆಯ ಸೊಸೆ ಸುರೇಖಾ ಹಣಮಂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.