ADVERTISEMENT

ಜಾಂಬೊರೇಟ್‌ ರಂಗು ಹೆಚ್ಚಿಸಿದ ಚಿಣ್ಣರು

3,500 ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು, ರೋವರ್ಸ್‌, ರೇಂಜರ್ಸ್‌ಗಳಿಂದ ಶಿಸ್ತಿನ ನಡಿಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:07 IST
Last Updated 8 ಫೆಬ್ರುವರಿ 2024, 13:07 IST
ಸ್ಕೌಟ್ಸ್‌ ರಾಜ್ಯ ಆಯುಕ್ತ ಎಂ.ಎ. ಖಾಲಿದ್‌ ಅವರು ಜಾಂಬೊರೇಟ್‌ ಜಾಥಾಕ್ಕೆ ಹಸಿರು ನಿಶಾನೆ ತೋರಿದರು
ಸ್ಕೌಟ್ಸ್‌ ರಾಜ್ಯ ಆಯುಕ್ತ ಎಂ.ಎ. ಖಾಲಿದ್‌ ಅವರು ಜಾಂಬೊರೇಟ್‌ ಜಾಥಾಕ್ಕೆ ಹಸಿರು ನಿಶಾನೆ ತೋರಿದರು   

ಬೀದರ್‌: ಕಲ್ಯಾಣ ಕರ್ನಾಟಕ ವಿಭಾಗದ ಮೊದಲ ಜಾಂಬೊರೇಟ್‌ಗೆ ಗುರುವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಜಾಥಾದೊಂದಿಗೆ ಜಾಂಬೊರೇಟ್‌ಗೆ ವಿದ್ಯುಕ್ತ ಚಾಲನೆ ದೊರೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಸ್ಕೌಟ್ಸ್‌ ರಾಜ್ಯ ಆಯುಕ್ತ ಎಂ.ಎ. ಖಾಲಿದ್‌ ಅವರು ಹಸಿರು ನಿಶಾನೆ ತೋರಿದರು.

ಕಲ್ಯಾಣ ಕರ್ನಾಟಕ ಭಾಗದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ 3,500 ವಿದ್ಯಾರ್ಥಿಗಳು ಜಾಥಾದಲ್ಲಿ ಹೆಜ್ಜೆ ಹಾಕಿ ಜಾಂಬೊರೇಟ್‌ಗೆ ರಂಗು ಹೆಚ್ಚಿಸಿದರು.

ADVERTISEMENT

ಸ್ಕಾಟ್ಸ್‌ ಮತ್ತು ಗೈಡ್ಸ್‌, ರೋವರ್ಸ್‌, ರೇಂಜರ್ಸ್‌ಗಳು ಶಿಸ್ತಿನಿಂದ ಜಾಥಾದಲ್ಲಿ ಪಾಲ್ಗೊಂಡಿದ್ದರು. ಆಯಾ ಜಿಲ್ಲೆಗಳವರು ಅವರ ಜಿಲ್ಲೆಯ ಹೆಸರಿನ ನಾಮಫಲಕ ಹಿಡಿದುಕೊಂಡು, ‘ಭಾರತ್‌ ಮಾತಾ ಕೀ ಜೈ’, ‘ಜಾಂಬೊರೇಟ್‌ಗೆ ಜೈ’ ಎಂದು ಘೋಷಣೆಗಳನ್ನು ಕೂಗುತ್ತ ಉತ್ಸಾಹದಿಂದ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ನಗರದ ನೆಹರೂ ಕ್ರೀಡಾಂಗಣದಿಂದ ಆರಂಭಗೊಂಡ ಜಾಥಾ ಹಳೆ ಬಸ್‌ ನಿಲ್ದಾಣ, ಛತ್ರಪತಿ ಶಿವಾಜಿ ಮಹಾರಾಜ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಭಗತ್‌ ಸಿಂಗ್‌ ವೃತ್ತದ ಮೂಲಕ ಹಾದು ಬಸವೇಶ್ವರ ವೃತ್ತದಲ್ಲಿ ಕೊನೆಗೊಂಡಿತು. ಬಳಿಕ ಮಕ್ಕಳನ್ನು ಶಹಾಪುರ ಗೇಟ್‌ ಸಮೀಪದ ಶಾಹೀನ್‌ ಪಿಯು ವಿಜ್ಞಾನ ಕಾಲೇಜಿನ ಆವರಣದಲ್ಲಿ ಸಂಘಟಿಸಿರುವ ಕಾರ್ಯಕ್ರಮದ ಸ್ಥಳಕ್ಕೆ ವಾಹನದಲ್ಲಿ ಕರೆದೊಯ್ಯಲಾಯಿತು.

3,500 ಮಕ್ಕಳು ಜಾಥಾದಲ್ಲಿ ಹೆಜ್ಜೆ ಹಾಕಿದ್ದರಿಂದ ಅದು ಹಾದು ಹೋದ ಮಾರ್ಗದಲ್ಲಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜಾಥಾ ಹಾದು ಹೋಗುವ ದಾರಿಯಲ್ಲಿ ಸಂಚಾರ ಹಾಗೂ ಸಿವಿಲ್‌ ಪೊಲೀಸರು ಬಂದೋಬಸ್ತ್‌ ಮಾಡಿದ್ದರು.

