ಪೇಜಾವರ ಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಬೀದರ್: ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ‘ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ’ ಎಂದು ನೀಡಿರುವ ಹೇಳಿಕೆ ಖಂಡನಾರ್ಹವಾದುದು. ಈ ರೀತಿ ಹೇಳುವುದರ ಮೂಲಕ ಅವರು ದೇಶದ ಶ್ರೇಷ್ಠ ಸಂವಿಧಾನಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೇಳಿದೆ.
ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಕರಂಜೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಿಲ ಗಂಜಕರ್ ಶನಿವಾರ ಪ್ರಕಟಣೆ ಹೊರಡಿಸಿದ್ದಾರೆ.
ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸ್ವಾತಂತ್ರ್ಯದ ಹಕ್ಕು ಕುಸಿಯುವ ಹುನ್ನಾರ ಸ್ವಾಮೀಜಿ ಹೇಳಿಕೆಯ ಭಾಗವಾಗಿದೆ. ಈ ಹಿಂದೆ ಬಿಜೆಪಿ ಮಾಜಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತುಗಳನ್ನು ಆಡಿದ್ದರು. ಈಗ ಈ ಮಾತನ್ನು ಆರ್‌ಎಸ್‌ಎಸ್ ವಕ್ತಾರರಂತಿರುವ ಪೇಜಾವರ ಸ್ವಾಮೀಜಿ ಆಡಿದ್ದಾರೆ. ಸಂವಿಧಾನ ಬದಲಿಸುವ ಮಾತು ಆಡಿರುವ ಸ್ವಾಮೀಜಿ ದೇಶದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ ತೊಲಗಿಸಲು ಪ್ರಯತ್ನಿಸಬೇಕೆಂದು ಹೇಳಬೇಕಿತ್ತು. ದೇಶದಲ್ಲಿ ಸಂವಿಧಾನ ಇರದಿದ್ದರೆ ಸ್ವಾಮೀಜಿ ಎಲ್ಲೂ ಬಹಿರಂಗವಾಗಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಜಾತ್ಯತೀತ, ಸ್ವಾತಂತ್ರ್ಯತೆ, ಪ್ರಜಾಪ್ರಭುತ್ವಕ್ಕೆ ಒತ್ತು ನೀಡುವ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವ ಸ್ವಾಮೀಜಿ ನಡೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಹಿಂದೂ ಧರ್ಮದಲ್ಲಿನ ನ್ಯೂನತೆಗಳನ್ನು ಗಮನಿಸಿ ಗೌತಮ ಬುದ್ಧ ಬೌದ್ಧ ಧರ್ಮ ಆರಂಭಿಸಿದರು. ಅದೇ ರೀತಿ ಡಾ.ಬಿ.ಆರ್. ಅಂಬೇಡ್ಕರ್ ಕೂಡ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ‘ಹಿಂದೂ ಧರ್ಮದಲ್ಲಿ ಹುಟ್ಟಿರಬಹುದು. ಆದರೆ, ಒಬ್ಬ ಹಿಂದೂವಾಗಿ ಸಾಯಲು ಇಷ್ಟಪಡುವುದಿಲ್ಲ’ ಎಂದು ಅಂಬೇಡ್ಕರ್ ಹೇಳಿದ್ದರು. ಅಂಬೇಡ್ಕರ್ ಅವರು ಹೇಳಿದ ಮಾತಿನ ನೋವನ್ನು ಸ್ವಾಮೀಜಿ ಅರಿಯಬೇಕು ಎಂದಿದ್ದಾರೆ.
ಹಿಂದೂ ಧರ್ಮದ ಪುರೋಹಿತಷಾಹಿಗಳು ದಲಿತರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದಾರೆ. ಅದರ ಬಗ್ಗೆ ಸ್ವಾಮೀಜಿ ಮಾತನಾಡುವುದಿಲ್ಲವೇಕೆ? ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಜೀವಂತ ಇದೆ. ಸಾವಿರಾರು ವರ್ಷ ಶೋಷಣೆಯ ದೌರ್ಜನ್ಯದ ಬೆಂಕಿಯಲ್ಲಿ ನರಳಿದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ದೇಶದಲ್ಲಿ ಸಂವಿಧಾನ ಬಂದ ನಂತರ ನಿಟ್ಟುಸಿರು ಬಿಡುತ್ತಿದ್ದಾರೆ. ಸ್ವಾಮೀಜಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.