
ಬೀದರ್: ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಬಂತೆಂದರೆ ಜಿಲ್ಲೆಯ ಹುಮನಾಬಾದ್, ಚಿಟಗುಪ್ಪ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆಕಾಶದಲ್ಲೆಲ್ಲಾ ಗಾಳಿಪಟಗಳೇ ಕಾಣಿಸುತ್ತವೆ. ಆದರೆ, ಈ ವರ್ಷ ಸೂತಕದ ವಾತಾವರಣ ನಿರ್ಮಾಣಗೊಂಡಿದೆ.
ಬುಧವಾರ (ಜ.14) ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇತುವೆಯಿಂದ ಸಂಜುಕುಮಾರ್ ಗುಂಡಪ್ಪ ಹೊಸಮನಿ (49) ಎಂಬುವರು ಬೈಕ್ ಮೇಲೆ ಹಾದು ಹೋಗುವಾಗ ಅವರ ಕತ್ತಿಗೆ ಗಾಳಿಪಟದ ಮಾಂಜ ಸಿಲುಕಿ, ಛೇದಿಸಿದೆ. ಇದರಿಂದ ಅವರು ಕೆಳಗೆ ಕುಸಿದು ಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿ ನರಳಾಡುತ್ತ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರದಾಡಿದವು. ಬಳಿಕ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಕಟಗೊಂಡ ನಂತರ ಹಬ್ಬದ ಸಂಭ್ರಮ ಕೆಲವೇ ನಿಮಿಷಗಳಲ್ಲಿ ದೂರವಾಯಿತು.
ಸಂಕ್ರಾಂತಿ ಹಬ್ಬ ಇರುವುದರಿಂದ ಹುಮನಾಬಾದ್‌ನ ವಸತಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನು ಮನೆಗೆ ಕರೆತರಲು ಸಂಜುಕುಮಾರ್ ಅವರು ಬೈಕ್ ಮೇಲೆ ಹೊರಟಿದ್ದರು. ಅವರ ಮನೆಯವರು ಇವರ ನಿರೀಕ್ಷೆಯಲ್ಲಿದ್ದರು. ಎಲ್ಲರೂ ಕೂಡಿಕೊಂಡು ಹಬ್ಬ ಆಚರಿಸಲು ಯೋಜಿಸಿದ್ದರು. ಆದರೆ, ವಿಧಿಯಾಟವೇ ಬೇರೆ ಆಗಿತ್ತು.
ಹಾರಾಡದ ಗಾಳಿಪಟ:
ಸಂಕ್ರಾಂತಿ ಹಬ್ಬಕ್ಕೂ ವಾರದ ಮೊದಲೇ ಹುಮನಾಬಾದ್, ಚಿಟಗುಪ್ಪ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಗಾಳಿಪಟ ಹಾರಿಸುತ್ತಾರೆ. ಹಬ್ಬದ ಎರಡು ದಿನಗಳಂದು ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಪಟ ಹಾರಿಸುವುದು ಸಂಪ್ರದಾಯ. ಮನೆಯ ಮೇಲೆ ಶಾಮಿಯಾನ ಹಾಕಿ, ಬಾಜಾ ಭಜಂತ್ರಿ ಬಾರಿಸುತ್ತ ಪತಂಗ ಹಾರಿಸುತ್ತಾರೆ. ಕಳೆದ ಎರಡ್ಮೂರು ದಿನಗಳಿಂದ ಜನ ಎಂದಿನಂತೆ ಗಾಳಿಪಟಗಳನ್ನು ಹಾರಿಸಿದ್ದಾರೆ. ಹಬ್ಬದ ದಿನ ಹೆಚ್ಚಿನವರು ಹಾರಿಸಲು ಸಿದ್ಧತೆ ನಡೆಸಿದ್ದರು. ಆದರೆ, ತಾಳಮಡಗಿಯಲ್ಲಿ ನಡೆದ ಘಟನೆಯಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಗಾಳಿಪಟದ ಮಾಂಜದಿಂದ ವ್ಯಕ್ತಿಯೊಬ್ಬರ ಜೀವ ಹೋಗಬಹುದು ಎಂದರಿತು, ಹೆಚ್ಚಿನವರು ಪಟ ಹಾರಿಸಲು ಧೈರ್ಯ ತೋರಲಿಲ್ಲ. ಹೀಗಾಗಿ ಆಕಾಶದಲ್ಲಿ ಹೆಚ್ಚಾಗಿ ಗಾಳಿಪಟಗಳು ಕಾಣಿಸಲಿಲ್ಲ.
