ADVERTISEMENT

ಜನಿವಾರ ಕಳಚಿ ಪರೀಕ್ಷೆ ಬರೆಯಲು ತಾಕೀತು; ಮನನೊಂದು ಮನೆಗೆ ಹಿಂತಿರುಗಿದ ವಿದ್ಯಾರ್ಥಿ

ತಪ್ಪಿದ ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 5:19 IST
Last Updated 18 ಏಪ್ರಿಲ್ 2025, 5:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀದರ್‌: ಜನಿವಾರ ಕಳಚಿಟ್ಟರಷ್ಟೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ತಾಕೀತು ಮಾಡಿದ್ದರಿಂದ ಮನನೊಂದ ವಿದ್ಯಾರ್ಥಿ ಪರೀಕ್ಷೆ ಬರೆಯದೇ ಮನೆಗೆ ಹಿಂತಿರುಗಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ನಗರದ ಚೌಬಾರ ನಿವಾಸಿ ಸುಚಿವ್ರತ್‌ ಅವರು ಬೆಳಿಗ್ಗೆ ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಗುಂಪಾ ಸಮೀಪದ ಸಾಯಿ ಸ್ಫೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು. ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿದ ಸಿಬ್ಬಂದಿ, ಸುಚಿವ್ರತ್‌ ಅವರಿಗೆ ಜನಿವಾರ ಕಳಚಿಟ್ಟು ಪರೀಕ್ಷಾ ಕೇಂದ್ರದೊಳಗೆ ಹೋಗಬೇಕೆಂದು ತಿಳಿಸಿದ್ದಾರೆ. ‘ಜನಿವಾರ ಪರಿಶೀಲಿಸಿ, ಇದರಲ್ಲಿ ಅಕ್ರಮ ಎಸಗುವ ಯಾವುದೇ ವಸ್ತುವಿಲ್ಲ. ಅದನ್ನು ತೆಗೆದಿಡಲು ಆಗುವುದಿಲ್ಲ’ ಎಂದು ಸುಚಿವ್ರತ್‌ ಹೇಳಿದ್ದಾರೆ. ಆದರೆ, ಅದಕ್ಕೆ ಸಿಬ್ಬಂದಿ ಕಿವಿಗೊಟ್ಟಿಲ್ಲ. ‘ಜನಿವಾರದ ಧಾರದಿಂದ ನೀವು ಏನಾದರೂ ಮಾಡಿಕೊಂಡರೆ ಯಾರು ಹೊಣೆಗಾರರು. ಅದನ್ನು ತೆಗೆದಿಟ್ಟು ಒಳಗೆ ಹೋಗಿ, ಇಲ್ಲವಾದರೆ ಇಲ್ಲಿಂದ ನಿರ್ಗಮಿಸಬೇಕು’ ಎಂದು ಸಿಬ್ಬಂದಿ ಹಾಗೂ ಪೊಲೀಸರು ಸೂಚಿಸಿದ್ದಾರೆ. ಇದರಿಂದ ತೀವ್ರ ಬೇಸರಗೊಂಡು ಗಣಿತ ವಿಷಯದ ಪರೀಕ್ಷೆ ಬರೆಯದೇ ಮನೆಗೆ ಹಿಂತಿರುಗಿದ್ದಾರೆ.