ಏಳು ಜಿಲ್ಲೆಗಳ ಮಕ್ಕಳು ಬುಧವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದರು. ಅವರಿಗೆ ಶಾಹೀನ್‌ ಕಾಲೇಜು ಆವರಣದಲ್ಲಿ 175 ಟೆಂಟ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಲೇಜು ವಸತಿ ಗೃಹ, ಸಭಾಂಗಣ ಮತ್ತು ಮುಂಭಾಗದ ಟೆಂಟ್‌ಗಳಲ್ಲಿ ಬಾಲಕಿಯರ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಊಟ, ಉಪಾಹಾರ, ಪ್ರಥಮ ಚಿಕಿತ್ಸೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ.

ಐದು ದಿನಗಳ ಅವಧಿಯ ಜಾಂಬೊರೇಟ್‍ನಲ್ಲಿ ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 8ರ ವರೆಗೆ ಸಾಹಸಮಯ, ಸಾಂಸ್ಕೃತಿಕ ಚಟುವಟಿಕೆಗಳು, ಯೋಗ, ಧ್ಯಾನ, ಪಥ ಸಂಚಲನ, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಜಿಲ್ಲೆಯ ಜಾತ್ರೆಗಳ ಸನ್ನಿವೇಶ ಪ್ರದರ್ಶನ, ಜಿಲ್ಲಾ ವೈಭವ, ದೈಹಿಕ ಶಿಕ್ಷಣ, ‘ಲೋಕಲ್ ಟ್ಯಾಲೆಂಟ್ ಶೋ’ ಸೇರಿದಂತೆ ಹಲವಾರು ಚಟುವಟಿಕೆಗಳು ನಡೆಯಲಿವೆ.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಬೀದರ್ ಜಿಲ್ಲಾ ಘಟಕದ ಉಪಾಧ್ಯಕ್ಷರೂ ಆದ ಜಾಂಬೊರೇಟ್ ಮುಖ್ಯಸ್ಥ ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್, ಎಫ್‌ಪಿಎಐ ಬೀದರ್ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ, ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಪತ್ರಕರ್ತ ಬಸವರಾಜ ಪವಾರ, ಜಾಂಬೊರೇಟ್‌ ಉಸ್ತುವಾರಿ ಮಲ್ಲೇಶ್ವರಿ ಜುಜಾರೆ, ಬಾಬುರಾವ್ ನಿಂಬೂರೆ, ಅನಿಲ್ ಶಾಸ್ತ್ರಿ, ಜಯಶೀಲಾ, ರಮೇಶ ತಿಬಶೆಟ್ಟಿ, ರಾಚಯ್ಯ ನಾಶಿ, ನಾಗರತ್ನ, ಕಲ್ಯಾಣರಾವ ಚಳಕಾಪೂರೆ, ಚಂದ್ರಕಾಂತ ಬೆಳಕುಣಿ ಮತ್ತಿತರರು ಹಾಜರಿದ್ದರು.

ಜಾಂಬೊರೇಟ್‌ ಜಾಥಾದಲ್ಲಿ ಗಮನ ಸೆಳೆದ ಬ್ಯಾಂಡ್‌ ತಂಡ
ಜಾಂಬೊರೇಟ್‌ ಜಾಥಾದಲ್ಲಿ ಹೆಜ್ಜೆ ಹಾಕಿದ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು
ಜಾಂಬೊರೇಟ್‌ನಲ್ಲಿ ಹೆಜ್ಜೆ ಹಾಕಿದ ಹಿರಿಯ ಸ್ಕೌಟರ್‌

‘ವ್ಯಕ್ತಿತ್ವ ವಿಕಾಸಕ್ಕೆ ಮಹತ್ವದ ಪಾತ್ರ’

‘ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮಹತ್ವದ ಪಾತ್ರ ವಹಿಸುತ್ತದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿದ್ದವರು ಐಎಎಸ್‌ ಐಪಿಎಸ್‌ ಎಂಜಿನಿಯರ್‌ ಡಾಕ್ಟರ್‌ ಸೇರಿದಂತೆ ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಸ್ತು ಸಂಯಮ ಕಲಿಸುತ್ತದೆ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹೇಳಿದರು. ನಾವೇ ಜೀವನದಲ್ಲಿ ಏನೇ ಆಗಿದ್ದರೂ ಸಮಾಜಕ್ಕಾಗಿ ಸ್ವಲ್ಪ ಸಮಯ ಮೀಸಲಿಡಬೇಕು. ಮಾನವ ಸಂಪನ್ಮೂಲದ ಸಮರ್ಪಕ ಬಳಕೆಯಾಗಬೇಕು. ಹೀಗಾದಾಗ ಮಾತ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕಾಣಲು ಸಾಧ್ಯ. ಬೀದರ್‌ ಜಿಲ್ಲೆ ಈಗ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಬೀದರ್‌ನಲ್ಲಿ ಜಾಂಬೊರೇಟ್‌ ಆಯೋಜನೆಗೆ ಅಬ್ದುಲ್‌ ಖದೀರ್‌ ಗುರಮ್ಮಾ ಸಿದ್ದರೆಡ್ಡಿ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.