ADVERTISEMENT

ಬೀದರ್‌ ಜಿಲ್ಲೆಗೆ 29 ಕೆಪಿಎಸ್‌ ಶಾಲೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಡಿಸೆಂಬರ್ 2025, 5:35 IST
Last Updated 8 ಡಿಸೆಂಬರ್ 2025, 5:35 IST
<div class="paragraphs"><p>ಶಾಲೆ</p></div>

ಶಾಲೆ

   

(ಸಾಂಕೇತಿಕ ಚಿತ್ರ)

ಬೀದರ್‌: ರಾಜ್ಯ ಸರ್ಕಾರವು ಬೀದರ್‌ ಜಿಲ್ಲೆಗೆ ಹೊಸದಾಗಿ 29 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು (ಕೆಪಿಎಸ್‌) ಮಂಜೂರು ಮಾಡಿದೆ.

ADVERTISEMENT

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಡಿ 29 ಹೊಸ ಶಾಲೆಗಳು ತೆರೆಯಲಿವೆ. ಎಲ್‌ಕೆಜಿಯಿಂದ 12ನೇ ತರಗತಿವರೆಗಿನ ಪ್ರತಿ ಶಾಲೆಗೆ ₹1 ಕೋಟಿಯಿಂದ ₹4 ಕೋಟಿವರೆಗೆ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಒಂಬತ್ತು ಕೆಪಿಎಸ್‌ ಶಾಲೆಗಳು ನಡೆಯುತ್ತಿವೆ. ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕಿನ ಅನುದಾನದಡಿ 14 ಕೆಪಿಎಸ್‌ ಶಾಲೆಗಳು ಪ್ರಸಕ್ತ ವರ್ಷದಿಂದ ಆರಂಭಗೊಂಡಿವೆ. ಇದರೊಂದಿಗೆ ಜಿಲ್ಲೆಗೆ ಒಟ್ಟು 53 ಕೆಪಿಎಸ್‌ ಶಾಲೆಗಳು ಸಿಕ್ಕಂತಾಗಿದೆ.

ಹೊಸ ಶಾಲೆಗಳು ಎಲ್ಲಿ? ಸವಾಲುಗಳೇನು?:

ಹೊಸದಾಗಿ ಮಂಜೂರಾದ ಶಾಲೆಗಳನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿಯೇ ನಡೆಸುವಂತೆ ಸರ್ಕಾರ ಸೂಚಿಸಿದೆ. ಈಗಾಗಲೇ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿವೆ. ಕಾಯಂ ಬೋಧಕ ಸಿಬ್ಬಂದಿ ಇಲ್ಲದ ಕಾರಣ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಶಾಲೆಗಳಿಗೆ ಈಗಲೂ ಮೂಲಸೌಕರ್ಯ ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿರುವ ಬೋಧಕ, ಬೋಧಕೇತರ ಸಿಬ್ಬಂದಿಯೇ ಕೆಪಿಎಸ್‌ ಶಾಲೆಗಳನ್ನು ನಡೆಸಿಕೊಂಡು ಹೋಗಬೇಕಾದ ಸವಾಲಿದೆ.

‘ಕೆಪಿಎಸ್‌ ಶಾಲೆ ಮಂಜೂರಾದರೂ ಅವುಗಳಿಗೆ ಪ್ರತ್ಯೇಕ ಬೋಧಕ ಸಿಬ್ಬಂದಿ ಇಲ್ಲ. ಹಾಲಿ ಕನ್ನಡ ಶಾಲೆಗಳ ಶಿಕ್ಷಕರೇ ಅಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅವರ ಮೇಲೆ ಹೆಚ್ಚಿನ ಕಾರ್ಯಭಾರ ಉಂಟಾಗುತ್ತದೆ. ಅದನ್ನು ತಗ್ಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರು.

20 ಮಕ್ಕಳಿದ್ದರೆ ಎಲ್‌ಕೆಜಿ

ಜಿಲ್ಲೆಯ ಯಾವುದೇ ಭಾಗದಲ್ಲಿ 20 ಮಕ್ಕಳಿದ್ದರೆ ಸರ್ಕಾರಿ ಕನ್ನಡ ಅಥವಾ ಕೆಪಿಎಸ್‌ ಶಾಲೆಯಲ್ಲಿ ಎಲ್‌ಕೆಜಿ ಆರಂಭಿಸಬಹುದು. ನಾಲ್ಕು ವರ್ಷದ ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು ಅವಕಾಶ ಇದೆ. ಆದರೆ, ಕನಿಷ್ಠ 20 ಮಕ್ಕಳು ಇರಲೇಬೇಕೆಂಬ ಷರತ್ತು ವಿಧಿಸಲಾಗಿದೆ.

ಸಿಎಸ್‌ಆರ್‌ ಒಪ್ಪಂದದಡಿ ಶಿಕ್ಷಕರ ನಿಯೋಜನೆ 

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ‘ಅಚಂ’ ಕೆಮಿಕಲ್‌ ಇಂಡಸ್ಟ್ರಿಯೊಂದಿಗೆ ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಇದರಡಿ ಮೂರು ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಿ, ಅವರ ವೇತನವನ್ನು ಕಂಪನಿಯೇ ಪಾವತಿಸುತ್ತದೆ. ಹತ್ತು ತಿಂಗಳ ವರೆಗೆ ಈ ಒಪ್ಪಂದ ಜಾರಿಯಲ್ಲಿರುತ್ತದೆ. ಬೀದರ್‌ ನಗರದ ರಾವ್‌ ತಾಲೀಮ್‌, ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿ ಹಾಗೂ ಹುಲಸೂರ ಕೆಪಿಎಸ್‌ ಶಾಲೆಗಳು ಒಪ್ಪಂದದ ವ್ಯಾಪ್ತಿಯಲ್ಲಿವೆ.

ಹಂತ ಹಂತವಾಗಿ ಕೈಗಾರಿಕೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಡಿಡಿಪಿಐ ಸುರೇಶಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಾಲಿ ಸರ್ಕಾರಿ ಶಾಲೆಗಳಲ್ಲಿಯೇ ಕೆಪಿಎಸ್‌ ಶಾಲೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಂತ ಹಂತವಾಗಿ ಸೌಕರ್ಯ ಹೆಚ್ಚಿಸಲಾಗುತ್ತದೆ
ಸುರೇಶಗೌಡ, ಡಿಡಿಪಿಐ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.