ADVERTISEMENT

ಬೀದರ್‌ ದಕ್ಷಿಣದಲ್ಲಿ ಭುಗಿಲೆದ್ದ ಅಸಮಾಧಾನ

ನಿರೀಕ್ಷೆಯಂತೆ ನಾಲ್ವರು ಪ್ರಭಾವಿಗಳಿಗೆ ಕಾಂಗ್ರೆಸ್ ಟಿಕೆಟ್

ಚಂದ್ರಕಾಂತ ಮಸಾನಿ
Published 26 ಮಾರ್ಚ್ 2023, 7:23 IST
Last Updated 26 ಮಾರ್ಚ್ 2023, 7:23 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮೂವರು ಹಾಲಿ ಶಾಸಕರು ಸೇರಿದಂತೆ ನಾಲ್ವರಿಗೆ ಕಾಂಗ್ರೆಸ್‌ ಟಿಕೆಟ್‌ ಪ್ರಕಟಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿ ಅಪಸ್ವರ ಕೇಳಿ ಬರದಿದ್ದರೂ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಅಳಿಯ ಚಂದ್ರಾಸಿಂಗ್‌ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಬಿಜೆಪಿ ಪ್ರಬಲ ವಿರೋಧಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ನಿರೀಕ್ಷೆಯಂತೆ ಕಾಂಗ್ರೆಸ್‌ ಟಿಕೆಟ್‌ ಕೊಡಲಾಗಿದೆ. ಹುಮನಾಬಾದ್‌ ಕ್ಷೇತ್ರದಲ್ಲಿ ಗೌಡರ ಅಧಿಪತ್ಯ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಗುರುತಿಸಿಕೊಂಡಿವೆ.

‘ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚುನಾವಣೆ ನಡೆದಾಗಲೆಲ್ಲ ಕನಿಷ್ಠ 5 ಸಾವಿರದಿಂದ 8 ಸಾವಿರ ಮತಗಳು ಅಧಿಕ ಬಂದಿವೆ. ಕಳೆದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲೇ ಅಧಿಕ 30 ಸಾವಿರ ಮತ ಪಡೆದ ಹಿರಿಮೆ ನನ್ನದು. ಈ ಬಾರಿಯೂ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ. ಅಂತೆಯೇ ನನಗೆ ಪಕ್ಷ ಟಿಕೆಟ್‌ ಪ್ರಕಟಿಸಿದೆ’ ಎಂದು ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಹೇಳಿದರು.

ADVERTISEMENT

ಬೀದರ್‌ ಕ್ಷೇತ್ರದಲ್ಲಿ ಮನ್ನಾನ್‌ ಸೇಠ್ ಬಿಟ್ಟರೆ ಪ್ರಬಲ ಆಕಾಂಕ್ಷಿಗಳು ಇರಲಿಲ್ಲ. ಹೀಗಾಗಿ ಮೂರು ಬಾರಿ ಚುನಾಯಿತರಾಗಿರುವ ರಹೀಂ ಖಾನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಲಾಗಿದೆ.

ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ನ್ನು ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಕೊಡಲಾಗಿದೆ. ಹಿಂದೆ ಮಕ್ಕಳ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಗುಣಮಟ್ಟದ ಕಾಮಗಾರಿಗಳ ಬಗ್ಗೆ ಗ್ರಾಮೀಣ ಜನತೆ ಇಂದಿಗೂ ಸ್ಮರಿಸುತ್ತಿದೆ. ಹೀಗಾಗಿ ಪಕ್ಷ ಅವರಿಗೆ ಟಿಕೆಟ್‌ ಪ್ರಕಟಿಸಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.

ಬಹುನಿರೀಕ್ಷೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಅಳಿಯ ಚಂದ್ರಾಸಿಂಗ್‌ ಹಾಗೂ ಹಿರಿಯ ಮುಖಂಡ ಬಸವರಾಜ ಬುಳ್ಳಾ ಅವರಿಗೆ ಟಿಕೆಟ್‌ ಕೈತಪ್ಪಿದೆ. ಬುಳ್ಳಾ ಅವರು ಪ್ರಸ್ತುತ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಿರಲು ತೀರ್ಮಾನಿಸಿದ್ದಾರೆ. ಆದರೆ, ಚಂದ್ರಾಸಿಂಗ್‌ ಬೆಂಬಲಿಗರಲ್ಲಿ ಬಂಡಾಯದ ಹೊಗೆ ಎದ್ದಿದೆ.

ಕಳೆದ ಚುನಾವಣೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಶೋಕ ಖೇಣಿ ಸೋತ ನಂತರ ಚಂದ್ರಾಸಿಂಗ್‌ ಇಲ್ಲಿಗೆ ಬಂದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು. ಆದರೆ, ಪಕ್ಷ ಅವರಿಗೆ ಟಿಕೆಟ್‌ ನೀಡಿಲ್ಲ.

‘ನಾಲ್ಕು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಟಿಕೆಟ್‌ ದೊರೆಯದವರಿಗೆ ಬೇಸರವಾಗುವುದು ಸಹಜ. ಚುನಾವಣೆಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ದಿಸೆಯಲ್ಲಿ ಅಸಮಾಧಾನಗೊಂಡಿರುವ ಮುಖಂಡರೊಂದಿಗೆ ಮಾತನಾಡುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅವರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡಲು ಶಿಫಾರಸು ಮಾಡುತ್ತೇವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಪ್ರತಿಕ್ರಿಯಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಂದ್ರಾಸಿಂಗ್‌ ನಿರ್ಧಾರ: ‘ಕಳೆದ ವರ್ಷದ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವರಿಷ್ಠರು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡುವ ಭರವಸೆ ನೀಡಿದ್ದರು. ಕುತಂತ್ರ ರಾಜಕೀಯದ ಮೂಲಕ ನನಗೆ ದೊರಕಬೇಕಿದ್ದ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಚಂದ್ರಾಸಿಂಗ್‌ ಅಸಮಾಧಾನ ಹೊರ ಹಾಕಿದ್ದಾರೆ.

‘ಪಕ್ಷದ ಅನೇಕ ಕಾರ್ಯಕರ್ತರು ಹಾಗೂ ನನ್ನ ಬೆಂಬಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸೋಮವಾರ ಮಾರ್ಚ್ 27ರಂದು ಬೀದರ್‌ನಲ್ಲಿ ನನ್ನ ಬೆಂಬಲಿಗರ ಸಭೆ ಕರೆದಿದ್ದೇನೆ. ಬೆಂಬಲಿಗರೊಂದಿಗೆ ನನ್ನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸಿ ರೂಪರೇಷೆ ಸಿದ್ಧಪಡಿಸುವೆ. ಕೊನೆಗೆ ಬೀದರ್‌ ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಸ್ಪರ್ಧಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.