ADVERTISEMENT

Lokayukta Raid | ಕಾನ್‌ಸ್ಟೆಬಲ್‌ ₹1.80 ಕೋಟಿ ಒಡೆಯ

ಲೋಕಾಯುಕ್ತರಿಂದ 15 ಎಕರೆ ಜಮೀನು, 3 ನಿವೇಶನ, ಬಂಗಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 5:06 IST
Last Updated 18 ಆಗಸ್ಟ್ 2023, 5:06 IST
ಕಾನ್‌ಸ್ಟೆಬಲ್‌ ವಿಜಯಕುಮಾರ ಎಂಬುವರಿಗೆ ಸೇರಿದ ಹುಮನಾಬಾದ್‌ ಪಟ್ಟಣದ ಬಂಗಲೆ
ಕಾನ್‌ಸ್ಟೆಬಲ್‌ ವಿಜಯಕುಮಾರ ಎಂಬುವರಿಗೆ ಸೇರಿದ ಹುಮನಾಬಾದ್‌ ಪಟ್ಟಣದ ಬಂಗಲೆ   

ಬೀದರ್‌: ಜಿಲ್ಲೆಯ ಚಿಟಗುಪ್ಪ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ವಿಜಯಕುಮಾರ ಎಂಬುವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ, ಜಿಲ್ಲೆಯ ವಿವಿಧ ಕಡೆ ₹1.80 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

ಬೀದರ್‌ ಜಿಲ್ಲೆಯ ಹುಮನಾಬಾದ್‌ ಪಟ್ಟಣ, ಬೀದರ್‌ ತಾಲ್ಲೂಕಿನ ಹೊಚಕನ್ನಳ್ಳಿ ಹಾಗೂ ಹಳ್ಳಿಕೇಡ್‌ (ಕೆ), ಚಿಟಗುಪ್ಪ ಪೊಲೀಸ್‌ ಠಾಣೆಯ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗಿನ ಜಾವ ಏಕಕಾಲಕ್ಕೆ ದಾಳಿ ನಡೆಸಿದರು. ರಾತ್ರಿ 9.30ರ ವರೆಗೂ ಶೋಧ ಕಾರ್ಯ, ದಾಖಲೆಗಳ ಪರಿಶೀಲನೆ, ಆಸ್ತಿಯ ಮೌಲ್ಯ ಲೆಕ್ಕ ಹಾಕುವ ಪ್ರಕ್ರಿಯೆ ಮುಂದುವರೆಸಿದರು.

ಬೀದರ್ ತಾಲ್ಲೂಕಿನ ಹೊಚಕನ್ನಳ್ಳಿ ಹಾಗೂ ಹಳ್ಳಿಖೇಡ್ (ಕೆ) ಗ್ರಾಮದಲ್ಲಿ 15 ಎಕರೆ ಕೃಷಿ ಜಮೀನು, ಹುಮನಾಬಾದ್ ಪಟ್ಟಣದಲ್ಲಿ ಒಂದು ಬಂಗಲೆ, ಮೂರು ನಿವೇಶನ, ₹20 ಲಕ್ಷ ಮೌಲ್ಯದ ಜೀವ ವಿಮೆ, ಒಂದು ಕಾರು, ಮೂರು ದ್ವಿಚಕ್ರ ವಾಹನಗಳು,‌ ₹10 ಲಕ್ಷ ಮೌಲ್ಯದ ಗೃಹ ಬಳಕೆಯ ವಸ್ತುಗಳು, ₹5 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಸೇರಿದಂತೆ ಇತರೆ ವಸ್ತುಗಳನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿ, ವಶಕ್ಕೆ ಪಡೆದರು.

ADVERTISEMENT

ವಿಜಯಕುಮಾರ ಅವರಿಗೆ ಸೇರಿದ ಲಾಕರ್‌, ಅಲ್ಮೇರಾ, ಕಾರಿನಲ್ಲಿ ಅವರಿಗೆ ಸಂಬಂಧಿಸಿದ ದಾಖಲೆ ಪತ್ರಗಳು, ನೇಮಕಾತಿ ದಾಖಲೆ, ಸೇವಾ ಮಾಹಿತಿ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು ಎಂದು ತಿಳಿದು ಬಂದಿದೆ. ಬೀದರ್‌ ಲೋಕಾಯುಕ್ತ ಡಿವೈಎಸ್ಪಿ ಎನ್.‌ಎಂ.ಓಲೇಕಾರ್‌ ನೇತೃತ್ವದ ಮೂರು ಪ್ರತ್ಯೇಕ ತಂಡಗಳು ತಂಡ ದಾಳಿ ನಡೆಸಿವೆ. 

‘ಇನ್ನೂ ದಾಖಲೆಗಳ ಪರಿಶೀಲನೆ, ಆಸ್ತಿ ಲೆಕ್ಕ ಹಾಕುವ ಕೆಲಸ ಪ್ರಗತಿಯಲ್ಲಿದೆ. ಸದ್ಯ ಮಾಹಿತಿ ಬಹಿರಂಗಪಡಿಸಲು ಆಗುವುದಿಲ್ಲ. ಆದರೆ, ಸರಿಸುಮಾರು ಎರಡು ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಲೋಕಾಯುಕ್ತ ಪೊಲೀಸರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್‌ ಇಲಾಖೆಯ ಕೆಳಹಂತದ ಸಿಬ್ಬಂದಿಯೊಬ್ಬರು ಅಪಾರ ಮೌಲ್ಯದ ಆಸ್ತಿ ಹೊಂದಿರುವ ವಿಷಯ ಎಲ್ಲೆಡೆ ಹರಡಿ ತೀವ್ರ ಚರ್ಚೆಗೆ ಹುಟ್ಟು ಹಾಕಿತು. ದಿನವಿಡೀ ಎಲ್ಲೆಡೆ ಇದೇ ವಿಷಯದ ಕುರಿತು ಚರ್ಚೆ ನಡೆಯಿತು. ಪೊಲೀಸ್‌ ಇಲಾಖೆಯೂ ಅದಕ್ಕೆ ಹೊರತಾಗಿರಲಿಲ್ಲ.

ವಿಜಯಕುಮಾರ ಕಾರು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು
ಕಾನ್‌ಸ್ಟೆಬಲ್‌ ವಿಜಯಕುಮಾರ
ಲೋಕಾಯುಕ್ತ ಪೊಲೀಸರು ಕಾನ್‌ಸ್ಟೆಬಲ್‌ ವಿಜಯಕುಮಾರ ಅವರ ಮನೆಯಲ್ಲಿ ಚಿನ್ನಾಭರಣ ದಾಖಲೆಗಳನ್ನು ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.