ADVERTISEMENT

ಸುಚಿವ್ರತ್‌ ಅವರು ಸಾಯಿಸ್ಫೂರ್ತಿ ಕಾಲೇಜಿನಲ್ಲೇ ಬುಧವಾರ (ಏ.16) ಬೆಳಿಗ್ಗೆ ಹಾಗೂ ಮಧ್ಯಾಹ್ನ ಕ್ರಮವಾಗಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪರೀಕ್ಷೆಯನ್ನು ಜನಿವಾರ ಧರಿಸಿಕೊಂಡೇ ಬರೆದಿದ್ದರು. ಆಗ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರ ಧರಿಸಿದ್ದಕ್ಕೆ ಆಕ್ಷೇಪಿಸಿರಲಿಲ್ಲ. ಆದರೆ, ಗುರುವಾರ (ಏ.17) ಬೆಳಿಗ್ಗೆ ನಡೆದ ಗಣಿತ ವಿಷಯದ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಸಿಬ್ಬಂದಿಯ ಪ್ರಮಾದಕ್ಕೆ ಸುಚಿವ್ರತ್ ಅವರ ತಾಯಿ, ಪ್ರಾಧ್ಯಾಪಕಿ ನೀತಾ ಕುಲಕರ್ಣಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬೆಳಿಗ್ಗೆ 10.30ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ನನ್ನ ಮಗ 15 ನಿಮಿಷ ಮುಂಚೆಯೇ ಕೇಂದ್ರಕ್ಕೆ ಹೋಗಿದ್ದ. ಘಟನೆ ನಡೆದ ನಂತರ ವಿಷಯ ತಿಳಿಸಲು ನನಗೆ ಹಲವು ಸಲ ಕರೆ ಮಾಡಿದ್ದ. ನಾನು ಬೇರೊಂದು ಊರಿನಲ್ಲಿ ದೇವಸ್ಥಾನದಲ್ಲಿ ಇದ್ದ ಕಾರಣ ಕರೆ ಸ್ವೀಕರಿಸಲು ಆಗಿರಲಿಲ್ಲ’ ಎಂದು ನೀತಾ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ದೇವಸ್ಥಾನದಿಂದ ಹೊರಬಂದಾಗ ಮೊಬೈಲ್‌ನಲ್ಲಿದ್ದ ಮಿಸ್ಡ್‌ ಕಾಲ್‌ ನೋಡಿ ಮಗನೊಂದಿಗೆ ಮಾತನಾಡಿದಾಗ ವಿಷಯ ಗಮನಕ್ಕೆ ಬಂದಿದೆ. 11.15ರಿಂದ 11.30ರ ನಡುವೆ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿ ಮಾತನಾಡಿದೆ. ನಮ್ಮವರಿಂದ ಪ್ರಮಾದವಾಗಿದೆ. ಪರೀಕ್ಷೆಗೆ ಮಗನನ್ನು ಕಳಿಸಿಕೊಡಿ ಎಂದು ಹೇಳಿದ್ದಾರೆ. ಅಷ್ಟರಲ್ಲಾಗಲೇ ಒಂದು ಗಂಟೆ ಕಳೆದು ಹೋಗಿತ್ತು. ಪರೀಕ್ಷೆ ಬರೆದರೂ ಏನೂ ಪ್ರಯೋಜನವಿಲ್ಲ ಎಂದು ಮಗನನ್ನು ಕಳಿಸಲಿಲ್ಲ. ಆದರೆ, ಮಧ್ಯಾಹ್ನ ನಿಗದಿಯಾಗಿದ್ದ ಜೀವಶಾಸ್ತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಮೊದಲ ದಿನ ನಡೆದ ಎರಡು ವಿಷಯದ ಪರೀಕ್ಷೆಗಳನ್ನು ಜನಿವಾರ ಧರಿಸಿಕೊಂಡೇ ನನ್ನ ಮಗ ಬರೆದಿದ್ದ. ಆಗ ಯಾರೂ ಆಕ್ಷೇಪ ಎತ್ತಿರಲಿಲ್ಲ. ಆದರೆ, ಎರಡನೇ ದಿನ ಅದನ್ನು ತೆಗೆದು ಹೋಗಬೇಕೆಂದು ಹೇಳಿದ್ದರಿಂದ ಅವನಿಗೆ ತೀವ್ರ ಆಘಾತವಾಗಿದೆ. ನೊಂದುಕೊಂಡಿದ್ದಾನೆ. ಆತನಿಗೆ ಒಂದು ವಿಷಯದ ಪರೀಕ್ಷೆ ಬರೆಯಲು ಆಗಿಲ್ಲ. ಒಂದು ವರ್ಷದ ಶ್ರಮ ವ್ಯರ್ಥವಾಗಿದೆ. ಆತನ ಉನ್ನತ ಶಿಕ್ಷಣಕ್ಕೆ ತೀವ್ರ ಹಿನ್ನಡೆಯಾಗಿದೆ. ಆತನ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆ ಆಗದಂತೆ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.