ಭಾಲ್ಕಿ: ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಿಸಿ ಗಡಿ ಪಾರು ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು,‘ಕನ್ಹೇರಿ ಮಠ ಬಸವಾದಿ ಶರಣರ ಪರಂಪರೆ ಹೊಂದಿದ ಪೀಠವಾಗಿದೆ. ಬಸವ ಸಂಸ್ಕೃತಿ ಪೀಠದ ಉತ್ತರಾಧಿಕಾರಿಗಳಾದ ಇವರು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಗುರವಾಗಿ ಮಾತನಾಡಿರುವುದು ಗಮನಿಸಿದರೆ ಇವರ ನಾಲಿಗೆ ಮತ್ತು ಮೆದುಳಿನ ಮಧ್ಯದ ಸಂಪರ್ಕ ಕಡಿತವಾದಂತೆ ಕಂಡುಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಮಾಜದ ಅಸಮತೋಲನಕ್ಕೆ ಕಾರಣರಾಗಿರುವ ಇಂಥ ಸ್ವಾಮೀಜಿ ಸಮಾಜದ ಮಧ್ಯೆ ಇರುವ ಹಕ್ಕು ಕಳೆದುಕೊಂಡಿರುತ್ತಾರೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಇವರ ವಿರುದ್ಧ ಎಫ್ಐಆರ್ ದಾಖಲಿಸಿ, ಗಡಿಪಾರಿಗೆ ಆದೇಶ ನೀಡಬೇಕು’ ಎಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ, ಪ್ರಮುಖರಾದ ರಮೇಶ ಜಿದ್ರಿ, ಸುದೀಪ ತೂಗಾವೆ, ಬಸವರಾಜ ಕಾರಬಾರಿ, ಜಗದೀಶ ಪಾಟೀಲ, ಭದ್ರಯ್ಯಾ ಸ್ವಾಮಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.