ADVERTISEMENT

ಬೀದರ್‌ನ ಕರ್ನಾಟಕ ಪಶು ವಿವಿಯ ಘಟಿಕೋತ್ಸವ ಇಂದು:16 ಚಿನ್ನದ ಪದಕಗಳ ‘ಖುಷಿ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಫೆಬ್ರುವರಿ 2026, 20:04 IST
Last Updated 26 ಫೆಬ್ರುವರಿ 2026, 20:04 IST
ಖುಷಿ
ಖುಷಿ   

ಬೀದರ್‌: ಉಡುಪಿಯ ಮಂದಾರ್ತಿ ಗ್ರಾಮದ ಖುಷಿ ಅವರು ‘ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌ ಅಂಡ್‌ ಅನಿಮಲ್‌ ಹಸ್ಬೆಂಡರಿ ’ (ಬಿವಿಎಸ್‌ಸಿ ಆ್ಯಂಡ್‌ ಎಎಚ್‌) ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ. 

ಬೀದರ್‌ನಲ್ಲಿ ಶುಕ್ರವಾರ (ಫೆ.27) ಬೆಳಿಗ್ಗೆ 11ಕ್ಕೆ ನಡೆಯಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಖುಷಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023–24ನೇ ಬ್ಯಾಚ್‌ನ ದ್ಯಾರ್ಥಿನಿ ಖುಷಿ, ಚಿನ್ನದ ಪದಕ ಪಡೆಯುವ ಗುರಿಯೊಂದಿಗೆ ಕಷ್ಟಪಟ್ಟು ಓದಿದವರು. ‘ಆದರೆ, 16 ಚಿನ್ನದ ಪದಕಗಳು ಒಲಿದು ಬರುತ್ತವೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ‘ಖುಷಿ’ ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ‘ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ADVERTISEMENT

ಖುಷಿ ಅವರು ಪಿಯು ವಿಜ್ಞಾನದಲ್ಲಿ ಶೇ 98ರಷ್ಟು ಅಂಕ ಗಳಿಸಿ ರಾಜ್ಯಕ್ಕೇ 6ನೇ ರ್‍ಯಾಂಕ್‌ ಬಂದಿದ್ದರು. ವಿಶೇಷವೆಂದರೆ ಎಸ್‌ಎಸ್‌ಎಲ್‌ಸಿಯಲ್ಲೂ ಇಷ್ಟೇ ಅಂಕ ಪಡೆದಿದ್ದರು. 

‘ಕಾಲೇಜಿನಲ್ಲಿ ಪ್ರಾಧ್ಯಾಪಕರ ಉತ್ತಮ ಪಾಠ, ಮನೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದ್ದರಿಂದ ನಿತ್ಯ ಆರೇಳು ತಾಸು ಓದುತ್ತಿದ್ದೆ. ಭವಿಷ್ಯದಲ್ಲಿ ಐಎಎಸ್‌ ಮಾಡಿ, ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದೆ’ ಎಂದು ಹೇಳಿದರು.

ಅಂದ ಹಾಗೆ, ಖುಷಿ ಅವರ ತಂದೆ ದುಬೈನಲ್ಲಿ ಬಿಸಿನೆಸ್‌ ಸೂಪರ್‌ವೈಸರ್‌ ಆಗಿದ್ದಾರೆ. ತಾಯಿ ಗೃಹಿಣಿ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಉಡುಪಿಯ ಬಾರ್ಕೂರಿನಲ್ಲಿ, ಆನಂತರ ಉಡುಪಿಯ ವಿದ್ಯೋದಯ ಕಾಲೇಜಿನಲ್ಲಿ ಪಿಯು ಮುಗಿಸಿ, ಬಳಿಕ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನಲ್ಲಿ ಬಿವಿಎಸ್‌ಸಿ ಆ್ಯಂಡ್‌ ಎಎಚ್‌ ಕೋರ್ಸ್‌ ಸೇರಿದರು.

ನಾನು ಮೊಬೈಲ್‌ ಕಡಿಮೆ ಬಳಸುತ್ತೇನೆ. ಪುಸ್ತಕಗಳೇ ನನ್ನ ಸಂಗಾತಿ. ಮೊಬೈಲ್‌ನಿಂದ ಸಾಧ್ಯವಾದಷ್ಟು ದೂರವಿದ್ದು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಂಡರೆ ಅದು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ
ಖುಷಿ , ವಿದ್ಯಾರ್ಥಿನಿ
ಇಬ್ಬರಿಗೆ ತಲಾ 6 ಒಬ್ಬರಿಗೆ 4 ಚಿನ್ನದ ಪದಕ 
2024–25ನೇ ಸಾಲಿನಲ್ಲಿ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ ಬಿ.ಟೆಕ್‌ (ಹೈನು ತಂತ್ರಜ್ಞಾನ) ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್‌. ಮತ್ತು  2023–24ನೇ ಸಾಲಿನಲ್ಲಿಎಂವಿಎಸ್‌ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ  ವಿಜಯಕುಮಾರ್‌ ಎಂ.ಸಿ. ಅವರಿಗೆ ತಲಾ 6 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ. ಇವರಿಬ್ಬರು ಕ್ರಮವಾಗಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳಂಬೆಳ್ಳ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿಯವರು. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದ ದೇವರಾಜ್‌ ಅವರು 2023–24ನೇ ಸಾಲಿನ ಬಿವಿಎಸ್‌ಸಿ ಆ್ಯಂಡ್‌ ಎಎಚ್‌ ಕೋರ್ಸ್‌ನಲ್ಲಿ 4 ಚಿನ್ನದ ಪದಕ ಪಡೆದಿದ್ದಾರೆ. ಇವರು ಬೀದರ್‌ ಪಶು ವಿವಿಯಲ್ಲಿ ಓದಿದ್ದಾರೆ.