ಘಟನೆಯ ನಂತರ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಡಂಗುರ, ಧ್ವನಿವರ್ಧಕಗಳ ಮೂಲಕ ಮಾಂಜ ಬಳಸದಂತೆ ಎಚ್ಚರಿಕೆ ನೀಡಲಾಯಿತು. ಪೊಲೀಸರು ಕೂಡ ಗಸ್ತು ತಿರುಗಿ ತಿಳಿ ಹೇಳಿದರು. ಇದರ ಪರಿಣಾಮ ಮಾಂಜ ಅಷ್ಟೇ ಅಲ್ಲ, ಸಾಮಾನ್ಯ ದಾರದಿಂದಲೂ ಜನ ಗಾಳಿಪಟ ಹಾರಿಸಲು ಮುಂದಾಗಲಿಲ್ಲ.
ಮೂರು ಮಳಿಗೆ ಜಪ್ತಿ
ಚಿಟಗುಪ್ಪದ ತಾಳಮಡಗಿಯಲ್ಲಿ ಬೀದರ್ ತಾಲ್ಲೂಕಿನ ಬಂಬುಳಗಿ ಗ್ರಾಮದ ಸಂಜುಕುಮಾರ ಗುಂಡಪ್ಪ ಹೊಸಮನಿ ಅವರ ಕುತ್ತಿಗೆಗೆ ಮಾಂಜ ಸಿಲುಕಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಜಿಲ್ಲಾ ಪೊಲೀಸರು ಬೀದರ್ ನಗರದ ಮೂರು ಮಾಂಜ ಮಳಿಗೆಗಳನ್ನು ಬುಧವಾರ ಜಪ್ತಿ ಮಾಡಿದ್ದಾರೆ. ‘ವೈರ್ ಮಾಂಜ ಬಳಸುವುದರ ಮೇಲೆ ನಿಷೇಧ ಹೇರಲಾಗಿದೆ. ಯಾರು ಕೂಡ ಅದನ್ನು ಮಾರಾಟ ಮಾಡಬಾರದು. ಗಾಳಿಪಟ ಹಾರಿಸುವವರು ಬಳಸಬಾರದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
‘ಸಾಮಾನ್ಯ ದಾರ ಬಳಸಿ’
ಮಾಂಜ ವೈರ್ ಬಳಕೆಯಿಂದ ಜನ ಜಾನುವಾರು ಹಾಗೂ ಪಕ್ಷಿಗಳಿಗೆ ಅಪಾಯ ಇದೆ. ಆದಕಾರಣ ಯಾರೂ ಅದನ್ನು ಉಪಯೋಗಿಸಬಾರದು. ಸಾಮಾನ್ಯ ದಾರ ಉಪಯೋಗಿಸಿ ಜನರು ಗಾಳಿಪಟ ಹಾರಿಸಿ ಹಬ್ಬ ಆಚರಿಸಬೇಕೆಂದು ಹುಮನಾಬಾದ್ ತಹಶೀಲ್ದಾರ್ ಅಂಜುಂ ತಬಸ್ಸುಮ್ ತಿಳಿಸಿದ್ದಾರೆ.
ಅಪಾಯವಿದ್ದರೂ ಎಗ್ಗಿಲ್ಲದೇ ಮಾರಾಟ
ಗಾಜು ಪುಡಿ ಮಾಡಿ ಅರಿಶಿಣ ಅಥವಾ ಇತರೆ ರಾಸಾಯನಿಕ ಪದಾರ್ಥದೊಂದಿಗೆ ಸೇರಿಸಿ ನೈಲಾನ್ ದಾರ ಅಥವಾ ತೆಳುವಾದ ವೈರ್‌ಗೆ ಬಣ್ಣ ಸವರಿ ಮಾಂಜ ತಯಾರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆ ಧಾರ ಬಹಳ ಹರಿತವಾಗುತ್ತದೆ. ಪರಸ್ಪರ ಒಬ್ಬರನೊಬ್ಬರ ಗಾಳಿಪಟ ಕತ್ತರಿಸಲು ಇದನ್ನು ಉಪಯೋಗಿಸುತ್ತಾರೆ. ಆದರೆ ಇದರಿಂದ ಮನುಷ್ಯರು ಜಾನುವಾರುಗಳು ಹಾಗೂ ಪಕ್ಷಿಗಳಿಗೆ ಬಹಳ ಅಪಾಯ ಇದೆ. ಈ ಕಾರಣಕ್ಕಾಗಿಯೇ ಇದರ ಬಳಕೆಯ ಮೇಲೆ ನಿಷೇಧ ಹೇರಲಾಗುತ್ತದೆ. ಈ ಸಲವೂ ನಿಷೇಧಿಸಲಾಗಿತ್ತು. ಆದರೂ ಕೂಡ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ. ಮತ್ತೆ ಕೆಲವರು ಮನೆಯಲ್ಲಿಯೇ ಇದನ್ನು ತಯಾರಿಸಿ ಗಾಳಿಪಟ ಹಾರಿಸುತ್ತಾರೆ. ಈ ಕಾರಣದಿಂದ ಇದನ್ನು ನಿಯಂತ್ರಿಸುವುದು ಆಡಳಿತಕ್ಕೆ ಕಷ್ಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.